ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೋಕೋವಿಚ್ ಅವರು ಯಾನ್ನಿಕ್ ಸಿನ್ನರ್ ವಿರುದ್ಧ ಸೋತು 25ನೇ ಗ್ರ್ಯಾನ್‌ಸ್ಲಾಂ ಕನಸಿನಿಂದ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಅಲೆಕ್ಸಾಂಡರ್‌ ಜ್ವೆರೆವ್‌ ಫೈನಲ್‌ ಪ್ರವೇಶಿಸಿದ್ದು, ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮುಕೋವಾ ಮತ್ತು ನೊಸ್ಕೊವಾ ಚೊಚ್ಚಲ ಟ್ರೋಫಿಗಾಗಿ ಸೆಣಸಲಿದ್ದಾರೆ.

ಲಂಡನ್: 25ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಸರ್ಬಿಯಾದ ಜೋಕೋವಿಚ್ ಅವರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂಬರ್ 01 ಯಾನ್ನಿಕ್ ಸಿನ್ನರ್ ವಿರುದ್ದ ಜೋಕೋ 4-6, 4-6, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ವಿಂಬಲ್ಡನ್‌ನಲ್ಲಿ 8ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ಜೋಕೋ ನಿರಾಸೆ ಅನುಭವಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಸತತ 2ನೇ ಗ್ರ್ಯಾನ್‌ಸ್ಲಾಂ ಫೈನಲ್‌ ಪ್ರವೇಶಿಸಿದ್ದಾರೆ.

ಜ್ವೆರೆವ್-ಸಿನ್ನರ್ ಫೈನಲ್ ಫೈಟ್

ಶುಕ್ರವಾರ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯ ಸೆಮಿಫೈನಲ್‌ನಲ್ಲಿ ಜ್ವೆರೆವ್‌ಗೆ ಬ್ರಿಟನ್‌ನ ಆರ್ಥರ್‌ ಫೆರಿ ವಿರುದ್ಧ 7-6(7-0), 6-2, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ವೈಲ್ಡ್‌ ಕಾರ್ಡ್‌ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ 23 ವರ್ಷದ ಫೆರಿ, ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೇರಿದ್ದರು. ಆದರೆ ಸೆಮೀಸ್‌ನಲ್ಲಿ 29 ವರ್ಷದ ಜ್ವೆರೆವ್‌ ವಿರುದ್ಧ ಗೆಲ್ಲಲಾಗಲಿಲ್ಲ. ಜ್ವೆರೆವ್‌ ಎಲ್ಲಾ 4 ಗ್ರ್ಯಾನ್‌ಸ್ಲಾಂನಲ್ಲೂ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಅಲ್ಲದೆ, 1995ರ ಬಳಿಕ ವಿಂಬಲ್ಡನ್‌ನಲ್ಲಿ ಫೈನಲ್‌ಗೇರಿದ ಮೊದಲ ಜರ್ಮನಿ ಆಟಗಾರ ಎನಿಸಿಕೊಂಡರು. 1995ರಲ್ಲಿ ಬೋರಿಸ್ ಬೆಕರ್‌ ಫೈನಲ್‌ಗೇರಿ, ಪೀಟ್‌ ಸ್ಯಾಂಪ್ರಸ್‌ ವಿರುದ್ಧ ಸೋತಿದ್ದರು.

ಮಹಿಳಾ ಫೈನಲ್‌ನಲ್ಲಿಂದು ಮುಕೋವಾ-ನೊಸ್ಕೊವಾ

ಮಹಿಳಾ ಸಿಂಗಲ್ಸ್‌ ಫೈನಲ್‌ ಶನಿವಾರ ನಡೆಯಲಿದ್ದು, ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಹಾಗೂ ಲಿಂಡಾ ನೊಸ್ಕೊವಾ ಸೆಣಸಾಡಲಿದ್ದಾರೆ. ಯಾರೇ ಗೆದ್ದರೂ ಇದು ಚೊಚ್ಚಲ ಗ್ರ್ಯಾನ್‌ಸ್ಲಾಂ ಟ್ರೋಫಿ ಆಗಿರಲಿದೆ. ಮುಕೋವಾ ಅವರು ಸೆಮೀಸ್‌ನಲ್ಲಿ ಅಮೆರಿಕದ ಕೊಕೊ ಗಾಫ್‌ ವಿರುದ್ಧ ಗೆದ್ದಿದ್ದರು. ಅವರಿಗೆ ಇದು 2ನೇ ಗ್ರ್ಯಾನ್‌ಸ್ಲಾಂ ಫೈನಲ್‌. ಈ ಹಿಂದೆ 2023ರಲ್ಲಿ ಫ್ರೆಂಚ್‌ ಓಪನ್‌ ಫೈನಲ್‌ಗೇರಿದ್ದರು. ಇನ್ನು, ನೊಸ್ಕೊವಾ ಅವರು ಸೆಮೀಸ್‌ನಲ್ಲಿ ಉಕ್ರೇನ್‌ನ ಮಾರ್ಟಾ ಕೋಸ್ಟ್ಯುಕ್‌ ವಿರುದ್ಧ ಗೆದ್ದಿದ್ದಾರೆ. ಅವರಿಗೆ ಇದು ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌.

ವಿಂಬಲ್ಡನ್‌ನ ರಾಯಲ್‌ ಬಾಕ್ಸ್‌ನಲ್ಲಿ ಕೂತು ಪಂದ್ಯ ವೀಕ್ಷಣೆಗೆ ಗಿಲ್‌ಗೆ ಆಹ್ವಾನ

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಪಂದ್ಯವನ್ನು ಅಲ್ಲಿನ ರಾಯಲ್ಸ್‌ ಬಾಕ್ಸ್‌ನಲ್ಲಿ ಕುಳಿತು ವೀಕ್ಷಿಸಲು ಭಾರತ ಕ್ರಿಕೆಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ಗೆ ಆಹ್ವಾನ ಲಭಿಸಿದೆ. ಇದರೊಂದಿಗೆ ರಾಯಲ್ಸ್‌ ಬಾಕ್ಸ್‌ ಗೌರವಕ್ಕೆ ಪಾತ್ರರಾದ ಭಾರತದ 4ನೇ ನಾಯಕ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಈ ಹಿಂದೆ ಸಚಿನ್‌ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಈ ಅವಕಾಶ ಲಭಿಸಿತ್ತು. ಇನ್ನು, ಗಿಲ್‌ ಯಾವ ಪಂದ್ಯ ವೀಕ್ಷಿಸಲಿದ್ದಾರೆ ಎಂಬುದರ ಬಗ್ಗೆ ಆಯೋಜಕರು ಮಾಹಿತಿ ನೀಡಿಲ್ಲ. ಸದ್ಯ ಅವರು ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ನಲ್ಲೇ ಇದ್ದಾರೆ.