ಭಾರತದ ಹಾಕಿ ತಂಡದ ಕೇಸರಿ ಜರ್ಸಿ ವಿವಾದವು ಮತ್ತೊಂದು ತಿರುವು ಪಡೆದುಕೊಂಡಿದೆ. ಏನದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ನವದೆಹಲಿ: ಭಾರತದ ಹಾಕಿ ತಂಡ ಇತ್ತೀಚೆಗೆ ದೊಡ್ದ ವಿವಾದದಲ್ಲಿ ಸಿಲುಕಿತ್ತು. ಅದಕ್ಕೆ ಕಾರಣ ಟೀಂ ಇಂಡಿಯಾದ ಜೆರ್ಸಿ ಬಣ್ಣ. 2026ರ ಹಾಕಿ ವಿಶ್ವಕಪ್ ಸಮಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ನೀಲಿ ಜೆರ್ಸಿ ಬಣ್ಣವನ್ನು ಇದ್ದಕ್ಕಿದ್ದಂತೆ ಕಿತ್ತಳೆ ಅಂದರೆ ಕೇಸರಿ ಬಣ್ಣಕ್ಕೆ ಬದಲಾಯಿಸಿತ್ತು.

ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ವಿವಾದವು ದೊಡ್ಡ ತಿರುವನ್ನು ಪಡೆದುಕೊಂಡಿದೆ. ಹಾಕಿ ಇಂಡಿಯಾ ತನ್ನ ಡೈರೆಕ್ಟರ್ ಜನರಲ್ ಕಮಾಂಡರ್ ಆರ್.ಕೆ.ಶ್ರೀವಾಸ್ತವ ಅವರ ಎಲ್ಲಾ ಅಧಿಕಾರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ನೀಡಲಾಗಿದೆ.

ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ತಮ್ಮ ವಕೀಲರ ಮೂಲಕ ಶ್ರೀವಾಸ್ತವ ವಿರುದ್ಧ 8 ಗಂಭೀರ ಆರೋಪಗಳನ್ನು ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು, ಆರೋಪಗಳಿಗೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶವನ್ನೂ ನೀಡಲಾಗಿದೆ.

ಶ್ರೀವಾಸ್ತವ ವಿರುದ್ಧದ ಆರೋಪಗಳು ಏನೇನು?

  • ಮೊದಲ ಆರೋಪ ಜೆರ್ಸಿ ಬಣ್ಣ ಬದಲಾವಣೆ ಮಾಡಿರೋದು
  • ಜರ್ಸಿ ಬಣ್ಣ ಬದಲಿಸುವಾಗ ಯಾರೊಂದಿಗೂ ಚರ್ಚೆ ಮಾಡದಿರೋದು
  • ಹಿಂದಿನ ಜರ್ಸಿ ಸಮಸ್ಯೆ ಬಗ್ಗೆ ಯಾವುದೇ ಅಧಿಕೃತ ದಾಖಲೆ ತೊರಿಸದಿರೋದು
  • ತಾವು ತೆಗೆದುಕೊಂಡ ನಿರ್ಣಯದ ಬಗ್ಗೆ ಕೇಳಿದರೂ ಉತ್ತರ ನೀಡದೇ ಇರೋದು

ಇಷ್ಟೆಲ್ಲ ಆರೋಪಗಳ ನಡುವೆ ಅವರಿಗೆ ಯಾವುದೇ ಕಾರಣಕ್ಕೂ ವಿದೇಶಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಅಪ್ಪಣೆ ಹೊರಡಿಸಲಾಗಿತ್ತು. ತಮಗೆ ಬಂದಿರುವ ಆದೇಶವನ್ನು ಗಾಳಿಗೆ ತೂರಿ ಅವರು, ವಿದೇಶ ಪ್ರಯಾಣ ಬೆಳೆಸಿದ್ದರು. ಭಾರತದಲ್ಲಿಯೇ ಇದ್ದುಕೊಂಡು ಇಂಡಿಯಾ ಲೀಗ್‌ ಸಂಬಂಧಿಸಿ ಕೆಲಸ ಮಾಡಬೇಕು ಅಂತಾ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅವರ ಆದೇಶವನ್ನು ಪಾಲಿಸಿಲ್ಲ.

ಇನ್ನು ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಚೆನ್ನಾಗಿ ಇರಲಿಲ್ಲ. ಜರ್ಸಿ ವಿವಾದ ಒಂದು ಕಡೆಯಾದರೆ, ವಿಶ್ವಕಪ್‌ನಲ್ಲಿ ನಿರಾಸದಾಯಕ ಪ್ರದರ್ಶನದೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಶ್ರೀವಾಸ್ತವ್ ಅವರನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.