ಗೂಗಲ್‌ನ ಜೆಮಿನಿ ಎಐ ಸೈಬರ್ ಸೆಕ್ಯುರಿಟಿ ಪರೀಕ್ಷೆಯ ವೇಳೆ ಆಕಸ್ಮಿಕವಾಗಿ ಮೂರು ನೈಜ ಕಂಪನಿಗಳನ್ನು ಹ್ಯಾಕ್ ಮಾಡಿದೆ. ನಕಲಿ ಕಂಪನಿಗಳ ಬದಲು, ಅನಿರೀಕ್ಷಿತವಾಗಿ ಇಂಟರ್ನೆಟ್ ಸಂಪರ್ಕ ಸಿಕ್ಕಿದ್ದರಿಂದ ಈ ಪ್ರಮಾದ ನಡೆದಿದೆ. ಆದರೆ, ಅವು ನೈಜ ಕಂಪನಿಗಳು ಎಂದು ಅರಿವಾದ ತಕ್ಷಣ ಜೆಮಿನಿ ತಾನಾಗಿಯೇ ಹ್ಯಾಕಿಂಗ್ ಪ್ರಕ್ರಿಯೆಯನ್ನು ಅರ್ಧಕ್ಕೇ ನಿಲ್ಲಿಸಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದಂತೆ, ಇದರ ಅನಿರೀಕ್ಷಿತ ನಡವಳಿಕೆಗಳು ಕೆಲವೊಮ್ಮೆ ಆತಂಕ ಹಾಗೂ ಅಚ್ಚರಿಯನ್ನುಂಟು ಮಾಡುತ್ತವೆ. ಇಂಥದ್ದೇ ಒಂದು ಘಟನೆಯಲ್ಲಿ ಗೂಗಲ್‌ನ 'ಜೆಮಿನಿ' (Gemini AI) ಕೃತಕ ಬುದ್ಧಿಮತ್ತೆ ಟೂಲ್‌, ಸೈಬರ್‌ ಸೆಕ್ಯುರಿಟಿ ಪರೀಕ್ಷೆಯ ವೇಳೆ ಮೂರು ನೈಜ ಕಂಪನಿಗಳನ್ನು ಹ್ಯಾಕ್‌ ಮಾಡಿರುವ ವಿಚಾರ ಬಹಿರಂಗವಾಗಿದೆ. ಆದರೆ, ಯಾವುದೇ ಹಾನಿ ಮಾಡುವ ಮೊದಲೇ ಅದು ಸ್ವಯಂ ಆಗಿ ಈ ಕಾರ್ಯದಿಂದ ಹಿಂದೆ ಸರಿದಿದೆ ಎಂದು ಗೂಗಲ್ ಹೇಳಿಕೊಂಡಿದೆ.

ಘಟನೆ ನಡೆದಿದ್ದು ಹೇಗೆ?

ವರದಿಗಳ ಪ್ರಕಾರ, ಕಳೆದ ಮೇ ತಿಂಗಳಲ್ಲಿ ಇಸ್ರೇಲ್‌ನ ಸ್ಟಾರ್ಟಪ್‌ ಕಂಪನಿಯಾದ 'ಇರೆಗ್ಯುಲರ್‌' (Irregular) ಸೈಬರ್‌ ಸೆಕ್ಯುರಿಟಿ ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಅನಿರೀಕ್ಷಿತವಾಗಿ ಇಂಟರ್ನೆಟ್‌ ಸಂಪರ್ಕ ದೊರೆತ ಕಾರಣ, ಪರೀಕ್ಷೆಗಾಗಿ ಸೃಷ್ಟಿಸಿದ್ದ ಕಾಲ್ಪನಿಕ (ನಕಲಿ) ಕಂಪನಿ ಬದಲು, ಅದೇ ಹೆಸರನ್ನು ಹೋಲುವ ನೈಜ ಕಂಪನಿಯ ವೆಬ್‌ಸೈಟ್‌ ಅನ್ನೇ ಜೆಮಿನಿ ಎಐ ಟೂಲ್‌ ಹ್ಯಾಕ್‌ ಮಾಡಿದೆ.

ನಿರ್ಬಂಧಿತ ಪರೀಕ್ಷಾ ವ್ಯವಸ್ಥೆಯಲ್ಲಿ ಜೆಮಿನಿಗೆ ನಕಲಿ ಕಂಪನಿಯೊಂದರ ಮಾಹಿತಿ ಸಂಗ್ರಹಿಸುವ ಟಾಸ್ಕ್ ನೀಡಲಾಗಿತ್ತು. ಆದರೆ ಇಂಟರ್ನೆಟ್ ಸಂಪರ್ಕ ಸಿಕ್ಕಿದ್ದರಿಂದ ಇಂಟರ್ನೆಟ್ ಜಾಲಾಡಿದ ಜೆಮಿನಿ, ನೈಜ ಕಂಪನಿಯ ಸಿಸ್ಟಂ ಪಾಸ್‌ವರ್ಡ್‌ ಅನ್ನು ಅಂದಾಜಿಸಿ ಹ್ಯಾಕ್ ಮಾಡಿತ್ತು. ಆದಾಗ್ಯೂ, ತಾನು ಹ್ಯಾಕ್ ಮಾಡುತ್ತಿರುವುದು ನೈಜ ಕಂಪನಿ ಎಂಬುದನ್ನು ಗುರುತಿಸುತ್ತಿದ್ದಂತೆ ಎಐ ಆ ಕಾರ್ಯವನ್ನು ಅರ್ಧಕ್ಕೇ ಕೈಬಿಟ್ಟಿತು. ಇದೇ ರೀತಿಯಲ್ಲಿ ಇನ್ನುಳಿದ ಎರಡು ಕಂಪನಿಗಳ ವಿಚಾರದಲ್ಲೂ ನಡೆದು, ನೈಜ ಕಂಪನಿಗಳೆಂದು ಅರಿವಾಗುತ್ತಿದ್ದಂತೆ ಅದು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

ಗೂಗಲ್ ಸ್ಪಷ್ಟನೆ ಏನು?

ಈ ಘಟನೆಯು ಎಐ ಮಾಡೆಲ್ಸ್‌ಗಳಿಗೆ ಕೇವಲ ತರಬೇತಿ ನೀಡುವುದು ಮಾತ್ರವಲ್ಲದೆ, ಅವುಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡುವಂತೆ ಕಲಿಸುವುದು ಎಷ್ಟು ಅಗತ್ಯ ಎಂಬುದನ್ನು ಎತ್ತಿತೋರಿಸುತ್ತದೆ ಎಂದು ಗೂಗಲ್‌ನ ಸೆಕ್ಯುರಿಟಿ ಎಂಜಿನಿಯರಿಂಗ್‌ನ ಉಪಾಧ್ಯಕ್ಷ ಹೇದರ್‌ ಅಡ್ಕಿನ್ಸ್‌ ತಿಳಿಸಿದ್ದಾರೆ.

ಈ ಹಿಂದೆ ಓಪನ್‌ ಎಐ (OpenAI), ಆ್ಯಂಥ್ರೋಪಿಕ್‌ (Anthropic) ಮತ್ತು ಮೆಟಾ (Meta) ಕಂಪನಿಗಳು ಕೂಡ ಇದೇ ರೀತಿಯ ಮಾಹಿತಿ ಬಹಿರಂಗಪಡಿಸಿದ್ದವು. ಆದರೆ, ನೈಜ ಕಂಪನಿ ಹ್ಯಾಕ್‌ ಮಾಡುವ ವೇಳೆ ಆ ಎಐ ಟೂಲ್‌ಗಳು ಜೆಮಿನಿಯಂತೆ ಸ್ವಯಂ ಆಗಿ ಹಿಂದೆ ಸರಿದಿರಲಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.