ಹಾಸ್ಯ ನಟ ಚಿಕ್ಕಣ್ಣ ಹಾಗೂ ಪಾವನಾ ಗೌಡ ಆರತಕ್ಷತೆ ಸಮಾರಂಭ ಮೈಸೂರಿನಲ್ಲಿ ನಡೆಯುತ್ತಿದೆ. ಹಲವು ಸೆಲೆಬ್ರೆಟಿಗಳು, ಗಣ್ಯರು ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಸಮಾರಂಭದಲ್ಲಿ ಯುವ ಜೋಡಿ ಎಲ್ಲರ ಗಮನಸೆಳೆದಿದ್ದಾರೆ.
ಮೈಸೂರು (ಆ.29) ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ಹಾಸ್ಯ ನಟ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ಉದ್ಯಮಿ ಪಾವನಾ ಗೌಡ ಜೊತೆ ನಾಳೆ (ಆ.30) ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆಗೂ ಮೊದಲು ಇಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ಧೂರಿ ರೆಸೆಪ್ಶನ್ ಆಯೋಜಿಸಲಾಗಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಗೌಡ ಜೋಡಿ ಎಲ್ಲರ ಗಮನಸಳೆದಿದ್ದಾರೆ. ಚಿಕ್ಕಣ್ಣ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಶರ್ಟ್ ಹಾಗೂ ನೀಲಿ ಬ್ಲೇಜರ್ ಧರಿಸಿದ್ದರೆ, ಪಾವನಾ ಗೌಡ ನೀಲಿ ಬಣ್ಣದ ಮಿಂಚುವ ಲೆಹೆಂಗಾದಲ್ಲಿ ಗಮನ ಸೆಳೆದಿದ್ದಾರೆ. ಇಬ್ಬರೂ ಕೈಹಿಡಿದು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಆರತಕ್ಷತೆಗೆ ಸೆಲೆಬ್ರೆಟಿಗಳ ದಂಡು
ಆಗಸ್ಟ್ 30ರಂದು ಧಾರಾ ಮುಹೂರ್ತದೊಂದಿಗೆ ಚಿಕ್ಕಣ್ಣ-ಪಾವನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಸಂಭ್ರಮದ ಭಾಗವಾಗಿ ಈಗಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳು ನೆರವೇರಿವೆ. ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಚಿಕ್ಕಣ್ಣ ಮತ್ತು ಪಾವನಾ ಗೌಡ ಸಂಭ್ರಮದಿಂದ ಪಾಲ್ಗೊಂಡಿದ್ದರು. ಶನಿವಾರ ನಡೆಯುತ್ತಿರುವ ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು, ಚಿತ್ರರಂಗದ ಸ್ನೇಹಿತರು ಹಾಗೂ ಗಣ್ಯ ಅತಿಥಿಗಳು ಆಗಮಿಸಿದ್ದಾರೆ.
ಮೈಸೂರು ಮೂಲದ ಪಾವನಾ ಗೌಡ
ಮೈಸೂರು ಮೂಲದ ಪಾವನಾ ಗೌಡ ಅವರನ್ನು ಚಿಕ್ಕಣ್ಣ ವಿವಾಹವಾಗುತ್ತಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ಮದುವೆ, ಅರೇಂಜ್ ಕಮ್ ಲವ್ ಮ್ಯಾರೇಜ್ ಎಂದು ಚಿಕ್ಕಣ್ಣ ಮುಕ್ತವಾಗಿ ಹೇಳಿಕೊಂಡಿದ್ದರು. ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ.
ಚಿಕ್ಕಣ್ಣ ಮದುವೆಗೆ ಅಭಿಮಾನಿಗಳು
ಚಿಕ್ಕಣ್ಣ ಅವರ ಮದುವೆ ಆಗಸ್ಟ್ 29 ಮತ್ತು 30ರಂದು ನಡೆಯಲಿದೆ ಎಂದು ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. ಚಿಕ್ಕಣ್ಣ ಮದುವೆಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಚಿತ್ರರಂಗದಲ್ಲಿ ಹಾಸ್ಯನಟನಾಗಿ ವಿಶಿಷ್ಟ ಛಾಪು ಮೂಡಿಸಿರುವ ಚಿಕ್ಕಣ್ಣ, ಹಲವು ವರ್ಷಗಳಿಂದ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಅವರ ಮದುವೆ ಸಮಾರಂಭ ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ.


