ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಕಿರಿಯ ಪುತ್ರ, ನಟ ಪ್ರಣಮ್ ದೇವರಾಜ್ ಅವರು ತಮ್ಮ ದೀರ್ಘಕಾಲದ ಪ್ರೇಯಸಿ ನಮಿತಾ ಗೋಪಾಲ್ ಅವರೊಂದಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿದೆ.
ಬೆಂಗಳೂರು (ಆ.27): ಕನ್ನಡ ಚಿತ್ರರಂಗದ ‘ಡೈನಾಮಿಕ್ ಸ್ಟಾರ್’ ದೇವರಾಜ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ದೇವರಾಜ್ ಅವರ ಕಿರಿಯ ಪುತ್ರ, ನಟ ಪ್ರಣಮ್ ದೇವರಾಜ್ (ಆತ್ಮೀಯರ ಮುದ್ದಿನ 'ಚೋಟು') ತಮ್ಮ ದೀರ್ಘಕಾಲದ ಪ್ರೇಯಸಿ ನಮಿತಾ ಗೋಪಾಲ್ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ಎರಡೂ ಕುಟುಂಬಸ್ಥರ ಸಮ್ಮತಿ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಆಗಸ್ಟ್ 26 ರಂದು ಬೆಂಗಳೂರಿನ 'ದಿ ಚಾನ್ಸರಿ ಪೆವಿಲಿಯನ್' ಹೋಟೆಲ್‌ನಲ್ಲಿ ಈ ಶುಭ ಸಮಾರಂಭ ನೆರವೇರಿತು. ಸಮಾರಂಭದಲ್ಲಿ ಪ್ರಣಮ್ ದೇವರಾಜ್ ಅವರು ನಮಿತಾ ಗೋಪಾಲ್ ಅವರಿಗೆ ಮಂಡಿಯೂರಿ ಪ್ರೀತಿಯಿಂದ ಉಂಗುರ ತೊಡಿಸಿದರು. ನಂತರ ಹೊಸ ಜೋಡಿ ಕೇಕ್ ಕಟ್ ಮಾಡಿ ಸಂಭ್ರಮಿಸಿತು. ಈ ಸಂಭ್ರಮದ ಕ್ಷಣಗಳಿಗೆ ಕುಟುಂಬಸ್ಥರು, ಆಪ್ತ ಸಂಬಂಧಿಕರು ಹಾಗೂ ಸ್ನೇಹಿತರ ಬಳಗ ಸಾಕ್ಷಿಯಾಯಿತು. ಮಗನ ನಿಶ್ಚಿತಾರ್ಥದ ಸಂಭ್ರಮದಲ್ಲಿ ಹಿರಿಯ ನಟ ದೇವರಾಜ್ ಅವರ ಮೊಗದಲ್ಲಿ ತಂದೆಯ ಖುಷಿ ಎದ್ದು ಕಾಣುತ್ತಿತ್ತು.
ಸಂಭ್ರಮದಲ್ಲಿ ದೇವರಾಜ್ ಕುಟುಂಬ
ತಮ್ಮನ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಪ್ರಣಮ್ ಅವರ ಸಹೋದರ, 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಚಂದ್ರನ್ ಮುಂಚೂಣಿಯಲ್ಲಿದ್ದು ಕಾರ್ಯಕ್ರಮದ ಕಳೆ ಹೆಚ್ಚಿಸಿದರು. ಭಾವಿ ಓರಗಿತ್ತಿ ನಮಿತಾ ಗೋಪಾಲ್ ಅವರೊಂದಿಗೆ ರಾಗಿಣಿ ಚಂದ್ರನ್ ಅತ್ಯಂತ ಖುಷಿಯಿಂದ ಫೋಟೋಗಳಿಗೆ ಪೋಸ್ ನೀಡಿದರು.
‘ಕುಮಾರಿ 21 ಎಫ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ಪ್ರಣಮ್ ದೇವರಾಜ್, ಇತ್ತೀಚೆಗೆ ‘ಸನ್ ಆಫ್ ಮುತ್ತಣ್ಣ’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ನೆರವೇರಿದ್ದರೂ ಮದುವೆಯ ಅಧಿಕೃತ ದಿನಾಂಕವನ್ನು ಕುಟುಂಬಸ್ಥರು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಸದ್ಯ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೊಸ ಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.


