'ಕರಾವಳಿ' ಚಿತ್ರದ ಟ್ರೈಲರ್‌ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವುದು ಮತ್ತು ಕಳಪೆ ಸ್ಕ್ರೀನ್ ಪ್ರೆಸೆನ್ಸ್‌ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಬೇಜವಾಬ್ದಾರಿತನದಿಂದ ಅಭಿಮಾನಿಗಳು ನೊಂದಿದ್ದಾರೆ.

ಬೆಂಗಳೂರು (ಜು.7): ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಡೆದ ಗದ್ದಲದ ಅಸಲಿ ಚಿತ್ರಣ ಈಗ ಹೊರಬಂದಿದೆ. ಚಿತ್ರದ ಟ್ರೈಲರ್‌ನಲ್ಲಿ ಹೀರೊ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಧ್ವನಿ ಇಲ್ಲದಿರುವುದು ಹಾಗೂ ಕಳಪೆ ಸ್ಕ್ರೀನ್ ಪ್ರೆಸೆನ್ಸ್‌ನಿಂದ ಬೇಸತ್ತ ಅಖಿಲ ಕರ್ನಾಟಕ ಪ್ರಜ್ವಲ್ ದೇವರಾಜ್ ಅಭಿಮಾನಿ ಸಂಘದ ಪದಾಧಿಕಾರಿಗಳು ಚಿತ್ರತಂಡದ ವಿರುದ್ಧ ಕಣ್ಣೀರು ಹಾಕುತ್ತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಮ್ಮ 15 ವರ್ಷಗಳ ಅಭಿಮಾನದ ಇತಿಹಾಸದಲ್ಲೇ ನಾವು ಈ ರೀತಿ ರಸ್ತೆಗೆ ಇಳಿದಿರಲಿಲ್ಲ, ಆದರೆ ಚಿತ್ರತಂಡ ನಮ್ಮನ್ನು ಆ ಮಟ್ಟಿಗೆ ನೋಯಿಸಿದೆ" ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಬಾಸ್ ಸಿನಿಮಾ ಬಂದು ಎರಡು ವರ್ಷ ಆಗಿತ್ತು. ಈ ಬಾರಿ ಅವರ ಬರ್ತ್‌ಡೇಗೆ ನಮಗೆ ಅವರನ್ನು ಸಿಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಟ್ರೈಲರ್ ಲಾಂಚ್ ಅನ್ನೇ ದೊಡ್ಡ ಹಬ್ಬದಂತೆ ಆಚರಿಸಲು ನಿರ್ಧರಿಸಿ, ನೆನ್ನೆ ರಾತ್ರಿ 2 ಗಂಟೆಯವರೆಗೂ ರಸ್ತೆಯಲ್ಲಿ ನಿಂತು ಬ್ಯಾನರ್ ಕಟ್ಟಿದ್ದೇವೆ, ಹೂವಿನ ಹಾರ ತಂದಿದ್ದೇವೆ, ಪಟಾಕಿಗಳನ್ನು ತಂದಿದ್ದೇವೆ. ರಾತ್ರಿ ಪೊಲೀಸರು ಬಂದು ನಮಗೆ ಕೆಟ್ಟದಾಗಿ ಬೈದರೂ, ರಿಕ್ವೆಸ್ಟ್ ಮಾಡಿಕೊಂಡು ಕೆಲಸ ಮುಗಿಸಿದ್ದೆವು. ಇದೆಲ್ಲವನ್ನೂ ನಾವು ನಿರ್ದೇಶಕ ಗುರುದತ್ ಗಾಣಿಗ ಅವರ ಮೇಲಿನ ನಂಬಿಕೆಯಿಂದ ಮಾಡಿದ್ದೆವು. ಆದರೆ ಇಂದು ಬೆಳಗ್ಗೆ 10:30 ಆದರೂ ಬಾಸ್ ಬರ್ತಾ ಇಲ್ಲ ಅಂದಾಗ ಚಿತ್ರತಂಡದವರು ನಮಗೆ 'ಗೊತ್ತಿಲ್ಲ' ಎಂದು ಬೇಜವಾಬ್ದಾರಿಯ ಉತ್ತರ ನೀಡಿದರು ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಟ್ರೈಲರ್‌ನಲ್ಲಿ ನಮ್ಮ ಬಾಸ್ ಕಾಣಿಸಿದ್ದು ಕೇವಲ 'ಜೂನಿಯರ್ ಆರ್ಟಿಸ್ಟ್' ತರ

ಬಾಸ್ ಬರಲಿಲ್ಲ ಅಂದರೂ ಬೇಸರ ಮರೆತು ಸಿನಿಮಾ ಟ್ರೈಲರ್‌ ನೋಡೋಣ ಎಂದು ಥಿಯೇಟರ್ ಒಳಗೆ ಹೋದೆವು. ಆದರೆ ಟ್ರೈಲರ್ ನೋಡಿದ ನಮಗೆ ಎದೆ ಒಡೆದಂತಾಯಿತು. ಇಡೀ ಟ್ರೈಲರ್‌ನಲ್ಲಿ ನಮ್ಮ ಹೀರೊ ಎಲ್ಲೂ ಸರಿಯಾಗಿ ಕಾಣಿಸಿಯೇ ಇಲ್ಲ. ಬಂದು ಹಾಗೆ ಹೋಗುವ ಜೂನಿಯರ್ ಆರ್ಟಿಸ್ಟ್ ಅಥವಾ ಪಾಸಿಂಗ್ ಶಾಟ್‌ ತರಹ ಬಾಸ್ ಅನ್ನು ತೋರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರೈಲರ್‌ನಲ್ಲಿ ಅವರ ಧ್ವನಿಯೇ ಇಲ್ಲ. ಸಂಭಾವನೆ ಗಲಾಟೆ ನಮಗಂತೂ ಗೊತ್ತಿಲ್ಲ, ಆದರೆ ಒಬ್ಬ ಅಭಿಮಾನಿಯಾಗಿ ನಮ್ಮ ಹೀರೊನ ನಾವು ಸ್ಕ್ರೀನ್ ಮೇಲೆ ಅದ್ಭುತವಾಗಿ ನೋಡಲು ಬಂದಿದ್ದೆವು. ಆದರೆ ಚಿತ್ರತಂಡ ನಮಗೆ ತೀವ್ರ ನಿರಾಸೆ ಮೂಡಿಸಿದೆ. ಈ ಮುಂಚೆ ಬಿಡುಗಡೆಯಾದ ಹಾಡಿನಲ್ಲೂ ಅವರ ಧ್ವನಿ ಇರಲಿಲ್ಲ ಎಂದು ಅಭಿಮಾನಿಯೊಬ್ಬರು ದೂರಿದ್ದಾರೆ.

ಮಂಗಳೂರು ಭಾಷೆಯೇ ಬೇಕಿತ್ತಾದ್ರೆ ರಿಷಬ್ ಶೆಟ್ಟಿ ಅಥವಾ ರಾಜ್ ಬಿ. ಶೆಟ್ಟಿನೇ ಹೀರೊ ಮಾಡ್ಬಹುದಿತ್ತಲ್ಲ

ಚಿತ್ರತಂಡದ ಮೇಕಿಂಗ್ ಶೈಲಿಯನ್ನು ಪ್ರಶ್ನಿಸಿದ ಫ್ಯಾನ್ಸ್, ಇದು ಕರಾವಳಿ ಭಾಷೆಯ ಸಿನಿಮಾ, ಮಂಗಳೂರು ಶೈಲಿಯ ಧ್ವನಿಯೇ ಬೇಕು ಅಂತ ಇವರು ಹಠ ಮಾಡುವುದಾದರೆ, ಮೊದಲೇ ಪ್ರಜ್ವಲ್ ದೇವರಾಜ್ ಅವರನ್ನು ಹೀರೊ ಮಾಡುವುದು ಬೇಕಿರಲಿಲ್ಲ. ಅದರ ಬದಲು ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಅಥವಾ ರಕ್ಷಿತ್ ಶೆಟ್ಟಿ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕಿತ್ತಲ್ಲ? ನಮ್ಮ ಬಾಸ್‌ನ ಹೀರೊ ಅಂತ ಮುಂಚೆ ಹಾಕಿ, ಇವಾಗ ವಾಯ್ಸ್ ಬರಲ್ಲ, ಡಬ್ಬಿಂಗ್ ಮಾಡಿಲ್ಲ ಅಂದರೆ ಹೇಗೆ? ತಪ್ಪು ಎರಡು ಕಡೆಯಿಂದಲೂ ಆಗಿರುತ್ತದೆ. ಚಿತ್ರತಂಡದ ಈ ನಡವಳಿಕೆಯಿಂದ ನಮ್ಮ ಹೀರೊಗೆ ಎಷ್ಟು ಹರ್ಟ್ ಆಗಿರಬೇಡ? ಅದಕ್ಕೇ ಅವರು ಬಂದಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಾವು ಪ್ರಾಣಿಗಳಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ!

ವೇದಿಕೆಯ ಮೇಲೆ ಚಿತ್ರರಂಗದ ಗಣ್ಯರು ಮಾತನಾಡಿದ ಶೈಲಿಗೆ ಆಕ್ಷೇಪವೆತ್ತಿದ ಅಭಿಮಾನಿಗಳು, ಅಲ್ಲಿ ಸ್ಟೇಜ್ ಮೇಲೆ ಕೂತವರು 'ನಾವು ಮನುಷ್ಯರ ಜೊತೆ ಮಾತನಾಡುತ್ತೇವೆ' ಅಂತಾರೆ, ಹಾಗಾದರೆ ನಾವೇನು ಪ್ರಾಣಿಗಳಾ? ನಾವು ಸಿನಿಮಾ ಹಾಳು ಮಾಡಲು ಬಂದಿಲ್ಲ, ಎರಡು ವರ್ಷಗಳಿಂದ ರೀಲ್ಸ್ ಮಾಡಿ ಪ್ರಮೋಷನ್ ಮಾಡಿದ್ದು ನಾವೇ. ಇವತ್ತು ನಮ್ಮ ನೋವನ್ನು ತೋರಿಸಿಕೊಳ್ಳುತ್ತಿದ್ದೇವೆ. ನಮ್ಮ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ಈಗ ತಂದಿರುವ ಪಟಾಕಿಗಳನ್ನು ಇಲ್ಲೇ ಹೊಡೆದು, ಹೂವಿನ ಹಾರಗಳನ್ನು ವೇಸ್ಟ್ ಮಾಡಿ, ಮುಂದಿನ ನಿರ್ಧಾರಕ್ಕಾಗಿ ನೇರವಾಗಿ ನಮ್ಮ ಬಾಸ್ (ಪ್ರಜ್ವಲ್) ಮನೆ ಮುಂದೆ ಹೋಗುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.