ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?

57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತನಗಿಂತ 30 ವರ್ಷ ಚಿಕ್ಕವನಾದ ಪ್ರಿಯತಮನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾರೆ. ತಾನು ಕೊಟ್ಟ ಹಣವನ್ನು ವಾಪಸ್ ಕೇಳಿದ್ದೇ ಕೊಲೆಗೆ ಕಾರಣವಾಗಿದ್ದು, ಸಾಕ್ಷ್ಯ ನಾಶಪಡಿಸಲು ಆಕೆಯ ಶವವನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಲಾಗಿದೆ.

Share this Video
  • FB
  • Linkdin
  • Whatsapp

ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ, ಆದರೆ ಆ ಪ್ರೀತಿಯೇ ಹಣದ ಆಸೆಗೆ ಬಲಿಯಾದಾಗ ಅಲ್ಲಿ ಉಳಿಯುವುದು ಬರೀ ರಕ್ತಸಿಕ್ತ ಕಥೆ ಮಾತ್ರ. ಇಲ್ಲೊಬ್ಬಳು 57 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕಿ, ತನಗಿಂತ 30 ವರ್ಷ ಸಣ್ಣವನಾದ ಯುವಕನನ್ನು ನಂಬಿ ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ ಹಣದ ವಿಚಾರಕ್ಕೆ ಶುರುವಾದ ಕಿರಿಕಿರಿ, ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ.

ಆದರ್ಶ ಶಿಕ್ಷಕಿಯ ನಿಗೂಢ ನಾಪತ್ತೆ:

ಆಕೆ ಸಮಾಜದಲ್ಲಿ ಗೌರವಯುತವಾದ ಸ್ಥಾನದಲ್ಲಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಜ್ಯೋತಿ (57). ಇನ್ನು ಕೆಲವೇ ತಿಂಗಳು ಕಳೆದಿದ್ದರೆ ಆಕೆ ಸೇವೆಯಿಂದ ನಿವೃತ್ತಿಯಾಗಿ ನೆಮ್ಮದಿಯ ಜೀವನ ನಡೆಸಬೇಕಿತ್ತು. ಆದರೆ ಒಂದು ದಿನ ಮನೆಯಲ್ಲಿ ಕೆಲಸವಿದೆ ಎಂದು ಹೊರಹೋದವರು ವಾಪಸ್ ಬರಲೇ ಇಲ್ಲ. ಕುಟುಂಬಸ್ಥರು ಆತಂಕದಿಂದ ಪೊಲೀಸರಿಗೆ ಮಿಸ್ಸಿಂಗ್ ಕೇಸ್ ನೀಡಿದರು. ಮರುದಿನ ರಸ್ತೆಯ ಪಕ್ಕದಲ್ಲಿ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಯಿತು. ಅದು ಶಿಕ್ಷಕಿ ಜ್ಯೋತಿಯವರದ್ದೇ ಎಂದು ತಿಳಿದಾಗ ಇಡೀ ಊರೇ ಬೆಚ್ಚಿಬಿದ್ದಿತ್ತು.

ನಂದಿನಿ ಪಾರ್ಲರ್‌ನಲ್ಲಿ ಶುರುವಾದ ಪ್ರೇಮಕಥೆ:

ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಬಯಲಾದದ್ದು ಒಂದು ಅನೈತಿಕ ಸಂಬಂಧದ ಕಥೆ. ಜ್ಯೋತಿ ಅವರಿಗೆ 27 ವರ್ಷದ ಅಮರ ಎಂಬ ಯುವಕನ ಪರಿಚಯವಾಗಿತ್ತು. ಅಮರ ನಂದಿನಿ ಪಾರ್ಲರ್ ನಡೆಸುತ್ತಿದ್ದ, ಅಲ್ಲಿಗೆ ಪದೇ ಪದೇ ಬರುತ್ತಿದ್ದ ಜ್ಯೋತಿಗೂ ಅವನ ನಡುವೆ ಸ್ನೇಹ ಬೆಳೆದು ನಂತರ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಜ್ಯೋತಿ ಅವನ ಮೇಲೆ ಎಷ್ಟರಮಟ್ಟಿಗೆ ಪ್ರೀತಿ ಇಟ್ಟಿದ್ದರೆಂದರೆ, ಅವನಿಗೆ ಬೇಕಾದ ಕಾರು, ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ನೀಡಿದ್ದರು. ಅಮರ ಕೂಡ ಆಕೆಯ ದುಡ್ಡಿನಲ್ಲಿ ರಾಜಾತಿಥ್ಯ ಅನುಭವಿಸುತ್ತಾ ಮಜಾ ಮಾಡಿದ್ದ.

ಕೊಲೆಗೆ ಕಾರಣವಾದ ಹಣದ ಕಿರಿಕಿರಿ:

ಇತ್ತೀಚಿನ ದಿನಗಳಲ್ಲಿ ಜ್ಯೋತಿ ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೇಳಲು ಶುರುಮಾಡಿದ್ದರು. ಆದರೆ ಅಮರ ಈಗಾಗಲೇ ಆ ಹಣವನ್ನೆಲ್ಲಾ ಖಾಲಿ ಮಾಡಿದ್ದ. ಹಣ ವಾಪಸ್ ಕೊಡಲಾಗದ ಅಮರನಿಗೆ ಜ್ಯೋತಿಯವರ ಒತ್ತಾಯ 'ಟಾರ್ಚರ್' ನಂತೆ ಕಂಡಿದೆ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಮುಗಿಸಿಬಿಡಲು ಪಕ್ಕಾ ಪ್ಲಾನ್ ಮಾಡಿದ್ದ.

ದೇವಸ್ಥಾನದ ನೆಪದಲ್ಲಿ ಮಸಣ ಸೇರಿದ ಜೀವ:

ಪ್ಲಾನ್ ಪ್ರಕಾರ, 'ದೇವಸ್ಥಾನಕ್ಕೆ ಹೋಗಿ ಬರೋಣ ಬಾ' ಎಂದು ಜ್ಯೋತಿಯನ್ನು ಕರೆದೊಯ್ದಿದ್ದ ಅಮರ, ದಾರಿಯಲ್ಲಿ ಪೆಟ್ರೋಲ್ ಬಂಕ್ ಒಂದರಿಂದ ಬಾಟಲಿಯಲ್ಲಿ ಪೆಟ್ರೋಲ್ ಖರೀದಿಸಿದ್ದ. ನಂತರ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಕೊಂದು, ಸಾಕ್ಷ್ಯ ನಾಶಪಡಿಸಲು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ. ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಆದರೆ, ಪೆಟ್ರೋಲ್ ಬಂಕ್‌ನ ಸಿಸಿ ಟಿವಿ ದೃಶ್ಯಾವಳಿಗಳು ಹಂತಕ ಅಮರನ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟವು. ಪೊಲೀಸರು ಹಂತಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನಂಬಿದ ಪ್ರಿಯತಮನೇ ಕಾಲನಾದ ಈ ಘಟನೆ ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ನಿವೃತ್ತಿ ಜೀವನದ ಕನಸು ಕಾಣುತ್ತಿದ್ದ ಶಿಕ್ಷಕಿ, ಕೊನೆಗೆ ಸುಟ್ಟ ಹೆಣವಾಗಿ ಮಸಣ ಸೇರಿದ್ದು ಮಾತ್ರ ವಿಧಿಯ ಆಟ.

Related Video