1992ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ರಾಜಕುಮಾರಿ ಡಯಾನಾ, ಆವಂತಿ ರೆಡ್ಡಿ ಎಂಬ 4 ವರ್ಷದ ಬಾಲಕಿಯನ್ನು ಪ್ರೀತಿಯಿಂದ ಮಗಳೆಂದು ಕರೆದಿದ್ದರು. ಡಯಾನಾ ನಿಧನದವರೆಗೂ ಇವರಿಬ್ಬರ ನಡುವೆ ಪತ್ರಗಳ ಮೂಲಕ ಬಾಂಧವ್ಯ ಮುಂದುವರಿದಿತ್ತು. 34 ವರ್ಷಗಳ ನಂತರ ಆವಂತಿ ಈ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ವೇಲ್ಸ್​ನ ರಾಜಕುಮಾರಿ ಡಯಾನಾ ಅವರು ಬ್ರಿಟಿಷ್ ರಾಜಮನೆತನದ ಸೊಸೆಯಾಗಿ, ಅತ್ಯಂತ ಜನಪ್ರಿಯ ಮಾನವತಾವಾದಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಇವರನ್ನು ಪ್ರೀತಿಯಿಂದ "ಜನರ ರಾಜಕುಮಾರಿ" (People's Princess) ಎಂದು ಕರೆಯಲಾಗುತ್ತಿತ್ತು. ಏಡ್ಸ್ (AIDS) ರೋಗಿಗಳಿಗೆ ಸ್ಪಂದಿಸುವುದು ಮತ್ತು ಅವರ ಬಗ್ಗೆ ಸಮಾಜದಲ್ಲಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದ ಪ್ರಿನ್ಸ್​ ಡಯಾನಾ, ಬಡವರು, ನಿರ್ಗತಿಕರು ಹಾಗೂ ಕ್ಯಾನ್ಸರ್ ಪೀಡಿತರ ಪರವಾಗಿ ನಿಂತವರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಒಳ್ಳೆಯವರಿಗೆ ಕಾಲವಿಲ್ಲ ಎನ್ನುವುದನ್ನು ವಿಧಿ ಸಾಬೀತು ಮಾಡಿತ್ತು. 1997ರಲ್ಲಿ ತಮ್ಮ 36ನೇ ವಯಸ್ಸಿಯಲ್ಲಿ ಪಾಪರಾಜಿಗಳ ಬೆನ್ನಟ್ಟುವಿಕೆಯಿಂದಾಗಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಿಧನರಾದರು ರಾಜಕುಮಾರಿ. ಆದರೆ ಅವರ ಆದರ್ಶ ಜೀವನ, ಅವರ ಕರುಣೆಯ ಕಥೆಗಳು ಇಂದಿಗೂ ಜನಜನಿತವಾಗಿಯೇ ಇವೆ.

ಅಂಥವುಗಳಲ್ಲಿ ಒಂದು, ಭಾರತಕ್ಕೆ ರಾಜಕುಮಾರಿ ಬಂದಿದ್ದ ಘಟನೆ. ಫೆಬ್ರವರಿ 14, 1992 ರಂದು ಹೈದರಾಬಾದ್‌ನ ಲಾಲಾಪೇಟ್ ಪ್ರೌಢಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಕುಮಾರಿ ಡಯಾನಾ, ತಮ್ಮ ಸ್ವಾಗತಕ್ಕಾಗಿ ಲಂಬಾಣಿ ವೇಷ ತೊಟ್ಟ ನೃತ್ಯ ಮಾಡುತ್ತಿದ್ದ ನಾಲ್ಕು ವರ್ಷದ ಆವಂತಿ ರೆಡ್ಡಿಗೆ ಮರುಳಾಗಿದ್ದರು. ಪ್ರೊಟೋಕಾಲ್​ ಪ್ರಕಾರ, ಯಾರನ್ನೂ ರಾಜಕುಮಾರಿ ಮುಟ್ಟುವಂತೆ ಇರಲಿಲ್ಲ. ಆದರೆ ಡಯಾನಾ ಎಲ್ಲರಂತೆ ಅಲ್ಲವಲ್ಲ, ಆ ಪುಟಾಣಿ ಕಂದಮ್ಮನನ್ನು ಎತ್ತಿಕೊಂಡರು. ಅವಳನ್ನು ಎತ್ತಿಕೊಂಡು ತನ್ನ ತೊಡೆಯ ಮೇಲೆ ಇಟ್ಟುಕೊಂಡು, ಕರವಸ್ತ್ರದಲ್ಲಿ ಆವಂತಿಯ ಮೂಗನ್ನು ಒರೆಸಿದರು. ಅವಳನ್ನು ಹತ್ತಿರ ಇಟ್ಟುಕೊಂಡು ಪ್ರೀತಿಯಿಂದ ಹೇಳಿದಳು, "ನನಗೆ ಮಗಳಿಲ್ಲ, ಆದ್ದರಿಂದ ಇಂದು ನೀನು ನನ್ನ ಮಗಳು ಎಂದರು.

ಅಮ್ಮ-ಮಗಳ ಬಾಂಧವ್ಯ

ಆದರೆ, ನಿಜಕ್ಕೂ ಈ ಬಾಂಧವ್ಯ ಅಲ್ಲಿಯೇ ನಿಂತಿರಲಿಲ್ಲ. ಅಮ್ಮ-ಮಗಳ ಬಾಂಧವ್ಯ ಎಂದು ಅಂದು ರಾಜಕುಮಾರಿ ಬರಿಯ ಮಾತಿನಿಂದ ಹೇಳಿರಲಿಲ್ಲ. ಡಯಾನಾ ತಮ್ಮ ದೇಶಕ್ಕೆ ವಾಪಸಾದ ಮೇಲೆಯೂ ಬಾಲಕಿಯ ಜೊತೆಗೆ ಸಂಪರ್ಕದಲ್ಲಿ ಇದ್ದರು. ಮತ್ತು ಡಯಾನಾ ಅವಂತಿಗೆ ಸಹಿ ಮಾಡಿದ ಛಾಯಾಚಿತ್ರವನ್ನು ಕಳುಹಿಸಿದರು. 1997 ರಲ್ಲಿ, ಎಂಟು ವರ್ಷವಾಗಿದ್ದ ಆವಂತಿ ತನ್ನ ನೃತ್ಯ ತಂಡದೊಂದಿಗೆ ಯುರೋಪ್‌ಗೆ ಪ್ರಯಾಣ ಬೆಳೆಸಿದಳು. ಆ ಸಮಯದಲ್ಲಿ ಡಯಾನಾ ಜೊತೆ ಭೇಟಿಯಾಗುವುದೂ ಫಿಕ್ಸ್​ ಆಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿ ಹೋಗಿತ್ತು. ಮತ್ತೆ ಈ ಅಮ್ಮ-ಮಗಳು ಒಂದಾಗಲೇ ಇಲ್ಲ. ಅದಾಗಲೇ ಡಯಾನಾ ಇಹಲೋಹ ತ್ಯಜಿಸಿದ್ದರು. ಆದರೆ, ಅವರ ನೆನಪು, ಪತ್ರಗಳು ಮತ್ತು ಛಾಯಾಚಿತ್ರವನ್ನು ಅವಂತಿಯೊಂದಿಗೆ ಬಿಟ್ಟುಹೋದರು.

ದಯೆಯ ಕ್ಷಣ ಇನ್ನೂ ಜೀವಂತವಾಗಿದೆ

ಈ ಘಟನೆ ನೆನೆದು 34 ವರ್ಷವಾಗಿದೆ. ಇದೀಗ ಆವಂತಿಗೆ 38 ವರ್ಷ ವಯಸ್ಸು. ಇಂದು ಅವರು ಆ ಘಟನೆಯನ್ನು ನೆನಪಿಸಿಕೊಂಡು ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಇದೀಗ ಭಾರಿ ವೈರಲ್​ ಆಗುತ್ತಿದೆ. ಅಂದು ನಡೆದ ಘಟನೆಯನ್ನು ಆವಂತಿ ಅವರು ಕಣ್ಣಿಗೆ ಕಟ್ಟುವಂತೆ ಬರೆದುಕೊಂಡಿದ್ದು, ಇದೀಗ ಭಾರಿ ಪ್ರಶಂಸೆಗೂ ಕಾರಣವಾಗುತ್ತಿದೆ. ಅವರು ಕೊಟ್ಟಿರುವ ಆ ಫೋಟೋಗಳನ್ನು ಆವಂತಿ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.