ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ಅವರ ಬೆಳವಣಿಗೆಗೆ ಕಾರಣವಾಗಿದ್ದ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ದಿಢೀರ್ ಸಾವಿಗೆ ಡೆಂಗ್ಯೂ ಜ್ವರವೇ ಕಾರಣ ಎಂದು ಅವರ ಕೊನೆಯ ಕ್ಷಣಗಳಲ್ಲಿ ಜೊತೆಯಲ್ಲಿದ್ದ ಮಲ್ಲಮ್ಮ ಬಹಿರಂಗಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಪಲ್ಲವಿ ಮೃತಪಟ್ಟಿದ್ದಾರೆ.
ಬೆಂಗಳೂರು: Bigg Boss 12ರಲ್ಲಿ ಎಲ್ಲರ ಮನಸ್ಸನ್ನು ಕದ್ದು ಬೀಗಿದವರು, ಮುಗ್ಧತೆಯಿಂದಲೇ ಎಲ್ಲರ ಪ್ರೀತಿ ಗಳಿಸಿದವರು ಮಲ್ಲಮ್ಮ. ಮಲ್ಲಮ್ಮನವರು ಸೆಲೆಬ್ರಿಟಿಯಾಗಿ ಮಿಂಚಲು, ಅವರ ಬಿಗ್ ಬಾಸ್ ಪಯಣಕ್ಕೆ ಬೆನ್ನೆಲುಬಾಗಿ ನಿಂತಿದ್ದವರು ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್. ಅವರ ನಿಧನದ ಸುದ್ದಿ ಮೊನ್ನೆ ಬರಸಿಡಿಲಿನಂತೆ ಎಲ್ಲರನ್ನೂ ದಂಗುಗೊಳಿಸಿದೆ. ರಿಷಿ ಬೊಟಿಕ್ ಉದ್ಯಮಿಯಾಗಿ, ಹಲವು ನಟ-ನಟಿಯರ ಉಡುಪು ವಿನ್ಯಾಸಕರಾಗಿ ಗುರುತಿಸಿಕೊಂಡಿದ್ದ ಪಲ್ಲವಿ ಮೊನ್ನೆ ಅರ್ಥಾತ್ ಸೆಪ್ಟೆಂಬರ್ 20ರಂದು ನಿಧನರಾಗಿದ್ದಾರೆ. ಅವರ ಸಾವಿಗೆ ನಿಜವಾದ ಕಾರಣ ಏನು ಎನ್ನುವುದು ರಿವೀಲ್ ಆಗಿರಲಿಲ್ಲ.
ಕೊನೆಯವರೆಗೂ ಇದ್ದ ಮಲ್ಲಮ್ಮ
ಇದೀಗ ಅವರ ಜೊತೆ ಕೊನೆಯವರೆಗೂ ಇದ್ದ ಮಲ್ಲಮ್ಮ ಅವರು ವಿಷಯವನ್ನು ರಿವೀಲ್ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಲ್ಲಮ್ಮ ಅವರು, ಪಲ್ಲವಿ ಅವರ ಸಾವಿಗೆ ಕಣ್ಣೀರು ಮಿಡಿದಿದಿದ್ದಾರೆ. ಅವರು ನಮ್ಮೊಂದಿಗೇ ಚೆನ್ನಾಗಿದ್ದರು. ಆವತ್ತು ಬೊಟಿಕ್‌ಗೆ ಬಂದಿದ್ದ ಅವರು, ಒಂದಷ್ಟು ಮದುವೆ ಸಮಾರಂಭಗಳ ಬಟ್ಟೆಗಳ ಆರ್ಡರ್ ಕೂಡ ತೆಗೆದುಕೊಂಡಿದ್ದರು. ಆದರೆ ದಿಢೀರನೆ ಅವರಿಗೆ ಸ್ವಲ್ಪ ಚಳಿ ಮತ್ತು ಜ್ವರ ಕಾಣಿಸಿಕೊಂಡಿತು. ಆಗ ಅವರು ನನ್ನ ಬಳಿ, ಮಲ್ಲಮ್ಮ, ಯಾಕೋ ನಂಗೆ ಚಳಿ ಜ್ವರ ಬಂದ ಹಾಗೆ ಆಗ್ತಿದೆ, ಬಾ ಆಸ್ಪತ್ರೆಗೆ ಹೋಗಿ ಬರೋಣ ಎಂದು ನನ್ನನ್ನ ಕರೆದರು. ತಕ್ಷಣ ನಾವಿಬ್ಬರೂ ಹತ್ತಿರದ ಆಸ್ಪತ್ರೆಗೆ ಹೋದೆವು ಎಂದು ಅಂದು ನಡೆದ ಘಟನೆಯನ್ನು ಮಲ್ಲಮ್ಮ ತೆರೆದಿಟ್ಟಿದ್ದಾರೆ.
ಡೆಂಗ್ಯೂ ಪತ್ತೆಯಾಯ್ತು
ಡಾಕ್ಟರ್ ಅಂದು ಅವರ ಪರೀಕ್ಷೆ ನಡೆಸಿದರು. ಮರುದಿನ ರಿಪೋರ್ಟ್ ನೋಡಿದಾಗ ಅವರಿಗೆ ಡೆಂಗ್ಯೂ ಇರುವುದು ಗೊತ್ತಾಯಿತು. ಪರಿಸ್ಥಿತಿ ಗಂಭೀರವಾಗುವ ಮುನ್ನವೇ ದೊಡ್ಡ ಆಸ್ಪತ್ರೆಗೆ ಸೇರಿಸಿ ಎಂದು ವೈದ್ಯರು ಹೇಳಿದರು. ಬಳಿಕ ಅವರನ್ನು ದೊಡ್ಡ ಆಸ್ಪತ್ರೆಗೆ ಸೇರಿಸಿದೆವು. ಆಸ್ಪತ್ರೆಯಲ್ಲಿದ್ದಾಗಲೂ ಅವರು ಚೆನ್ನಾಗಿಯೇ ಇದ್ದರು. ಅವರ ಆರೋಗ್ಯದಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಾಣಿಸಿರಲಿಲ್ಲ. ಹಾಗಾಗಿ, ಅವರು ಹುಷಾರಾಗಿ ಬರುತ್ತಾರೆಂದು ನಾನು ವಾಪಸ್ ಬಂದೆ ಎಂದಿದ್ದಾರೆ ಮಲ್ಲಮ್ಮ. ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಆಸ್ಪತ್ರೆಯಿಂದ ಫೋನ್ ಬಂತು. ಪಲ್ಲವಿ ಮೇಡಂ ಅವರ ಸ್ಥಿತಿ ತುಂಬಾ ಸೀರಿಯಸ್ ಆಗಿದೆ, ತಕ್ಷಣ ಬನ್ನಿ ಎಂದು ಹೇಳಿದರು. ಗಾಬರಿ ಆಗಿ ಓಡಿ ಹೋದ್ವಿ. ಆದರೆ ಅಷ್ಟರಲ್ಲಿಯೇ ಅವರು ನಿಧನರಾಗಿದ್ದರು ಎಂದಿದ್ದಾರೆ ಮಲ್ಲಮ್ಮ.
ನಾನು ಇಂದು ಈ ಪರಿ ಬೆಳೆಯಲು ಕಾರಣವಾಗಿದ್ದೇ ಅವರು. ಎಲ್ಲೋ ಮೂಲೆಯಲ್ಲಿ ಇದ್ದ ನನ್ನನ್ನು ಗುರುತಿಸಿ, ಪ್ರೋತ್ಸಾಹಿಸಿ ಬಿಗ್ಬಾಸ್ನಂಥ ದೊಡ್ಡ ವೇದಿಕೆಗೆ ಕಳುಹಿಸಿದರು. ನನ್ನನ್ನು ಇಡೀ ಕರ್ನಾಟಕಕ್ಕೇ ಪರಿಚಯಿಸಿದರು. ಅಂಥ ಮೇಡಂ ಇನ್ನಿಲ್ಲ ಎಂದರೆ ನಂಬಲು ಆಗುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ ಮಲ್ಲಮ್ಮ.


