ರೆಕ್ಸ್' ಎಂಬ 13 ವರ್ಷದ ಸಾಕು ಬೆಕ್ಕು ಕಾಣೆಯಾಗಿದೆ. ಈ ಕಿತ್ತಳೆ ಬಣ್ಣದ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 26 ಲಕ್ಷ ರೂಪಾಯಿ (100,000 ಕತಾರಿ ರಿಯಾಲ್) ಬಹುಮಾನ ಘೋಷಿಸಲಾಗಿದೆ. ತಿಂಗಳುಗಳು ಕಳೆದರೂ ಬೆಕ್ಕು ಪತ್ತೆಯಾಗದ ಕಾರಣ ಈ ಬೃಹತ್ ಬಹುಮಾನದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೋಹಾ: ಪ್ರಾಣಿ ಪ್ರಿಯರಿಗೆ ಬೆಕ್ಕು ಎಂದರೆ ತುಂಬಾ ಇಷ್ಟನೇ. ಅದರಲ್ಲಿಯೂ ಬೆಕ್ಕು ಸಾಕುವವರಿಗೆ ಅದರ ಮೇಲೆ ಒಂದು ರೀತಿಯ ಬಾಂಧವ್ಯ ಬೆಳೆದಿರುತ್ತದೆ. ಮಿಯಾವ್ ಮಿಯಾವ್ ಎನ್ನುತ್ತಾ, ತನ್ನ ಮನೆಯವರ ಕಾಲಿನ ಸುತ್ತಲೂ ಸುತ್ತುತ್ತ, ಮೈ ನೇವರಿಸುವಂತೆ ಅದು ಕೋರುವ ಪರಿಯೇ ರೋಚಕವಾದದ್ದು. ತನ್ನ ಯಜಮಾನರು ಸದಾ ತನ್ನನ್ನು ಮುದ್ದಿಸುತ್ತಲೇ ಇರಲಿ ಎಂದು ಬಯಸುವ ಕಾರಣಕ್ಕೆ ಬೆಕ್ಕು ಹೆಚ್ಚಿನ ಮಂದಿಗೆ ತುಂಬಾ ಖುಷಿ ಕೊಡುವ ಪ್ರಾಣಿಯಾಗಿದೆ. ಅದರಲ್ಲಿಯೂ ಮನೆಯಲ್ಲಿ ಪುಟ್ಟ ಕಂದಮ್ಮಗಳು ಇದ್ದರೆ, ಸಾಕು ಬೆಕ್ಕುಗಳಿಗೆ ಅವರು ಎಷ್ಟೇ ತೊಂದರೆ ಕೊಟ್ಟರೂ ಬೆಕ್ಕುಗಳು ಅವರಿಗೆ ತೊಂದರೆ ಕೊಡದೇ ಇರುವುದು ವಿಶೇಷವೇ.
ಇಂಥ ಮುದ್ದಿನ ಬೆಕ್ಕು ಕಣ್ಮರೆಯಾದರೆ, ಎಂಥವರಿಗೂ ನೋವಾಗುವುದು ಸಹಜ. ಆದರೆ ಇಲ್ಲೊಂದು ಕುಟುಂಬ ಕಾಣೆಯಾಗಿರುವ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 26 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದೆ! ಇದನ್ನು ನಂಬಲು ಸಾಧ್ಯವಾಗದ ಮಾತೇ ಎನ್ನಬಹುದು. ಆದರೆ ಇದಾಗಲೇ ಕೆಲವು ಘಟನೆಗಳಲ್ಲಿ ಕಳೆದುಹೋಗಿರುವ ನಾಯಿಯನ್ನು, ಗಿಳಿಯನ್ನು ಹುಡುಕಿ ಕೊಟ್ಟವರಿಗೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿರುವ ಘಟನೆ ನಡೆದಿದೆ. ಇದೀಗ ಬೆಕ್ಕಿನ ಸರದಿ.
ಎಲ್ಲಿಯ ಘಟನೆ ಇದು?
ಅಂದಹಾಗೆ, ಇದು ಭಾರತದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ಕತಾರ್‌ನ ದೋಹಾದಲ್ಲಿ ನಡೆದಿರುವ ಘಟನೆ. ಕಳೆದು ಹೋಗಿರುವ ಬೆಕ್ಕನ್ನು ಹುಡುಕಿಕೊಟ್ಟವರಿಗೆ 100,000 ಕತಾರಿ ರಿಯಾಲ್ ಬಹುಮಾನ ಘೋಷಿಸಲಾಗಿದೆ. 'ರೆಕ್ಸ್' ಎಂಬ 13 ವರ್ಷದ ಸಾಕು ಬೆಕ್ಕು ಕತಾರ್‌ನಲ್ಲಿ ಕಾಣೆಯಾಗಿದೆ. ಅದನ್ನು ಹುಡುಕಿಕೊಟ್ಟವರಿಗೆ ದೊಡ್ಡ ಬಹುಮಾನ ನೀಡಲಾಗುವುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಗಳು ಹರಿದಾಡುತ್ತಿವೆ. ರೆಕ್ಸ್‌ನ ಚಿತ್ರ ಸೇರಿದಂತೆ ಮಾಹಿತಿಯನ್ನು ಸ್ಥಳೀಯ ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಏನಿದರ ವಿಶೇಷತೆ?
ರೆಕ್ಸ್ ಮಾರ್ಚ್ 21, 2026 ರಂದು ಕಾಣೆಯಾಗಿದೆ. ಕತಾರ್‌ನ ಅಲ್ ರಯಾನ್ ಪ್ರದೇಶದ ಮುರೈಖ್ ಉತ್ತರದ ಅಲ್ ಫುರುಸಿಯಾ ಸ್ಟ್ರೀಟ್ ಪ್ರದೇಶದಿಂದ ಬೆಕ್ಕು ಕಾಣೆಯಾಗಿದೆ ಎಂದು ವರದಿಯಾಗಿದೆ. ರೆಕ್ಸ್ ಕಿತ್ತಳೆ ಬಣ್ಣದ ಗಂಡು ಬೆಕ್ಕು. ಅದರ ಪ್ರಮುಖ ಗುರುತಿನ ಲಕ್ಷಣವೆಂದರೆ ಅದರ ಹಳದಿ ಕಣ್ಣುಗಳು. ಅದಕ್ಕೆ 12-13 ವರ್ಷ. ಮಾರ್ಚ್‌ನಲ್ಲಿ ಕಾಣೆಯಾದ ರೆಕ್ಸ್ ತಿಂಗಳುಗಳು ಕಳೆದರೂ ಪತ್ತೆಯಾಗದಿದ್ದಾಗ ದೊಡ್ಡ ಬಹುಮಾನದ ಘೋಷಣೆ ಮತ್ತೊಮ್ಮೆ ಗಮನ ಸೆಳೆದಿದೆ. ಸಾಕುಪ್ರಾಣಿಯನ್ನು ಮರಳಿ ಪಡೆದವರಿಗೆ 100,000 ಕತಾರ್ ರಿಯಾಲ್‌ಗಳ ದೊಡ್ಡ ಬಹುಮಾನವನ್ನು ಘೋಷಿಸಿದಾಗ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ವಿಷಯವಾಯಿತು. ವರದಿಗಳಲ್ಲಿ ಬಹುಮಾನದ ಮೊತ್ತವನ್ನು ನಿರ್ದಿಷ್ಟಪಡಿಸಲಾಗಿದ್ದರೂ, ಈ ಮೊತ್ತವನ್ನು ಯಾರು ಘೋಷಿಸಿದರು ಅಥವಾ ಅದರ ಮಾಲೀಕರು ಯಾರು ಎಂಬುದನ್ನು ಗುರುತಿಸಲಾಗಿಲ್ಲ.


