ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ತಮಗೆ ಜೈಲಿನಲ್ಲಿ ತೀವ್ರ ಹಿಂಸೆಯಾಗುತ್ತಿದ್ದು, ನೈಜೀರಿಯಾ ಆರೋಪಿಗಳಿಂದ ಕೊಲೆ ಬೆದರಿಕೆ ಇದೆ ಎಂದು ಕೋರ್ಟ್ ಮುಂದೆ ಕಣ್ಣೀರಿಟ್ಟಿದ್ದಾರೆ. ಹಿಂಸೆ ತಾಳಲಾರದೆ ವಿಷ ಕೊಡುವಂತೆ ಅವರು ಬೇಡಿಕೊಳ್ಳುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಪ್ರತ್ಯೇಕ ಬ್ಯಾರಕ್ ನೀಡಲು ಮನವಿ ಮಾಡಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸಿಲುಕಿರುವ ದರ್ಶನ್​ ಅವರ ಸ್ನೇಹಿತೆ ಪವಿತ್ರಾ ಗೌಡ (Pavitra Gowda) ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಸೆಷನ್ಸ್​ ಕೋರ್ಟ್​ ನಡೆಸಿತು. ಈ ಸಂದರ್ಭದಲ್ಲಿ, ಪವಿತ್ರಾ ಗೌಡ ಅವರು ಜೈಲಿನಲ್ಲಿ ಅನುಭವಿಸುತ್ತಿರುವ ಹಿಂಸೆ, ಮಾನಸಿಕ ಯಾತನೆ ಮತ್ತು ನೋವಿನ ಕುರಿತು ಅವರ ಪರ ವಕೀಲ ಎನ್​.ಬಾಲನ್ ಅವರು ಕೋರ್ಟ್​ ಗಮನಕ್ಕೆ ತಂದರು. ಇದೇ ವೇಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾಗಿದ್ದ ಪವಿತ್ರಾ ಗೌಡ ಅವರು ಕೂಡ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಇಂದು 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ, ಇನ್ನೋರ್ವ ವಕೀಲ ನಾರಾಯಣ ಸ್ವಾಮಿ ಅವರೂ ವಾದ ಮಂಡಿಸಿದ್ದು, ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ಹೋದಾಗ, ಹಿಂಸೆ ತಡೆದುಕೊಳ್ಳಲು ಆಗ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿ ಅಂತ ಬೇಡಿಕೊಳ್ತಿದ್ದಾರೆ. ಜೈಲಾಧಿಕಾರಿಗಳು ತುಂಬಾ ಕೆಟ್ಟದಾಗಿ ನಡೆದುಕೊಳ್ತಾರೆ ಎಂದು ಅವರು ಹೇಳಿದ್ದಾರೆ. ಅವರಿಗೆ ಜೈಲಿನಲ್ಲಿ ವಿಪರೀತ ಹಿಂಸೆ ಆಗುತ್ತಿದೆ ಎಂದು ಕೋರ್ಟ್​ ಗಮನಕ್ಕೆ ತಂದರು.

ಇದಾಗಲೇ ವರ್ಷದಿಂದ ಪವಿತ್ರಾ ಗೌಡ ಅವರು ಜೈಲಿನಲ್ಲಿ ಇದ್ದಾರೆ. ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಬಹುತೇಕ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಸಾಕ್ಷಿದಾರರ ಮೇಲೆ ಒತ್ತಡ ಹೇರುವ ಯಾವುದೇ ಸಂದರ್ಭ ಬರುವುದಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ವಕೀಲರು ವಾದಿಸಿದರು.

ಕಣ್ಣೀರಿಟ್ಟ ಪವಿತ್ರಾ ಗೌಡ

ಇದೇ ವೇಳೆ, ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಭಾಗಿಯಾಗಿದ್ದ ಆರೋಪಿ ಪವಿತ್ರಾ ಗೌಡ ಅವರು, ನೈಜೀರಿಯಾ ಮೂಲದ ಆರೋಪಿಗಳ ವರ್ತನೆಯಿಂದ ಬೇಸರ ಆಗ್ತಿದೆ ಎಂದು ನೋವು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ. ಕೋರ್ಟ್ ಸೂಚನೆ ಬಳಿಕ ನೈಜೀರಿಯಾ ಆರೋಪಿಗಳಿಗೆ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದರಿಂದ ಕೋಪಗೊಂಡಿರುವ ಅವರು, ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.. 35 ಜನ ಇರುವ ಬ್ಯಾರಕ್ ನಲ್ಲಿಯೇ ನನ್ನನ್ನು ಇರಿಸಿದ್ದಾರೆ ಎಂದಿರುವ ಪವಿತ್ರಾ ಗೌಡ,, ಪ್ರತ್ಯೇಕ ಬ್ಯಾರಕ್ ನೀಡಲು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಪತ್ರಕ್ಕೆ ಮನವಿ

ಜೈಲಿನಲ್ಲಿ ಇದೇ ರೀತಿ ಮುಂದುವರೆದರೆ ನನಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಬಹುದು. ಕಾಯಿಲೆ‌ ಒಂದು ಬಾರಿ ಬಂದರೆ ಮತ್ತೆ ಹೋಗಲ್ಲ ಎಂದು ಪವಿತ್ರಾ ಗೌಡ ಅವರು ಹೇಳುತ್ತಿರುವುದಾಗಿ ಇದೇ ವೇಳೆ ವಕೀಲರು ಕೋರ್ಟ್​ ಗಮನಕ್ಕೆ ತಂದು, ಪವಿತ್ರಾ ಗೌಡ ಅವರು ಒಂದು ಮನವಿ ಪತ್ರ ನೀಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು. ಬೇರೆ ಕೇಸಿನ ಆರೋಪಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ, ಈ ಕೇಸಿನ ಆರೋಪಿಗಳಿಗೆ ಮಾತ್ರ ಹಿಂಸೆ ಕೊಡ್ತಾ ಇದ್ದಾರೆ. ಆರೋಪಿಯಿಂದ ಕೋರ್ಟ್ ಗೆ ಒಂದು ಪತ್ರ ನೀಡಲು ಅವಕಾಶ ನೀಡಬೇಕು. ಜೈಲಿನಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲ. ಪ್ರತ್ಯೇಕ ಸೆಲ್ ಇರುವ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಮನವಿ‌ ಮಾಡಿದ್ದಾರೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.