ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಆರಂಭಿಸಲು ಮೂಲಸೌಕರ್ಯಗಳ ಕೊರತೆ ಇದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ಕುಷ್ಟಗಿಯಿಂದ ಹುಬ್ಬಳ್ಳಿಗೆ ಸಂಜೆ ಹೊಸ ರೈಲು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಇತರ ನಗರಗಳಿಗೆ ಸಂಪರ್ಕ ಸಿಗಲಿದೆ.
ಹುಬ್ಬಳ್ಳಿಗೆ ಇನ್ನೊಂದು ರೈಲು ಆರಂಭಕ್ಕೆ ಪ್ರಯತ್ನ: ಸಂಸದ ರಾಜಶೇಖರ ಹಿಟ್ನಾಳ
ಕುಷ್ಟಗಿ (ಸೆ.22): ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸೇವೆ ಆರಂಭಿಸುವ ಬೇಡಿಕೆ ಇದ್ದರೂ, ಪ್ರಸ್ತುತ ಕುಷ್ಟಗಿ ರೈಲು ನಿಲ್ದಾಣದಲ್ಲಿ ರೈಲುಗಳ ನಿರ್ವಹಣೆ ಹಾಗೂ ಸರ್ವಿಸಿಂಗ್‌ಗೆ ಅಗತ್ಯವಿರುವ ಮೂಲಸೌಕರ್ಯಗಳ ಕೊರತೆಯಿಂದ ತಕ್ಷಣ ನೇರ ರೈಲು ಆರಂಭಿಸುವುದು ಕಷ್ಟಕರವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಹುಬ್ಬಳ್ಳಿಗೆ ಇನ್ನೊಂದು ರೈಲು ಆರಂಭಕ್ಕೆ ಪ್ರಯತ್ನ
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಷ್ಟಗಿಯಿಂದ ಸಂಜೆ ವೇಳೆಯಲ್ಲಿ ಹುಬ್ಬಳ್ಳಿಗೆ ಮತ್ತೊಂದು ರೈಲು ಸೇವೆ ಆರಂಭಿಸುವ ಮೂಲಕ ಪ್ರಯಾಣಿಕರಿಗೆ ಹುಬ್ಬಳ್ಳಿಯಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕುಷ್ಟಗಿ- ಬೆಂಗಳೂರು ರೈಲು ಓಡಿಸಲು ಯಾಕೆ ಕಷ್ಟ?
ಕುಷ್ಟಗಿಯಿಂದಲೇ ರೈಲನ್ನು ಆರಂಭಿಸಿ ಬೆಂಗಳೂರಿನವರೆಗೆ ನೇರವಾಗಿ ಓಡಿಸಬೇಕಾದರೆ ರೈಲಿನ ನಿರ್ವಹಣೆ, ನೀರು ತುಂಬಿಸುವ ವ್ಯವಸ್ಥೆ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವುದು, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಸೌಲಭ್ಯಗಳು ಹಾಗೂ ಅಗತ್ಯ ಸಿಬ್ಬಂದಿ ವ್ಯವಸ್ಥೆ ಇರಬೇಕು. ಆದರೆ, ಕುಷ್ಟಗಿ ರೈಲು ನಿಲ್ದಾಣದಲ್ಲಿ ಈ ಮೂಲಸೌಕರ್ಯಗಳು ಸದ್ಯಕ್ಕೆ ಕಡಿಮೆ ಇರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಟ್ನಾಳ ಹೇಳಿದರು.
ಸದ್ಯಕ್ಕೆ ಕುಷ್ಟಗಿಯಿಂದ ಸಂಜೆ ವೇಳೆಯಲ್ಲಿ ಹುಬ್ಬಳ್ಳಿಗೆ ರೈಲು ಸೇವೆ ಆರಂಭಿಸುವ ಸಾಧ್ಯತೆ ಪರಿಶೀಲಿಸಲಾಗುವುದು. ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿಯ ಸದಸ್ಯ ಜೆಜೆ ಆಚಾರ್, ಉಮೇಶ ಮಂಗಳೂರು, ಮೈನುದ್ದೀನ್ ಮುಲ್ಲಾ, ಕೇದಾರನಾಥ ತುರಕಾಣಿ ಇದ್ದರು.


