ರಾಜ್ಯದಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಲಂಚದ ಆರೋಪದ ಮೇಲೆ ಐದು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ ಬಿಗ್ ಶಾಕ್ ನೀಡಿದ್ದಾರೆ. ಕಲಬುರಗಿ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ಚಿತ್ರದುರ್ಗ ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಹಾಗೂ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
1. ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ದಾಳಿ
ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆಯೇ ಆಘಾತ ನೀಡಿದ್ದಾರೆ. ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಅಧಿಕಾರಿ ರಾಜೇಶ್ವರಿ ಅವರು ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಲೋಕಾಯುಕ್ತ ತಂಡ ಸ್ಥಳದಲ್ಲೇ ಕಾಯುತ್ತಿತ್ತು. ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ಮುಖ್ಯ ನಿವಾಸ, ಖಾದ್ರಿ ಚೌಕ್‌ನಲ್ಲಿರುವ ಮತ್ತೊಂದು ಮನೆ ಹಾಗೂ ಅವರ ಜೆಸ್ಕಾಂ ಕಚೇರಿ ಸೇರಿದಂತೆ ಒಟ್ಟು ಮೂರು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
2.ಹುಬ್ಬಳ್ಳಿಯಲ್ಲಿ ಹೆಸ್ಕಾಂ AEE ಕಿರಣಕುಮಾರ್ ದಂಪತಿ ಲೋಕಾ ಬಲೆಗೆ
ಹುಬ್ಬಳ್ಳಿಯ ಹೆಸ್ಕಾಂ (HESCOM) ಕಚೇರಿಯ AEE ಕಿರಣಕುಮಾರ್ ಬೈಂದೂರ್ ಅವರಿಗೆ ಸೇರಿದ ನಾಲ್ಕು ಪ್ರಮುಖ ಸ್ಥಳಗಳ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಕಿರಣಕುಮಾರ್ ಅವರ ಪತ್ನಿ ಪ್ರೀತಿ ಸಹ ಹೆಸ್ಕಾಂನಲ್ಲಿಯೇ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಪಾರ್ಕ್‌ನಲ್ಲಿರುವ ಅವರ ನಿವಾಸ, ತಬೀಬ್ ಲ್ಯಾಂಡ್‌ನಲ್ಲಿರುವ ಕಿರಣಕುಮಾರ್ ಕಚೇರಿ, ಪ್ರೀತಿ ಅವರು ಕೆಲಸ ಮಾಡುತ್ತಿರುವ ಗೋಪನಕೊಪ್ಪ ಹೆಸ್ಕಾಂ ಕಚೇರಿ ಹಾಗೂ ಕಿರಣಕುಮಾರ್ ಅವರ ಸಹೋದರನ ಮನೆ ಮೇಲೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ಬುದ್ನಿ, ನಾಲ್ಕೂ ಸ್ಥಳಗಳಲ್ಲಿ ಪ್ರಮುಖ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
3.ಚಿಕ್ಕಬಳ್ಳಾಪುರ ಎಫ್‌ಡಿಎ ದರ್ಶನ್ ಗೌಡಗೆ ಸೇರಿದ ಬೆಂಗಳೂರಿನ 7 ಮನೆಗಳ ಮೇಲೆ ದಾಳಿ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ (FDA) ಆಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಗೌಡ ಎಂಬುವವರ ಮೇಲೆಯೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಪೊಲೀಸರು ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಒಟ್ಟು ೮ ಸ್ಥಳಗಳಲ್ಲಿ ಸುದೀರ್ಘ ಪರಿಶೀಲನೆ ನಡೆದಿದೆ. ಈ ವೇಳೆ ದರ್ಶನ್ ಗೌಡ ಅವರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲೇ ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು ೭ ಐಷಾರಾಮಿ ಮನೆಗಳು ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ.
4. ಬೀದರ್‌ನಲ್ಲಿ ನಿವೃತ್ತ ಕೃಷಿ ಅಧಿಕಾರಿಗೆ ಬಿಗ್ ಶಾಕ್
ಬೀದರ್‌ನಲ್ಲಿ ಕಳೆದ ತಿಂಗಳಷ್ಟೇ ಸೇವಾ ನಿವೃತ್ತಿ ಹೊಂದಿದ್ದ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ ಅವರ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ಸೇವೆಯಲ್ಲಿದ್ದಾಗ ವ್ಯಾಪಕ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹನುಮಂತರಾಯ ನೇತೃತ್ವದ ತಂಡವು ಬೀದರ್ ನಗರದ ಹಕ್ ಕಾಲನಿ ಮನೆ, ಹುಮನಾಬಾದ್‌ನ ಟೀಚರ್ ಕಾಲನಿ ಮನೆ ಹಾಗೂ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
5. ಚಿತ್ರದುರ್ಗ AC ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ FDA ಬಲೆಗೆ
ಇನ್ನೊಂದೆಡೆ, ಚಿತ್ರದುರ್ಗದ ಸಹಾಯಕ ಕಮಿಷನರ್ (AC) ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ (FDA) ಬಸವರಾಜ ಎಂಬುವವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕೆಲ್ಲೋಡು ಗ್ರಾಮದ ಹನುಮಂತಪ್ಪ ಎಂಬುವವರಿಂದ ಪಹಣಿ ತಿದ್ದುಪಡಿ ಮಾಡಿಕೊಡಲು ಬಸವರಾಜ ೪೦,೦೦೦ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಎಸ್ಪಿ ಕವಲೆಪುರೆ ಹಾಗೂ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.
ಲಂಚದ ಬೇಡಿಕೆ ಇಟ್ಟಿದ್ದ ಪೊಲೀಸ್ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಮಂಗಳೂರು: ನಗರದ ಬಜಪೆ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಸೊತ್ತುಗಳನ್ನು ಬಿಡುಗಡೆಗೊಳಿಸಲು ಲಂಚದ ಹಣದ ಬೇಡಿಕೆ ಇಟ್ಟಿದ್ದ ಬಜಪೆ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹಣ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊತ್ತುಗಳನ್ನು ಬಿಡಿಸಲು ಬಾಲಕೃಷ್ಣ ಅವರು 25 ಸಾವಿರ ರು. ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ 15 ಸಾವಿರ ರು.ವನ್ನು ಮುಂಚಿತವಾಗಿ ಆರೋಪಿಗಳಿಂದ ಪಡೆದುಕೊಂಡಿದ್ದರು. ಹೆಚ್ಚುವರಿಯಾಗಿ 5 ಸಾವಿರ ರು.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಆರೋಪಿಗಳು ಮಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆ.21ರಂದು ಬಾಲಕೃಷ್ಣ ಅವರು 5 ಸಾವಿರ ರು. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಬಾಲಕೃಷ್ಣ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


