ಬದಲಾಯ್ತು ನೂತನ 10 ಶಾಸಕರ ಖದರ್, ನಲ್ಲಿಯಲ್ಲಿ ಬರುತ್ತಿದೆ ಬಿಯರ್; ಫೆ.6ರ ಟಾಪ್ 10 ಸುದ್ದಿ!
ಸಂಪುಟ ರಚನೆ ಕಗ್ಗಂಟು ಅಂತ್ಯಕಂಡಿದೆ. ನೂತನ 10 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಭಾಗ್ಯ ದಕ್ಕಿಲ್ಲ. ಇದೀಗ ಬಿಎಸ್‌ವೈಗೆ ಖಾತೆ ಹಂಚಿಕೆ ಸಮಸ್ಯೆ ಎದುರಾಗಿದೆ. ವಿಪಕ್ಷಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಕಳೆದ 18 ದಿನಗಳಿಂದ ನಲ್ಲಿಯಲ್ಲಿ ನೀರಿನ ಬದಲು ಬಿಯರ್, ವಿಸ್ಕಿ ಮದ್ಯ ಬರುತ್ತಿದೆ. ಪ್ರಮಾಣ ವಚನ ಸೇರಿದಂತೆ ಫೆಬ್ರವರಿ 6 ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
ಆರಿದ್ರಾ ನಕ್ಷತ್ರ ಲಗ್ನದಲ್ಲಿ 10 ನೂತನ ಸಚಿವರ ಪ್ರಮಾಣ ವಚನ:ಘಟಾನುಘಟಿಗಳು ಗೈರು
ಗುರುವಾರ ಬೆಳಗ್ಗೆ 10.30ಕ್ಕೆ ಜ್ಯೋತಿಷಿಗಳ ಸಲಹೆ ಮೇರೆಗೆ ಆರಿದ್ರಾ ನಕ್ಷತ್ರದ ಲಗ್ನದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಿದ್ದು, 10 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ದಿಲ್ಲಿಯಿಂದಲೇ ಹೈಕಮಾಂಡ್ ಭರ್ಚಿ: ಸಾಹುಕಾರನಿಂದ ದೂರ ಆಯ್ತು ಕನಸಿನ ಕುರ್ಚಿ
ಅಳೆದು ತೂಗಿ, ವಿಮರ್ಶಿಸಿ, ಮರು ವಿಮರ್ಶಿಸಿ, ಯೋಚಿಸಿ, ಚಿಂತಿಸಿ ಕೊನೆಗೂ 10 ನೂತನ ಜನರಿಗೆ ಯಡಿಯೂರಪ್ಪ ತಮ್ಮ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದಾಯ್ತು. 10 ಜನರು ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾಯ್ತು. ಇದೀಗ ಅವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಬಿಎಸ್‌ವೈಗೆ ದೊಡ್ಡ ಸವಾಲಾಗಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ HDK:ಬಿಜೆಪಿಯಲ್ಲಿ ಏನಾಗುತ್ತೆ..?
ಒಂದೆಡೆ 10 ನೂತನ ಸಚಿವರ ಪ್ರಮಾಣಚನ ಸ್ವೀಕರಿಸಿ ಸಂತಸದಲ್ಲಿದ್ದರೆ ಮತ್ತೊಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಇದು ರಾಜ್ಯ ಬಿಜೆಪಿ ನಾಯಕರಲ್ಲಿ ಒಳಗೊಳಗೆ ಚಿಂತೆಗೀಡುಮಾಡಿದೆ.
ಗಾಂಧಿ ನಿಮಗೆ ಟ್ರೇಲರ್ ಇದ್ದಂತೆ, ನಮಗೆ ಜೀವನ: ವಿಪಕ್ಷಗಳ ಕಾಲೆಳೆದ ಮೋದಿ!
ಮಹಾತ್ಮಾ ಗಾಂಧಿಜೀ ವಿಪಕ್ಷಗಳಿಗೆ ಚಿತ್ರವೊಂದರ ಟ್ರೇಲರ್ ರೀತಿ ಇದ್ದಂತೆ. ಸಮಯ ಬಂದಾಗ ಮಾತ್ರ ವಿಪಕ್ಷಗಳಿಗೆ ಮಹಾತ್ಮಾ ಗಾಂಧಿಜೀ ನೆನಪಾಗುತ್ತಾರೆ. ಆದರೆ ನಮಗೆ ಮಾತ್ರ ಮಹಾತ್ಮಾ ಗಾಂಧಿಜೀ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಲ್ಲಿಯಲ್ಲಿ ನೀರಿನ ಬದಲು ಬಿಯರ್, ರಮ್, ವಿಸ್ಕಿ!
ನಲ್ಲಿಯಲ್ಲಿ ನೀರಿನ ಬದಲು ಬಿಯರ್, ರಮ್, ವಿಸ್ಕಿ ಬರುತ್ತಿದೆ ಅಂದರೆ ಅದಾವುದೋ ಕುಡುಕರ ಸರ್ಗವೇ ಇರಬೇಕು! ಆದರೆ, ಇದಾವುದೋ ಸಿನಿಮಾದ ಕಲ್ಪನಾ ಲೋಕವಲ್ಲ, ಇಂಥದ್ದೊಂದು ನೈಜ ಘಟನೆ ಕೇರಳದಲ್ಲಿ ನಡೆದಿದೆ. ತ್ರಿಶ್ಶೂರ್ ಜಿಲ್ಲೆಯ ಚಲಕ್ಕುಡೆ ಎಂಬ ಪ್ರದೇಶದ 18 ಮನೆಗಳಲ್ಲಿ ಕಳೆದ ಸೋಮವಾರದಿಂದ ಈಚೆಗೆ ಕುಡಿಯುವ ನೀರಿನ ನಲ್ಲಿ ತಿರುಗಿಸಿದರೆ ಅದರಲ್ಲಿ ನೀರಿನ ಜೊತೆ ಮದ್ಯವೂ ಸೇರಿಕೊಂಡು ಬರುತ್ತಿದೆ. ಮದ್ಯದ ಘಾಟು ವಾಸನೆಗೆ ಜನರು ಬೇಸ್ತು ಬಿದ್ದಿದ್ದಾರೆ.
ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ಶುಭಾಶಯಗಳ ಮಹಾಪೂರ!
ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿ ಚಿಕ್ಕ ವಯಸ್ಸಿನಲ್ಲೇ ಸೆಲೆಬ್ರೆಟಿ. ಸಾಮಾಜಿಕ ಜಾಲತಾಣದಲ್ಲಿ ಝಿವಾ ಧೋನಿಗೆ 15 ಲಕ್ಷ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ಎಲ್ಲಾ ಗಣ್ಯರ ಜೊತೆ ಝಿವಾ ಕಾಣಿಸಿಕೊಂಡಿದ್ದಾರೆ. ಇಂದು(ಫೆ.06) ಝಿವಾ ಧೋನಿಗೆ ಹುಟ್ಟು ಹಬ್ಬದ ಸಂಭ್ರಮ.
ಮೈಸೂರಿನಲ್ಲಿ ಯಶ್- ದುಲ್ಖರ್; Gymನಲ್ಲಿ ಮೀಟ್ ಆದ ಸ್ಟಾರ್ ನಟರು, ಮಾತನಾಡಿದ್ದು ಊಟದ ಬಗ್ಗೆ!...
ಕೆಲವು ದಿನಗಳಿಂದ ಮೈಸೂರಿನ ಇನ್ಫೋಸಿಸ್ ಕಂಪನಿಯಲ್ಲಿ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿದ್ದು, ರಾಕಿ ಬಾಯ್ ಯಶ್ ಪಾಲ್ಗೊಂಡಿದ್ದಾರೆ. ಇದೇ ವೇಳೆ ಮಲಯಾಳಂ ಖ್ಯಾತ ನಟ ಮುಮ್ಮಟಿ ಮಗ ದುಲ್ಖರ್ ಸಲ್ಮಾನ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ತಮ್ಮ ತವರೂರಿಗೆ ಆಗಮಿಸಿರುವ ದುಲ್ಖರ್‌ನನ್ನು ಯಶ್ ಭೇಟಿ ಮಾಡಿ ಮಾತನಾಡಿಸಿದ್ದಾರೆ. ಇದರ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್
ಮದುವೆಯಲ್ಲಿ ಧಾರೆ ಸೀರೆ ಮಹತ್ವವಾದದ್ದು. ಆದರೆ ಧಾರೆ ಸೀರೆ ವಿಚಾರಕ್ಕೆ ಮದುವೆಯೇ ಮುರಿದುಬಿದ್ದಂತಹ ವಿಚಾರ ಕೇಳಿದ್ದೀರಾ..? ಹಾಸನದಲ್ಲಿ ಧಾರೆ ಸೀರೆ ವಿಚಾರಕ್ಕಾಗಿಯೇ ವಿವಾಹ ಮುರಿದು ಬಿದ್ದ ಘಟನೆ ನಡೆದಿದೆ.
ಬಹಳ ಸಮಯದ ಬಳಿಕ ಗುಡ್ ನ್ಯೂಸ್ ಕೊಟ್ಟ RBI: ಸಾಲದ ಬಡ್ಡಿದರ...!
ಭಾರತೀಯ ರಿಸರ್ವ್ ಬ್ಯಾಂಕ್ 2019-20ನೇ ಸಾಲಿನ 6ನೇ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಣಯ ಕೈಗೊಂಡಿದೆ. ಈ ಹಿಂದಿನ ಶೇ. 5.15ರ ರೆಪೋ ದರದ ಯಥಾಸ್ಥಿತಿ ಮುಂದುವರೆಯಲಿದ್ದು, ರಿವರ್ಸ್ ರೆಪೋ ದರ ಕೂಡ ಈ ಹಿಂದಿನ ಶೇ.4.9ರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಯಶಸ್ಸಿನ ಬೆನ್ನಲ್ಲೇ ಕಿಯಾಗೆ ಹೊಡೆತ, ರಾಜಕೀಯದಾಟಕ್ಕೆ 7ಸಾವಿರ ಕೋಟಿ ವ್ಯರ್ಥ!...
ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿತು. ಯಶಸ್ಸಿನ ಬೆನ್ನಲ್ಲೇ ಆಂಧ್ರ ಪ್ರದೇಶದ ರಾಜಕೀಯ ಕೆಸರೆರಚಾಟಕ್ಕೆ ಕಿಯಾ ನಲುಗಿ ಹೋಗಿದೆ. ಅನಂತಪುರದಲ್ಲಿರುವ ದೇಶದ ಏಕೈಕ ಕಿಯಾ ಘಟಕ ಸ್ಥಳಾಂತರಕ್ಕೆ ನಿರ್ಧರಿಸಿದೆ.