ಆಲೂರಿನಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಭೂಮಿ ಕಳೆದುಕೊಳ್ಳುವ ರೈತರು ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ. ರೈಲ್ವೆ ಸಚಿವರೊಂದಿಗೆ ಸಮಾಲೋಚಿಸಿ ಸೂಕ್ತ ಬೆಲೆ ಕೊಡಿಸುವ ಭರವಸೆ ನೀಡಿದ್ದಾರೆ.

ಆಲೂರು: ಚಿಕ್ಕಮಂಗಳೂರಿಂದ ಬೇಲೂರು ಮಾರ್ಗವಾಗಿ ಆಲೂರನ್ನು ಸಂಪರ್ಕಿಸುವ ರೈಲ್ವೆ ಹೊಸ ಮಾರ್ಗಕ್ಕೆ ಹೊಳಿ ನಿರ್ಮಾಣಕ್ಕಾಗಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಇದಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚು ಬೆಲೆ ನೀಡಲು ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತರುವಂತೆ ಒತ್ತಾಯಿಸಿ, ತಾಲೂಕು ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ್ (ಪಾಣಿ ) ನೇತೃತ್ವದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮ ನಿಮಿತ್ತ ಅರಕಲಗೂಡಿಗೆ ಆಗಮಿಸಿದ್ದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ರೈತರು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು. ಈ ಯೋಜನೆಗಾಗಿ ಜಮೀನು ಕಳೆದುಕೊಳ್ಳುತ್ತಿರುವ ತಾಲೂಕಿನ ರೈತರಿಗೆ ಬಿಡಿಗಾಸು ನೀಡಲಾಗುತ್ತಿದೆ ಎಂಬುದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟ ರೈತರು ತಮ್ಮ ಭೂಮಿಗೆ ಹೆಚ್ಚುವರಿ ಹಣ ಕೊಡಿಸಿ ಕೊಡುವಂತೆ ಅವರನ್ನು ಕೋರಿದರು.

ಮುಂದಿನ ತಿಂಗಳ 18ನೇ ತಾರೀಖಿನಂದು ದೆಹಲಿಗೆ ಆಗಮಿಸುವಂತೆ ಹೆಚ್‌ಡಿಕೆ ಹೇಳಿಕೆ

ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಂದಿನ ತಿಂಗಳ 18ನೇ ತಾರೀಖಿನಂದು ದೆಹಲಿಗೆ ಆಗಮಿಸುವಂತೆ ತಿಳಿಸಿದ್ದು, ಆ ದಿನ ರೈಲ್ವೆ ಸಚಿವರನ್ನು ಭೇಟಿ ಮಾಡಿಸಿ ಈ ಸಂಬಂಧವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿ ರೈತರ ಭೂಮಿಗೆ ಸೂಕ್ತ ಬೆಲೆ ಕೊಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸುದರ್ಶನ್, ರಕ್ಷಿತ್ ಗೋಪಾಲ್ ಪವನ್ ಯೋಗೀಶ್ ಗಿರಿ ಮಂಜು ಮುಂತಾದವರು ಉಪಸ್ಥಿತರಿದ್ದರು.

ಪುಟ್ಟಪರ್ತಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಕರವೇ ಆಗ್ರಹ

ಬಾಗೇಪಲ್ಲಿ: ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ ರೈಲು ಮಾರ್ಗ ನಿರ್ಮಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ ರೈಲು ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ನಂತರ ಪ್ರತಿಭಟನಕಾರರು ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಕರವೇ ಅಧ್ಯಕ್ಷ್ಷ ಹರೀಶ್, ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಆಂಧ್ರದ ಸಾಯಿಬಾಬಾ ಪುಟ್ಟಪರ್ತಿಗೆ ಕೇಂದ್ರ ಸರ್ಕಾರ ರೈಲು ಮಾರ್ಗ ಕಾಮಗಾರಿ ನಿರ್ಮಾಣಕ್ಕೆ 20 ವರ್ಷಗಳು ಕಳೆದರೂ ಸಹ ಇದುವರೆವಿಗೂ ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ತಾಲೂಕಿನ ಜನರಲ್ಲಿ ನಿರಾಸೆ ಮೂಡಿಸಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

2009ರಲ್ಲಿ ಯಶವಂತಪುರ- ಸತ್ಯಸಾಯಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಯೋಜನೆ ಮಾಡಲು ಅಂದಿನ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯಿಲಿ, ಮಾಜಿ ಶಾಸಕ ಎನ್.ಸಂಪಂಗಿ ಅವರು ಅಂದಿನ ರೈಲ್ವೆ ಇಲಾಖೆಯ ಸಚಿವ ಮಮತಾ ಬ್ಯಾನರ್ಜಿ ಅವರ ಮೇಲೆ ಒತ್ತಡ ಹಾಕಿದ್ದರು. ಅವರು ಮಂಡಿಸಿದ ಬಜೆಟ್ನಲ್ಲಿ ಈ ರೈಲು ಯೋಜನೆ ಕಾಮಗಾರಿಗೆ 7480 ಕೋಟಿ ರು.ಗಳನ್ನು ಮೀಸಲಿಟ್ಟು, ಅನುದಾನ ಬಿಡುಗಡೆ ಮಾಡಿದ್ದರು. ಅದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಧೋರಣೆಯಿಂದಾಗಿ ಈ ಯೋಜನೆ ನೆನಗುದ್ದಿಗೆ ಬಿದಿದೆ.

ರೈಲು ಸಂಚಾರದಿಂದ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಇದರಿಂದ ತಕ್ಷಣ ಸಂಬಂಧಪಟ್ಟ ಈ ಭಾಗದ ಜನಪ್ರತಿನಿಧಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಿ ರೈಲು ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಆಗ್ರಹಿಸಿದ ಅವರು ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿ ರೈಲು ಕಾಮಗಾರಿ ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಕರವೇ ಪ್ರಧಾನ ಕಾರ್ಯದರ್ಶಿ ರಿಯಾಜ್ವುಲ್ಲಾ, ಉಪಾಧ್ಯಕ್ಷ ಅಲೀಮ್, ಜಿಲ್ಲಾ ಮಹಿಳಾ ಅಧ್ಯಕ್ಷರು ಸುಜಾತಮ್ಮ, ತಾಲೂಕು ಮಹಿಳಾ ಅಧ್ಯಕ್ಷೆ ಗಂಗರತ್ನಮ್ಮ, ಉಪಾಧ್ಯಕ್ಷರು ರಘು, ನಗರ ಘಟಕ ಅಧ್ಯಕ್ಷರು ಜಾನಿ, ಮುಖಂಡರಾದ ರಾಮರೆಡ್ಡಿ, ಶಿವಕುಮಾರ್, ಮಂಜುನಾಥ ನಾಯ್ಕೆ, ನರಸಿಂಹಮೂರ್ತಿ, ಶಂಕರ್, ಶಂಕರ್, ಅನ್ವರ್, ಬಾಬಾ, ರಹಮತ್ತುಲ್ಲಾ, ಮಂಜುನಾಥ, ರಾಜೇಶ್ವರಿ, ಜರೀನಮ್ಮ, ಚಾಂದ್ ಬಾಷ, ಅನಿಲ್, ಆಕೀಲ್, ಜಬಿ, ವೆಂಕಟೇಶ್ ಮತ್ತಿತರರು ಇದ್ದರು.