ನಲ್ಲಿಯಲ್ಲಿ ನೀರಿನ ಬದಲು ಬಿಯರ್, ರಮ್, ವಿಸ್ಕಿ!
ನಲ್ಲಿಯಲ್ಲಿ ನೀರಿನ ಬದಲು ಬಿಯರ್, ರಮ್, ವಿಸ್ಕಿ!| ಕೇರಳದಲ್ಲೊಂದು ವಿಚಿತ್ರ ಘಟನೆ
ತ್ರಿಶ್ಶೂರ್[ಫೆ.06]: ನಲ್ಲಿಯಲ್ಲಿ ನೀರಿನ ಬದಲು ಬಿಯರ್, ರಮ್, ವಿಸ್ಕಿ ಬರುತ್ತಿದೆ ಅಂದರೆ ಅದಾವುದೋ ಕುಡುಕರ ಸರ್ಗವೇ ಇರಬೇಕು! ಆದರೆ, ಇದಾವುದೋ ಸಿನಿಮಾದ ಕಲ್ಪನಾ ಲೋಕವಲ್ಲ, ಇಂಥದ್ದೊಂದು ನೈಜ ಘಟನೆ ಕೇರಳದಲ್ಲಿ ನಡೆದಿದೆ. ತ್ರಿಶ್ಶೂರ್ ಜಿಲ್ಲೆಯ ಚಲಕ್ಕುಡೆ ಎಂಬ ಪ್ರದೇಶದ 18 ಮನೆಗಳಲ್ಲಿ ಕಳೆದ ಸೋಮವಾರದಿಂದ ಈಚೆಗೆ ಕುಡಿಯುವ ನೀರಿನ ನಲ್ಲಿ ತಿರುಗಿಸಿದರೆ ಅದರಲ್ಲಿ ನೀರಿನ ಜೊತೆ ಮದ್ಯವೂ ಸೇರಿಕೊಂಡು ಬರುತ್ತಿದೆ. ಮದ್ಯದ ಘಾಟು ವಾಸನೆಗೆ ಜನರು ಬೇಸ್ತು ಬಿದ್ದಿದ್ದಾರೆ.
ಬಸ್ ನಿಲ್ದಾಣದ ಪಕ್ಕದ ಸೊಲೊಮನ್ಸ್ ಅವೆನ್ಯು ಅಪಾರ್ಟ್‌ಮೆಂಟ್‌ನ ನಿವಾಸಿಗಳು ತಮ್ಮ ಕಟ್ಟಡದಲ್ಲಿ ಭಾನುವಾರ ಸಂಜೆ ಮದ್ಯದ ಘಾಟು ವಾಸನೆ ಬರುತ್ತಿರುವುದನ್ನು ಗಮನಿಸಿದ್ದರು. ಮರುದಿನ ಇದಕ್ಕೆ ಏನು ಕಾರಣ ಎಂಬ ಸಂಗತಿ ತಿಳಿದುಬಂದಿದೆ.
ಆರು ವರ್ಷದ ಹಿಂದೆ ಈ ಪ್ರದೇಶದಲ್ಲಿ ಇದ್ದ ಬಾರ್‌ವೊಂದನ್ನು ಬಂದ್ ಮಾಡಲಾಗಿತ್ತು. ಬಳಿಕ ಅದರಲ್ಲಿ ಇದ್ದ ಮದ್ಯದ ಬಾಟಲಿಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿ ಹಾಗೇ ಇಟ್ಟುಕೊಂಡಿದ್ದರು. ಆದರೆ, ಮದ್ಯದ ಬಾಟಲಿಗಳು ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ 6000 ಲೀಟರ್‌ನಷ್ಟುಮದ್ಯವನ್ನು ಅಧಿಕಾರಿಗಳು ಅಪಾರ್ಟ್‌ಮೆಂಟ್ ಪಕ್ಕದ ಗಟಾರಕ್ಕೆ ಸುರಿದಿದ್ದರು. ಆದರೆ ಆ ಚರಂಡಿ ಅಪಾರ್ಟ್‌ಮೆಂಟ್‌ನ ಬಾವಿಗೆ ಸಮೀಪದಲ್ಲೇ ಇದ್ದ ಕಾರಣ, ಮದ್ಯದ ಅಂಶ ಮಣ್ಣಿನಲ್ಲಿ ಇಂಗಿ ಬಾವಿಯ ನೀರಿನ ಜೊತೆ ಬೆರೆತುಕೊಂಡಿದೆ. ಅಪಾರ್ಟ್‌ಮೆಂಟ್ ನಿವಾಸಿಗಳು ಎಂದಿನಂತೆ ಬಾವಿಯಿಂದ ನೀರು ತೆಗೆದಾಗ ಅದರಲ್ಲಿ ಮದ್ಯದ ಅಂಶ ಸೇರಿಕೊಂಡಿರುವುದು ಕಂಡುಬಂದಿದೆ. ಮನೆಯಲ್ಲಿ ನಲ್ಲಿ ತಿರುಗಿದರೂ ಅದರಲ್ಲಿ ಮದ್ಯ ಬರೆತಿರುವ ನೀರು ಬರುತ್ತಿದೆ. ಹೀಗಾಗಿ ಬಾವಿಯನ್ನು ಶುಚಿಗೊಳಿ, ಶುದ್ಧ ನೀರು ಸಂಗ್ರಹ ಆಗುವ ವರೆಗೂ ನೀರಿನ ಬಳಕೆಯನ್ನು ನಿವಾಸಿಗಳು ನಿಲ್ಲಿಸಿದ್ದಾರೆ.
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ