ಬೆಂಗಳೂರಿನ ಬೆಳಕಿನ ಹಿಂದೆ ಇರುವ ಕತ್ತಲ ಬದುಕುಗಳು, ಪ್ರೀತಿ, ಕ್ರೈಮ್, ರಾಜಕೀಯ ಮತ್ತು ವೇಶ್ಯಾವಾಟಿಕೆಯಂತಹ ಹಲವು ಆಯಾಮಗಳನ್ನು ಕಟ್ಟಿಕೊಡುವ ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾ ಹೇಗಿದೆ?
ಆರ್.ಕೇಶವಮೂರ್ತಿ
ಹುಷಾರಾಗಿ ಹೋಗಿ ಬಾ... ಮನೆಯಿಂದ ಹೊರಡುವ ಮುನ್ನ ಹಿರಿಯರು ಹೇಳುವ ಮಾತಿದು. ನಾವು ನಡಿಯೋ ದಾರಿಯಲ್ಲಿ ಕಲ್ಲು, ಮುಳ್ಳು, ಹಳ್ಳ- ಗುಂಡಿಗಳು ಇದ್ದಂತೆ ನಮ್ಮ ಬದುಕಿನಲ್ಲೂ ನೋವು- ಸಂಕಷ್ಟಗಳು, ಮುಗ್ಧತೆಗಳು ತಂದುಕೊಳ್ಳುವ ಅಪಾಯಗಳು ಇರುತ್ತವೆ. ಇವು ಜೀವನದ ಜೊತೆಗೆ ಹಗಲು- ರಾತ್ರಿ ಎನ್ನದೆ ಆಟ ಆಡೋಕ್ಕೆ ಶುರು ಮಾಡುತ್ತವೆ. ಬದುಕಿನ ಇಂಥ ಕತ್ತಲು- ಬೆಳಕಿನ ಆಟಗಳನ್ನು ಎದರಿಸುತ್ತಲೇ ಹೇಗೆ ಜೀವನ ರೂಪಿಸಿಕೊಳ್ಳಬಹುದು, ಸಿಕ್ಕ ಬೊಗಸೆಯಷ್ಟು ಪ್ರೀತಿಯನ್ನು ಜೋಪಾನ ಮಾಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುವ ಚಿತ್ರ ‘ಸಿಟಿ ಲೈಟ್ಸ್’.
ಚಿತ್ರದಲ್ಲಿ ನಿರ್ದೇಶಕ ದುನಿಯಾ ವಿಜಯ್ ಬದುಕಿನ ಪಾಠಗಳನ್ನು ಹೇಳುವ ಸಾಹಸ ಮಾಡಿಲ್ಲ. ಬೆಂಗಳೂರಿನಂತಹ ದೊಡ್ಡ ನಗರದ ಇಕ್ಕಟ್ಟಾದ ಗಲ್ಲಿ, ಕಾಲು ದಾರಿಗಳಲ್ಲಿ ಕತೆ ಸಂಚಾರ ಮಾಡುತ್ತದೆ. ಆ ಕತೆ ಹಿಂದೆಯೇ ಪ್ರೇಕ್ಷಕರು ಹೆಜ್ಜೆ ಹಾಕುತ್ತಾರೆ. ದೊಡ್ಡ ನಗರಗಳ ಬೀದಿ ದೀಪಗಳಡಿಯ ಚಿಕ್ಕ ಚಿಕ್ಕ ಬದುಕಿನ ಚಿತ್ರಣಗಳ ವಾಸ್ತವ ದರ್ಶನಕ್ಕೆ ನೇರ ಸಾಕ್ಷಿಯಾಗುತ್ತಾರೆ. ಹಾಗೆ ನೋಡುತ್ತಾ ‘ಜೀವನದಲ್ಲಿ ಹುಷಾರಾಗಿ ಇರಬೇಕು’ ಎನ್ನುವ ಯೋಚನೆ ಹುಟ್ಟಿಗೆ ಈ ಚಿತ್ರ ಕಾರಣವಾಗುತ್ತದೆ.
ದೂರದಿಂದ ಕಾಣುವ ಸುಂದರವಾದ ನಗರಗಳಿಗೆ ಮತ್ತೊಂದು ಮುಖವೂ ಇದೆ, ಹಾಗೆ ದೂರದಿಂದ ಬೆಳಕಿನಂತೆ ಕಾಣುವ ದೀಪದಡಿ ಕತ್ತಲೂ ಇದೆ ಎಂದು ಹೇಳುತ್ತಾ ಸಣ್ಣ ಸಣ್ಣ ಎಪಿಸೋಡ್‌ಗಳಂತೆ ಸಾಗುವ ಚಿತ್ರಕ್ಕೆ ಗೆಳೆಯನಂತೆ ನಿಲ್ಲುವುದು ಶಿವಸೇನಾ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ, ಹಾಡುಗಳು. ಪೊಲೀಸು, ರಾಜಕೀಯ, ವೇಶ್ಯಾವಾಟಿಕೆ, ಚಿಗುರು ಮೀಸೆ ಹುಡುಗರ ಕ್ರೈಮ್ ಲೋಕ, ಮುಗ್ಧತೆಯ ಪ್ರೀತಿ... ಹೀಗೆ ಹಲವು ದಾರಿಗಳಲ್ಲಿ ಸಿನಿಮಾ ಸಾಗುತ್ತದೆ.
ಚಿತ್ರ: ಸಿಟಿ ಲೈಟ್ಸ್
ತಾರಾಗಣ: ವಿನಯ್ ರಾಜ್‌ಕುಮಾರ್, ಮೋನಿಷಾ, ಉಮಾಶ್ರೀ, ಪುನೀತ್, ವೀರ, ಮಾಸ್ತಿ, ಯುಗ ಚಂದ್ರು, ಜಾಲಿ ಜಾಕ್
ನಿರ್ದೇಶನ: ದುನಿಯಾ ವಿಜಯ್
ರೇಟಿಂಗ್: 3
ಇಲ್ಲಿನ ಪ್ರತಿ ಪಾತ್ರಕ್ಕೂ ಒಂದು ಕತೆ ಮತ್ತು ಖದರ್ ಎರಡೂ ಇದೆ. ಅಮ್ಮಚ್ಚಿಯಾಗಿ ಉಮಾಶ್ರೀ, ರೌಡಿ ಪಾತ್ರಧಾರಿಗಳಾದ ವೀರ, ಪುನೀತ್ ಸಾಕ್ಷಿ. ಈ ಚಿತ್ರದ ಮೂಲಕ ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಭರವಸೆಯ ನಟಿಯಾಗಿ ಮೋನಿಷಾ ಪರಿಚಯಗೊಂಡಿದ್ದಾರೆ. ಇನ್ನೂ ಸಹಜ ನಟನೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ ವಿನಯ್ ರಾಜ್‌ಕುಮಾರ್.


