‘ವಾರಿಯರ್’ ಸಿನಿಮಾ ವಿಮರ್ಶೆ: ಉಮೇಶ್ ಹೆಬ್ಬಾಳ್ ನಿರ್ದೇಶಿಸಿ ನಟಿಸಿರುವ ‘ವಾರಿಯರ್’ ಹಳ್ಳಿ, ಶಾಲೆ, ಹೆಣ್ಣು ಮಕ್ಕಳ ಶಿಕ್ಷಣ, ರೈತರ ಸಮಸ್ಯೆಗಳು ಮತ್ತು ಮಾನವ-ವನ್ಯಜೀವಿ ಸಂಘರ್ಷದಂತಹ ವಿಭಿನ್ನ ಅಂಶಗಳನ್ನು ಒಳಗೊಂಡಿರುವ ಸಿನಿಮಾ.
ಕೇಶು
ಅನ್ಯಾದ ವಿರುದ್ಧ ಹೋರಾಟ ಮಾಡುವ ಪರಂಪರೆಯ ಕುಟುಂಬದದಿಂದ ಬಂದಿರುವ ಯುವಕನ ಸುತ್ತಾ ತೆರೆದುಕೊಳ್ಳುವ ಕತೆಯನ್ನು ಒಳಗೊಂಡ ಚಿತ್ರವಿದು. ಹಳ್ಳಿಯಲ್ಲಿ ಒಂದು ಶಾಲೆ ಇಲ್ಲದೆ ಹೋದರೆ ಏನೆಲ್ಲ ಸಮಸ್ಯೆಗಳು ಆಗುತ್ತವೆ ಎಂಬುದು ಚಿತ್ರದ ಮುಖ್ಯ ತಿರುವು. ಅದರಲ್ಲೂ ಶಾಲೆ ಇಲ್ಲದೆ ಹೋದರೆ ಹೆಣ್ಣು ಮಕ್ಕಳನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರದಲ್ಲಿ ನೈಜವಾಗಿ ತೋರಿಸಿದ್ದಾರೆ.
ಹಳ್ಳಿ, ಶಾಲೆ, ಹೆಣ್ಣು ಮಕ್ಕಳ ಶಿಕ್ಷಣ, ರೈತರ ಸಮಸ್ಯೆಗಳು, ಕಾಡಿನಿಂದ ನಾಡಿಗೆ ಪ್ರಾಣಿಗಳು ಯಾಕೆ ಬರುತ್ತವೆ ಇತ್ಯಾದಿಗಳ ಅಂಶಗಳನ್ನು ‘ವಾರಿಯರ್’ ಸಿನಿಮಾ ಒಳಗೊಂಡಿದ್ದು, ಇಲ್ಲಿ ಕತೆಯೇ ಹೀರೋ. ಮನುಷ್ಯರು ಮಾಡುವ ಅನಾಹುತಗಳನ್ನು ಕಾಡಿನ ಪ್ರಾಣಿಗಳ ಮೇಲೆ ಹಾಕುವ ಸಂಚುಗಳನ್ನು ರೋಚಕವಾಗಿ ನಿರೂಪಿಸಲಾಗಿದೆ. ಇದು ಕನ್ನಡಕ್ಕೆ ಹೊಸದು. ನಿರ್ದೇಶಕ ಉಮೇಶ್ ಹೆಬ್ಬಾಳ್ ಅವರು ಉತ್ತಮವಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಕತೆಗೆ ಧ್ರುವ ಹಾಗೂ ಗೌರಿ ಪಾತ್ರಗಳು ನ್ಯಾಯ ಸಲ್ಲಿಸುತ್ತವೆ. ಇನ್ನೂ ಊರಿನ ಗೌಡನ ಪಾತ್ರದಲ್ಲಿ ಬಲ ರಾಜವಾಡಿ ಅವರು ಚಿತ್ರದ ಮುಖ್ಯ ಕೇಂದ್ರಬಿಂದುವಾಗಿ ನಿಲ್ಲುತ್ತಾರೆ. ಇಡೀ ಕತೆ ಹಳ್ಳಿ ಹಿನ್ನೆಲೆಯಲ್ಲಿ ನಡೆಯುವುದು, ಮೇಕಿಂಗ್ ಹಾಗೂ ಇತ್ತೀಚಿಗೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಅಂಶಗಳು ಈ ಚಿತ್ರದಲ್ಲಿರುವುದು ‘ವಾರಿಯರ್’ನ ಪ್ಲಸ್ ಪಾಯಿಂಟ್. ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಫ್ಲೇವರ್ ಇರುವ ಚಿತ್ರವಿದು.
ಚಿತ್ರ: ವಾರಿಯರ್
ತಾರಾಗಣ: ಉಮೇಶ್ ಹೆಬ್ಬಾಳ್, ಸೌಮ್ಯ ಸುಭಾಷ್, ಬಾಲ ರಾಜವಾಡಿ, ರೋಹಿಣಿ ಕಶ್ಯಪ್, ರಾಯ್ ಬಡಿಗೇರ್, ಸಿದ್ದು ಮಂಡ್ಯ
ನಿರ್ದೇಶನ: ಉಮೇಶ್ ಹೆಬ್ಬಾಳ್
ರೇಟಿಂಗ್: 3
ನಿರ್ದೇಶನದ ಜೊತೆಗೆ ನಟನೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಉಮೇಶ್ ಹೆಬ್ಬಾಳ್ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸೌಮ್ಯ ಸುಭಾಷ್, ರೋಹಿಣಿ ಕಶ್ಯಪ್, ರಾಯ್ ಬಡಿಗೇರ್, ಸಿದ್ದು ಮಂಡ್ಯ ಅವರ ಪಾತ್ರಗಳು ಕತೆಗೆ ಪೂರವಾಗಿವೆ. ಸರಳವಾಗಿರುವ ಒಂದು ಒಳ್ಳೆಯ ಕತೆ ಬಯಸುವವರಿಗೆ ‘ವಾರಿಯರ್’ ಚಿತ್ರವನ್ನು ಧಾರಾಳವಾಗಿ ನೋಡಬಹುದು.


