Asianet Suvarna News Asianet Suvarna News

ಮರುಭೂಮಿಯಲ್ಲೂ ಗಿಡ ಬೆಳೆಯಬಹುದೆಂದು ತೋರಿಸಿ ಕೊಟ್ಟ ಸಾಹಸಿ ಈತ

Jun 5, 2018, 8:44 PM IST

ಭಯಾನಕವಾಗಿ ವಿಸ್ತರಿಸುವ ಮರಳುಗಾಡನ್ನು ತಡೆದು ನಿಲ್ಲಿಸಲು ಯಕೋಬಾ ಸವಾಡೋಗೋ ನಿರ್ಧರಿಸಿದಾಗ ಎಲ್ಲರೂ ಮುಸಿಮುಸಿ ನಕ್ಕರು, ಬಡಪಾಯಿ ಮನುಷ್ಯನೆಲ್ಲಿ, ಬೃಹತ್ ಮರಳುಗಾಡೆಲ್ಲಿ ಎಂದು. 80ರ ದಶಕದಲ್ಲಿ ಆಫ್ರಿಕಾ ಭೀಕರ ಬರಗಾಲದಿಂದ ನರಳಿದಾಗ ಬುರ್ಕಿನಾ ಫಾಸೊ ಅದಕ್ಕೆ ಹೊರತಾಗಿರಲಿಲ್ಲ. ಜನ ಎಲ್ಲ ಗುಳೇ ಹೋದರು. ಯಕೋಬಾ ಮಾತ್ರ ಹಳ್ಳಿಯಲ್ಲೇ ಉಳಿಯಬಯಸಿ ಗಿಡ ನೆಟ್ಟು ಮರಳಿನ ದಾಳಿಯನ್ನು ತಡೆಯಲು ಸಜ್ಜಾದರು. ಶಾಲೆಯ ಬಾಗಿಲನ್ನೇ ಕಾಣದ ಈ ಹಳ್ಳಿ ಗಮಾರನನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಶುರುವಾಯಿತು ಅವರ ಏಕಾಂಗಿ ಯಾತ್ರೆ. 20 ವರುಷ ನಿರಂತರ ಗಿಡ ನೆಡುವ ಕಾಯಕದಲ್ಲಿ 50 ಎಕರೆಯ ಬೆಂಗಾಡು ಹಸಿರು ನಗುವ ಕಾಡಾಯಿತು. ಅರವತ್ತು ಬಗೆಯ ಸಸ್ಯ ಪ್ರಭೇದಗಳು ಮರಳಿನ ವಿಸ್ತರಣೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ ಎಂದು ಯಕೋಬಾ ನಿರೂಪಿಸಿದರು. ವರ್ಷದಲ್ಲಿ ಯಾವಾಗಲೂ ನಾಲ್ಕಾರು ಬೀಳುವ ಮಳೆಯನ್ನೇ ನೆಲದಲ್ಲಿ ಹಿಡಿದಿರಿಸಿ ವರ್ಷಪೂರ್ತಿ ತೇವ ದೊರೆಯುವಂತೆ ಮಾಡುವ ‘ಜೈ’ ಎಂಬ ಪ್ರಾಚೀನ ಗಿಡ ನೆಡುವ ಪದ್ಧತಿಯನ್ನು ಯಕೋಬಾ ಅನುಸರಿಸಿದ್ದರು. ಅವರು ಬೆಳೆಸಿದ ಕಾಡುಗಳು ಕ್ರಮೇಣ ಮಣ್ಣಿನ ಸವಕಳಿ ತಡೆದು ಮಳೆಯ ನೀರಿಂಗಿಸುತ್ತ ಸುತ್ತಮುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶವನ್ನು ಕೃಷಿಯೋಗ್ಯವಾಗಿಸಿದ್ದನ್ನು ಜಗತ್ತು ಗುರುತಿಸಿತು. 2010 ರಲ್ಲಿ ಯಕೋಬಾ ಅವರ ಸಾಧನೆಯನ್ನು ಪರಿಚಿಯಿಸುವ ‘The Man Who Stopped the Desert’ ಎಂಬ ಸಾಕ್ಷ್ಯಚಿತ್ರ ಅವರನ್ನು ಜಗದ್ವಿಖ್ಯಾತಗೊಳಿಸಿತು.ಉಪಗ್ರಹದ ಮೂಲಕ ಅವರು ಬೆಳೆಸಿದ ಕಾಡಿನ ವಿಸ್ತಾರವನ್ನು ಸೆರೆಹಿಡಿಯಲಾಗಿದೆ.

 

ಯಕೋಬಾ ಈಗಲೂ ಸುಮ್ಮನೆ ಕುಳಿತಿಲ್ಲ. ನೆಲಕ್ಕೆ ನೀರಿಂಗಿಸುವ ಬಗೆಬಗೆಯ ತಂತ್ರಗಳನ್ನು ಆವಿಷ್ಕರಿಸುತ್ತ ಕ್ರಿಯಾಶೀಲರಾಗಿದ್ದಾರೆ. ನೆಲ, ನೀರು, ಹಸಿರು ಈ ಮೂರರ ನಡುವಿನ ವಿಸ್ಮಯಕಾರಿ ಸಂಬಂಧವನ್ನು ತೋರಿಸಿಕೊಟ್ಟ ಯಕೋಬಾ ಅವರ ನೆನಪಿನಲ್ಲಿ ಇವತ್ತಿನ ವಿಶ್ವ ಪರಿಸರ ದಿನಾಚರಣೆ ಹೊಸ ಅರ್ಥ ಪಡೆಯಲಿ.