Carpet cleaning tips: ಮಳೆಗಾಲದಲ್ಲಿ ಮನೆಯ ಕಾರ್ಪೆಟ್ ಒದ್ದೆಯಾಗಿ ಕೊಳೆಯಾಗುವುದು ಮತ್ತು ಅದರಿಂದ ತೇವದ ದುರ್ವಾಸನೆ ಬರುವುದು ಸಾಮಾನ್ಯ. ಇಂತಹ ಸಮಯದಲ್ಲಿ ದುಬಾರಿ ಕಾರ್ಪೆಟ್‌ಗಳನ್ನು ಹಾಳಾಗದಂತೆ ಕಾಪಾಡಲು ಮತ್ತು ಮನೆಯಲ್ಲೇ ಸುಲಭವಾಗಿ ಸ್ವಚ್ಛಗೊಳಿಸಲು ಇಲ್ಲಿವೆ ಕೆಲವು ಸರಳ ಟಿಪ್ಸ್.
ಮಳೆಗಾಲದಲ್ಲಿ ಬಿಸಿಬಿಸಿ ಚಹಾ-ಪಕೋಡ ಸವಿಯುತ್ತಾ ಕಾಲ ಕಳೆಯುವುದು ಎಷ್ಟು ಹಿತವೋ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ದೊಡ್ಡ ಸವಾಲು. ಹೊರಗಿನಿಂದ ಬರುವ ಒದ್ದೆ ಕಾಲುಗಳು, ಕೊಳಕು ಶೂ-ಚಪ್ಪಲಿಗಳಿಂದ ಮನೆಯ ನೆಲ ಮತ್ತು ನೆಲಹಾಸುಗಳು (ಕಾರ್ಪೆಟ್) ಅತಿ ಬೇಗನೆ ಹಾಳಾಗುತ್ತವೆ. ಅದರಲ್ಲೂ ದುಬಾರಿ ಮತ್ತು ಭಾರವಾದ ಕಾರ್ಪೆಟ್‌ಗಳು ಒದ್ದೆಯಾದರೆ, ನೋಡಲು ಕೊಳೆಯಾಗಿ ಕಾಣುವುದಷ್ಟೇ ಅಲ್ಲದೆ, ಅದರಲ್ಲಿ ತೇವದ ದುರ್ವಾಸನೆ (ಸೀಲ್ ವಾಸನೆ), ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ (ಫಂಗಸ್) ಬೆಳೆಯುವ ಅಪಾಯವೂ ಹೆಚ್ಚಿರುತ್ತದೆ. ಆದರೆ ಚಿಂತೆ ಬೇಡ! ಅಡುಗೆಮನೆಯಲ್ಲಿ ಸಿಗುವ ಕೆಲವೇ ಸಾಮಗ್ರಿಗಳನ್ನು ಬಳಸಿ ಕಾರ್ಪೆಟ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಲು ಮತ್ತು ದುರ್ವಾಸನೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಕೆಲವು ಸರಳ ಸಲಹೆಗಳು..
1. ಒದ್ದೆಯಾದ ತಕ್ಷಣ ಉಜ್ಜುವ ತಪ್ಪು ಮಾಡಬೇಡಿ!
ಕಾರ್ಪೆಟ್ ಮೇಲೆ ನೀರು ಬಿದ್ದಾಗ ಅಥವಾ ತುಂಬಾ ಒದ್ದೆಯಾದಾಗ ಅದನ್ನು ತಕ್ಷಣವೇ ಬಟ್ಟೆಯಿಂದ ಬಲವಾಗಿ ಉಜ್ಜಬೇಡಿ. ಹೀಗೆ ಉಜ್ಜಿದರೆ ಮಣ್ಣು ಮತ್ತು ಕೊಳೆ ಕಾರ್ಪೆಟ್‌ನ ಎಳೆಗಳ (fibers) ಆಳಕ್ಕೆ ಇಳಿಯುತ್ತದೆ. ಬದಲಿಗೆ, ಒಂದು ಒಣ ಟವೆಲ್ ಅಥವಾ ಕಾಟನ್ ಬಟ್ಟೆಯನ್ನು ಒದ್ದೆಯಾದ ಜಾಗದ ಮೇಲಿಟ್ಟು, ಹಗುರವಾಗಿ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ (Dab dry).
2. ದುರ್ವಾಸನೆ ಹೋಗಲಾಡಿಸಲು 'ಬೇಕಿಂಗ್ ಸೋಡಾ'
ತೇವಾಂಶದಿಂದಾಗಿ ಕಾರ್ಪೆಟ್‌ನಲ್ಲಿ ಬರುವ ಕೆಟ್ಟ ವಾಸನೆಯನ್ನು ತಡೆಯಲು ಬೇಕಿಂಗ್ ಸೋಡಾ ಅತ್ಯುತ್ತಮ ಪರಿಹಾರ.
ಕಾರ್ಪೆಟ್ ಮೇಲಿನ ಹೆಚ್ಚುವರಿ ನೀರನ್ನು ತೆಗೆದ ನಂತರ, ಅದರ ಮೇಲೆ ಬೇಕಿಂಗ್ ಸೋಡಾವನ್ನು ತೆಳುವಾಗಿ ಸಿಂಪಡಿಸಿ.
ಇದನ್ನು ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ಬೇಕಿಂಗ್ ಸೋಡಾ ಕಾರ್ಪೆಟ್‌ನಲ್ಲಿರುವ ಉಳಿದ ತೇವಾಂಶ ಮತ್ತು ದುರ್ವಾಸನೆ ಎರಡನ್ನೂ ಹೀರಿಕೊಳ್ಳುತ್ತದೆ. ನಂತರ ವ್ಯಾಕ್ಯೂಮ್ ಕ್ಲೀನರ್ (Vacuum cleaner) ಬಳಸಿ ಬೇಕಿಂಗ್ ಸೋಡಾವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

3. ಕಲೆ ತೆಗೆಯಲು ಮನೆಯಲ್ಲೇ ದ್ರಾವಣ ತಯಾರಿಸಿ
ಮಣ್ಣು, ಕೆಸರು ಅಥವಾ ಟೀ-ಕಾಫಿಯ ಕಲೆಗಳನ್ನು ಹೋಗಲಾಡಿಸಲು ಸರಳವಾದ ಮನೆಮದ್ದಿದೆ..
ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು, ಲಿಕ್ವಿಡ್ ಡಿಶ್‌ವಾಶ್ ಮತ್ತು ಬಿಳಿ ವಿನೆಗರ್ (White vinegar) ಬೆರೆಸಿ ಮಿಶ್ರಣ ತಯಾರಿಸಿ.
ಒಂದು ಸ್ವಚ್ಛವಾದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿ, ಕಲೆಯಿರುವ ಜಾಗಕ್ಕೆ ಹಗುರವಾಗಿ ಒತ್ತಿ ಒರೆಸಿ.
ಕಲೆ ಮಾಸಿದ ನಂತರ, ಮತ್ತೊಂದು ಒಣ ಬಟ್ಟೆಯಿಂದ ಆ ಜಾಗವನ್ನು ಒರೆಸಿ ಹೆಚ್ಚುವರಿ ತೇವಾಂಶವನ್ನು ತೆಗೆಯಿರಿ.
4. ಸಂಪೂರ್ಣವಾಗಿ ಒಣಗಿಸುವುದು ಅತ್ಯಂತ ಮುಖ್ಯ
ಸ್ವಚ್ಛಗೊಳಿಸಿದ ಬಳಿಕ ಕಾರ್ಪೆಟ್ ಪೂರ್ತಿಯಾಗಿ ಒಣಗಲೇಬೇಕು. ಒದ್ದೆ ಹಾಗೇ ಉಳಿದರೆ ಬೂಸ್ಟ್ ಹಿಡಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಕಾರ್ಪೆಟ್ ಅನ್ನು ಚೆನ್ನಾಗಿ ಗಾಳಿ-ಬೆಳಕು ಆಡುವ ಜಾಗದಲ್ಲಿ ಅಥವಾ ಫ್ಯಾನ್ ಕೆಳಗೆ ಹರಡಿ ಹಾಕಿ ಒಣಗಿಸಿ.
ಈ ಮುನ್ನೆಚ್ಚರಿಕೆ ನೆನಪಿರಲಿ
ಪ್ರತಿಯೊಂದು ಕಾರ್ಪೆಟ್‌ನ ಬಟ್ಟೆಯ ನೆಯ್ಗೆ (Fabric) ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಯಾವುದೇ ದ್ರಾವಣ ಬಳಸುವ ಮುನ್ನ ಕಾರ್ಪೆಟ್‌ನ ಸಣ್ಣ ಭಾಗದಲ್ಲಿ (ಕಾಣಿಸದ ಮೂಲೆಯಲ್ಲಿ) ಹಚ್ಚಿ 'ಪ್ಯಾಚ್ ಟೆಸ್ಟ್' (Patch Test) ಮಾಡಿ, ಬಣ್ಣ ಹೋಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಕಾರ್ಪೆಟ್ ತುಂಬಾ ದುಬಾರಿ, ಸೂಕ್ಷ್ಮವಾಗಿದ್ದರೆ ಅಥವಾ ಮಳೆಯ ನೀರಿನಲ್ಲಿ ಸಂಪೂರ್ಣವಾಗಿ ನೆನೆದುಹೋಗಿದ್ದರೆ, ಮನೆಯಲ್ಲೇ ರಿಸ್ಕ್ ತೆಗೆದುಕೊಳ್ಳುವ ಬದಲು 'ಪ್ರೊಫೆಷನಲ್ ಕ್ಲೀನಿಂಗ್' (Professional Cleaning) ಮಾಡಿಸುವುದೇ ಜಾಣತನ.

