ಮುಂಗಾರು ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯ ನಡುವೆ ಕಾವೇರಿ ನೀರು ಹಂಚಿಕೆ ಕುರಿತು ಚರ್ಚಿಸಲು ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯುಆರ್‌ಸಿ) ಮತ್ತು ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಗಳು ನಡೆಯಲಿವೆ. ರಾಜ್ಯದಲ್ಲಿನ ನೀರಿನ ಕೊರತೆಯ ವಾಸ್ತವ ಪರಿಸ್ಥಿತಿಯನ್ನು ಮುಂದಿಡಲಿದೆ.
- ಸಿಡಬ್ಲ್ಯುಆರ್‌ಸಿ, ಸಿಡಬ್ಲ್ಯುಎಂಎ ಎರಡೂ ಸಭೆ ನಿಗದಿ
ನವದೆಹಲಿ (ಸೆ.8) ಮುಂಗಾರು ಮಳೆ ಕೊರತೆ, ಬರ ಪರಿಸ್ಥಿತಿ ನಡುವೆಯೇ ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚಿಸಲು ದೆಹಲಿಯಲ್ಲಿ ಮಂಗಳವಾರ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯುಆರ್‌ಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ)ದ ಸಭೆಗಳು ನಡೆಯಲಿವೆ.
ಬೆಳಗ್ಗೆ 11 ಗಂಟೆಗೆ ಸಿಡಬ್ಲ್ಯುಆರ್‌ಸಿ ಸಭೆ ನಡೆದರೆ, ಮಧ್ಯಾಹ್ನ 3 ಗಂಟೆಗೆ ಪ್ರಾಧಿಕಾರದ ಸಭೆ ನಡೆಯಲಿದೆ. ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ಸಭೆಗಳು ನಡೆಯಲಿವೆ. ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಭಾಗಿಯಾಗಲಿದ್ದಾರೆ. ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ಎಸಿಎಸ್ ಗೌರವಗುಪ್ತಾ ವಹಿಸಲಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ
ರಾಜ್ಯಕ್ಕೆ ಮುಂಗಾರು ಮಳೆಯ ದಿನಗಳು ಮುಗಿಯುತ್ತಿದ್ದು, ತಮಿಳುನಾಡಿಗೆ ಈಶಾನ್ಯ ಮಾರುತಗಳು ಅಕ್ಟೋಬರ್ ನಲ್ಲಿ ಶುರುವಾಗಲಿವೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಎದುರಾಗಿದ್ದು, ಜಲಾಶಯಗಳ ನೀರಿನ ಹರಿವು ಅರ್ಧಕ್ಕರ್ಧ ಕುಸಿದಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ಒಳಹರಿವು 20 ಸಾವಿರದಿಂದ 10 ಸಾವಿರ ಕ್ಯೂಸೆಕ್ ಗೆ ಕುಸಿದಿದೆ. ಈ ಮಧ್ಯೆ, ಮುಂದಿನ ಜುಲೈ ತನಕ ನಮಗೆ ಕುಡಿಯುವ ನೀರಿನ ಸಂಗ್ರಹದ ಅಗತ್ಯ ಇದ್ದು, ಇದಕ್ಕಾಗಿ 48 ಟಿಎಂಸಿ ನೀರು ಬೇಕಿದೆ.
ಇಲ್ಲಿವರೆಗೆ 32 ಟಿಎಂಸಿ ನೀರು ಬಿಡುಗಡೆ
ಕಾವೇರಿ ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದ ಎಲ್ಲಾ ಆದೇಶಗಳನ್ನು ಪಾಲಿಸಿದ್ದೇವೆ. ಸಂಕಷ್ಟದ ಸಮಯದಲ್ಲೂ ಈತನಕ 32ಕ್ಕೂ ಹೆಚ್ಚು ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಈಗ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ವಾಸ್ತವ ಪರಿಸ್ಥಿತಿ ನೋಡಿ, ಆದೇಶ ಮಾಡಿ ಎಂದು ಕರ್ನಾಟಕ ವಾದ ಮಂಡಿಸುವ ಸಾಧ್ಯತೆಯಿದೆ. ತಮಿಳುನಾಡು ಎಂದಿನಂತೆ ಬಾಕಿ ನೀರು ಬಿಡುಗಡೆಗೆ ಒತ್ತಾಯಿಸುವ ಸಾಧ್ಯತೆಯಿದೆ.
ಈ ಹಿಂದಿನ ಸಭೆಯಲ್ಲಿ ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಮಿತಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್‌ಗಳು ಎತ್ತಿ ಹಿಡಿದಿದ್ದವು.


