ಕೆಪಿಎಸ್‌ಸಿ ಪಶು ವೈದ್ಯಕೀಯ ನೇಮಕಾತಿ ಪರೀಕ್ಷೆಯ ಅಕ್ರಮದ ಕುರಿತು ದೂರು ದಾಖಲಿಸಿದ್ದ ಡಾ.ಮಂಜುನಾಥ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಅಭ್ಯರ್ಥಿಗಳ ಕಡೆಯವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದು, ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಬೆಂಗಳೂರು (ಸೆ.8): ಕೆಪಿಎಸ್‌ಸಿ(KPSC) ಪಶು ವೈದ್ಯಕೀಯ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರುದಾರ ಡಾ.ಮಂಜುನಾಥ್ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಆರೋಪ ಕೇಳಿ ಬಂದಿದೆ.
ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿ ಮಂಜುನಾಥ್ ಅವರು ಅಕ್ರಮದಲ್ಲಿ ಭಾಗಿಯಾಗಿ ಉತ್ತೀರ್ಣರಾದ 29 ಅಭ್ಯರ್ಥಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರು. ಆ ಅಭ್ಯರ್ಥಿಗಳ ಸ್ನೇಹಿತರು ಮತ್ತು ಸಂಬಂಧಿಕರು ಮಂಜುನಾಥ್ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಇದರ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿ ಏನಿದೆ?
‘ನಾವು ಬೆಂಗಳೂರಿಗೆ ಬರುತ್ತೇವೆ, ನಿಮ್ಮನ್ನು ಸುಮ್ಮನೆ ಬಿಡಲ್ಲ. ನಿಮ್ಮ ಮನೆಗೆ ರೇಷನ್ ಕೂಡ ಸಿಗದಂತೆ ಮಾಡುತ್ತೇವೆ. ನೀವು ಏನು ದಾಖಲೆ ಇಟ್ಟುಕೊಂಡು ದೂರು ಕೊಟ್ಟಿದ್ದೀರಾ? ಹೆಚ್ಚು ಅಂಕಗಳು ಬಂದಿರುವವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದೀರಾ? ಅಭ್ಯರ್ಥಿಗಳ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಯಾರು ಅಕ್ರಮ ಎಸಗಿದ್ದಾರೋ ಅವರ ವಿರುದ್ಧ ಹೋರಾಡಿ. ಆಗ ನಾವು ನಿಮಗೆ ಶಹಬ್ಬಾಸ್‌ಗಿರಿ ಕೊಡುತ್ತೇವೆ. ನೀವು ಬೇಕಾದರೆ ಹೋರಾಟ ಮಾಡಿ ನಿಮಗೆ ಊಟ ಹಾಕುತ್ತೇವೆ. ನೀವು ಎಲ್ಲಿ ಇರುತ್ತೀರಾ? ನಮ್ಮ ಕಡೆ ಲಾಯರ್‌ಗಳು ಇದ್ದಾರೆ, ನಿಮ್ಮ ಮೇಲೆ ಕೇಸ್ ಹಾಕುತ್ತೇವೆ’ ಎಂದು ಬೆದರಿಕೆ ಹಾಕಲಾಗಿದೆ.


