ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ಮಳೆ ಬರಿಸಲು ವಿಶಿಷ್ಟ ಜಾನಪದ ಆಚರಣೆಯೊಂದನ್ನು ನಡೆಸಲಾಗಿದೆ. ಈ ಸಂಪ್ರದಾಯದ ಭಾಗವಾಗಿ, ಇಬ್ಬರು ಹೆಣ್ಣು ಮಕ್ಕಳಿಗೆ ಸಾಂಕೇತಿಕವಾಗಿ ಮದುವೆ ಮಾಡಿ, ಊರಿನಲ್ಲಿ ಮೆರವಣಿಗೆ ನಡೆಸುವ ಮೂಲಕ ಮಳೆರಾಯನನ್ನು ಪ್ರಾರ್ಥಿಸಲಾಯಿತು.
ದೇವಲಾಪುರ (ಮಂಡ್ಯ): ಮಳೆ ಬರುವಂತೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡುವುದು ಇತ್ಯಾದಿ ಜಾನಪದ ಆಚರಣೆಗಳನ್ನು ನೋಡಿರುತ್ತೇವೆ. ಆದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಮಳೆಗಾಗಿ ಇಬ್ಬರು ಹೆಣ್ಣು ಮಕ್ಕಳಿಗೆ ಸಾಂಕೇತಿಕ ಮದುವೆ ಮಾಡಿರುವ ಅಪರೂಪದ ಆಚರಣೆಯೊಂದು ಗಮನ ಸೆಳೆದಿದೆ.
ಊರಿನ ಬೀದಿಗಳಲ್ಲಿ ಮೆರವಣಿಗೆ
ಹಿಂದೆಲ್ಲ ಮಳೆಯಾಗಲಿಲ್ಲ ಎಂದರೆ ಮಕ್ಕಳಿಗೆ ಮದುವೆ ಮಾಡುವ ಸಂಪ್ರದಾಯವಿತ್ತು. ಈ ನಿಟ್ಟಿನಲ್ಲಿ ಈ ಆಚರಣೆಯನ್ನು ಸ್ಥಳೀಯರು ನೆರವೇರಿಸಿದ್ದಾರೆ. ಮಕ್ಕಳಿಗೆ ಅಲಂಕಾರ ಮಾಡಿ, ಹೂವು, ಹಣ್ಣು, ಕಾಯಿ, ಬೆಲ್ಲ ಹಿಡಿದು ಹಿರಿಯರು ಮದುವೆಯ ಸಾಂಪ್ರದಾಯಿಕ ಗೀತೆಯನ್ನು ಹಾಡುವ ಮೂಲಕ ಸಾಂಕೇತಿಕ ಮದುವೆ ಮಾಡಿಸಿದ್ದಾರೆ. ಬಳಿಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಚಂದಮಾಮಾ ಮಕ್ಕಳ ನಡೂವೆ ಮದುವೆ
ನಾಗಮಂಗಲ ಅಲ್ಲದೆ ಕೆ.ಆರ್.ಪೇಟೆ ತಾಲೂಕಿನ ಗಂಗೇನಹಳ್ಳಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಇಬ್ಬರು ಗಂಡು ಮಕ್ಕಳನ್ನು ಅಥವಾ ಅಪ್ರಾಪ್ತರನ್ನು ಮದುವೆ ಮಾಡಿಸುವ ಸಂಪ್ರದಾಯವೂ ಇದೆ. ಕೆಲವೆಡೆ ಚಂದಮಾಮ ಹಾಗೂ ಮಕ್ಕಳ ಮದುವೆ ಮಾಡಿಸಲಾಗುತ್ತೆ. ಜಾನಪದ ಸಂಸ್ಕೃತಿಯ ನಂಬಿಕೆಯಂತೆ ಮಳೆಗಾಗಿ ಪ್ರಾರ್ಥಿಸಿ ಚಂದಮಾಮನ ಮದುವೆ ಹಾಗೂ ಮಕ್ಕಳ ಮದುವೆ ಮಾಡಿಸುವ ಪದ್ಧತಿ ಕೆಲವು ಕಡೆ ಇದೆ.


