ಕೇಂದ್ರ ಪರಿಸರ ಸಚಿವಾಲಯದ 'ಸ್ವಚ್ಛ ವಾಯು ಸರ್ವೇಕ್ಷಣೆ 2026' ಶ್ರೇಯಾಂಕ ಪ್ರಕಟವಾಗಿದ್ದು, 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಲಖನೌ ಮೊದಲ ಸ್ಥಾನ ಪಡೆದರೆ, ಬೆಂಗಳೂರು 32ನೇ ಸ್ಥಾನ ಗಳಿಸಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ನಗರಗಳು ಕೈಗೊಂಡ ವಿವಿಧ ಕ್ರಮಗಳ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ.

ನವದೆಹಲಿ (ಸೆ.08): ದೇಶದ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಕೇಂದ್ರ ಪರಿಸರ ಸಚಿವಾಲಯ ಪ್ರಕಟಿಸಿರುವ ‘ಸ್ವಚ್ಛ ವಾಯು ಸರ್ವೇಕ್ಷಣೆ 2026’ ಶ್ರೇಯಾಂಕದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಖನೌ ಮೊದಲ ಸ್ಥಾನ ಪಡೆದುಕೊಂಡಿದೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಬೆಂಗಳೂರು 32ನೇ ಸ್ಥಾನ ಗಳಿಸಿದೆ.

ರಸ್ತೆ ಧೂಳು ನಿಯಂತ್ರಣ, ಘನತ್ಯಾಜ್ಯ ನಿರ್ವಹಣೆ, ವಾಹನಗಳಿಂದ ಉಂಟಾಗುವ ಮಾಲಿನ್ಯ, ಕೈಗಾರಿಕಾ ಮಾಲಿನ್ಯ, ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಮಾಲಿನ್ಯ ಮೂಲಗಳನ್ನು ನಿಯಂತ್ರಿಸಲು ನಗರಗಳು ಕೈಗೊಂಡಿರುವ ನೈಜ ಕ್ರಮಗಳನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಲಾಗಿದೆ.

ಲಖನೌಗೆ ಮೊದಲ ಸ್ಥಾನ

10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಲಖನೌ ಮೊದಲ ಸ್ಥಾನ, ಇಂದೋರ್ ಎರಡನೇ ಸ್ಥಾನ ಹಾಗೂ ಜಬಲ್ಪುರ ಮೂರನೇ ಸ್ಥಾನ ಪಡೆದಿವೆ. 2024-25ರ ಸರ್ವೇಕ್ಷಣೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಇಂದೋರ್ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದೆ. ಜಬಲ್ಪುರ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಂದಿದೆ.

ಬೆಂಗಳೂರಿಗೆ 32ನೇ ಸ್ಥಾನ

ಕರ್ನಾಟಕದ ರಾಜಧಾನಿ ಬೆಂಗಳೂರು 32ನೇ ಸ್ಥಾನ ಪಡೆದಿದೆ. ಬೆಂಗಳೂರಿನ 2025-26ರ ಸರಾಸರಿ ವಾರ್ಷಿಕ PM10 ಮಟ್ಟ 76 ಮೈಕ್ರೋಗ್ರಾಂ ಪ್ರತಿ ಘನ ಮೀಟರ್ ದಾಖಲಾಗಿದೆ. ಇದೇ ವಿಭಾಗದಲ್ಲಿ ದೆಹಲಿ 21ನೇ, ಪುಣೆ 12ನೇ, ಹೈದರಾಬಾದ್ 19ನೇ, ಜೈಪುರ 20ನೇ, ಮುಂಬೈ 28ನೇ, ವಾರಾಣಸಿ 34ನೇ, ಚೆನ್ನೈ 35ನೇ ಹಾಗೂ ಕೋಲ್ಕತ್ತಾ 38ನೇ ಸ್ಥಾನ ಪಡೆದಿವೆ.

ಕರ್ನಾಟಕದ ಇತರ ನಗರಗಳ ಸ್ಥಿತಿ

3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಒಡಿಶಾದ ರೂರ್‌ಕೆಲಾ ಮೊದಲ ಸ್ಥಾನ ಪಡೆದಿದೆ. ಆದರೆ, ಕರ್ನಾಟಕದ ಇತರೆ ನಗರಗಳ ಸ್ಥಿತಿ ಇಲ್ಲಿದೆ ನೋಡಿ.

  • ದಾವಣಗೆರೆ – 11ನೇ ಸ್ಥಾನ
  • ಹುಬ್ಬಳ್ಳಿ-ಧಾರವಾಡ – 19ನೇ ಸ್ಥಾನ
  • ಬೆಂಗಳೂರು - 3ನೇ ಸ್ಥಾನ
  • ಕಲಬುರಗಿ – 36ನೇ ಸ್ಥಾನ

PM10 ಮಟ್ಟ ಮಾತ್ರ ಮಾನದಂಡವಲ್ಲ

ಸ್ವಚ್ಛ ವಾಯು ಸರ್ವೇಕ್ಷಣೆಯಲ್ಲಿ ನಗರಗಳ ಸ್ಥಾನ ನಿರ್ಧರಿಸುವಾಗ ಕೇವಲ PM10 ಪ್ರಮಾಣ ಕಡಿಮೆಯಾಗಿರುವುದನ್ನಷ್ಟೇ ಪರಿಗಣಿಸಲಾಗುವುದಿಲ್ಲ. ಒಟ್ಟು ಎಂಟು ಪ್ರಮುಖ ಮಾನದಂಡಗಳ ಆಧಾರದ ಮೇಲೆ ನಗರಗಳಿಗೆ ಅಂಕ ನೀಡಲಾಗಿದೆ. ರಸ್ತೆ ಧೂಳು, ಘನತ್ಯಾಜ್ಯ ನಿರ್ವಹಣೆ, ವಾಹನ ಮಾಲಿನ್ಯ, ಕೈಗಾರಿಕಾ ಮಾಲಿನ್ಯ, ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ನಿರ್ವಹಣೆ ಹಾಗೂ ಡೀಸೆಲ್ ಜನರೇಟರ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಿಂದ ಉಂಟಾಗುವ ಇತರ ಮಾಲಿನ್ಯಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳು ಇದರಲ್ಲಿ ಸೇರಿವೆ. ಹೀಗಾಗಿ PM10 ಪ್ರಮಾಣ ಹೆಚ್ಚು ಇರುವ ನಗರವೂ ಇತರ ಮಾನದಂಡಗಳಲ್ಲಿ ಉತ್ತಮ ಅಂಕ ಗಳಿಸಿದರೆ ಶ್ರೇಯಾಂಕದಲ್ಲಿ ಮೇಲಿನ ಸ್ಥಾನ ಪಡೆಯಬಹುದು.

130 ನಗರಗಳ ಸಮೀಕ್ಷೆ

ಕೇಂದ್ರ ಪರಿಸರ ಸಚಿವಾಲಯದ ಮಾಹಿತಿಯ ಪ್ರಕಾರ, ಒಟ್ಟು 130 ನಗರಗಳನ್ನು ಸ್ವಚ್ಛ ವಾಯು ಸರ್ವೇಕ್ಷಣೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. 2025-26ರಲ್ಲಿ 108 ನಗರಗಳು 2017-18ಕ್ಕೆ ಹೋಲಿಸಿದರೆ PM10 ಮಟ್ಟದಲ್ಲಿ ಸುಧಾರಣೆ ದಾಖಲಿಸಿವೆ. ಇನ್ನು 26 ನಗರಗಳಲ್ಲಿ PM10 ಸಾಂದ್ರತೆ ಶೇ.40ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಒಟ್ಟು 14 ನಗರಗಳು ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟ ಮಾನದಂಡ (NAAQS) ತಲುಪಿವೆ.ಆದರೆ ಸಮೀಕ್ಷೆಯಲ್ಲಿರುವ ಪ್ರಮುಖ ದೊಡ್ಡ ನಗರಗಳ ಪೈಕಿ ಯಾವುದೂ ವಾರ್ಷಿಕ ಸರಾಸರಿ PM10 ಸಾಂದ್ರತೆಯನ್ನು 60 ಮೈಕ್ರೋಗ್ರಾಂ/ಘನ ಮೀಟರ್‌ಗಿಂತ ಕಡಿಮೆ ಮಾಡುವ ರಾಷ್ಟ್ರೀಯ ಮಾನದಂಡವನ್ನು ಪೂರೈಸಿಲ್ಲ.

ಸ್ವಚ್ಛ ಗಾಳಿಗೆ ಒತ್ತು

ಅಂತಾರಾಷ್ಟ್ರೀಯ ‘Clean Air for Blue Skies’ ದಿನದ ಅಂಗವಾಗಿ ಕೇಂದ್ರ ಪರಿಸರ ಸಚಿವಾಲಯ ಸ್ವಚ್ಛ ವಾಯು ಸರ್ವೇಕ್ಷಣೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ನಗರಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡೂ ಪರಸ್ಪರ ವಿರುದ್ಧವಲ್ಲ; ಜನರ ಜೀವನಮಟ್ಟವನ್ನು ಕಾಪಾಡಿಕೊಂಡೇ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಒಟ್ಟಿಗೆ ಮುನ್ನಡೆಸಬಹುದು ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗಿದೆ.