PSY singer income: ಜಗತ್ತನ್ನೇ ಕುಣಿಸಿದ 'ಗಂಗ್ನಮ್ ಸ್ಟೈಲ್' ಹಾಡಿಗೆ ಈಗ 14 ವರ್ಷ! ಯೂಟ್ಯೂಬ್‌ನಲ್ಲಿ 100 ಕೋಟಿ ವೀಕ್ಷಣೆ ದಾಟಿದ ಮೊದಲ ವಿಡಿಯೋ ಎಂಬ ದಾಖಲೆ ಬರೆದಿದ್ದ ಈ ಹಾಡು, ಈಗ 600 ಕೋಟಿ ವೀಕ್ಷಣೆ ಪಡೆದಿದೆ. ಈ ಹಾಡಿನ ಮೂಲಕ ಸಿಂಗರ್ PSY ಅವರು ಎಷ್ಟು ಕೋಟಿ ಗಳಿಸಿದ್ದಾರೆ ಎಂಬ ರೋಚಕ ಮಾಹಿತಿ ಇಲ್ಲಿದೆ.

‘ಗಂಗ್ನಮ್ ಸ್ಟೈಲ್’.. ಈ ಹಾಡಿನ ಹೆಸರು ಕೇಳಿದ ತಕ್ಷಣ ಸಂಗೀತ ಪ್ರೇಮಿಗಳಲ್ಲಿ ಒಂದು ರೀತಿಯ ಸಂಚಲನ ಮೂಡುತ್ತದೆ. ಆ ಕುದುರೆ ಸವಾರಿ ಮಾಡುವಂತಹ ವಿಶಿಷ್ಟ ಡ್ಯಾನ್ಸ್ ಸ್ಟೆಪ್ ಮತ್ತು ಆಕರ್ಷಕ ಟ್ಯೂನ್ ಜಗತ್ತಿನಾದ್ಯಂತ ಸಖತ್ ಸದ್ದು ಮಾಡಿತ್ತು. ದಕ್ಷಿಣ ಕೊರಿಯಾದ ಪಾಪ್ ಸ್ಟಾರ್ ಸಿಂಗರ್ PSY (ಸೈ) ಅವರು 2012ರಲ್ಲಿ ಬಿಡುಗಡೆ ಮಾಡಿದ ಈ ಹಾಡು ಇಡೀ ವಿಶ್ವವನ್ನೇ ಕುಣಿಸಿತ್ತು. ಜುಲೈ 15, 2012 ರಂದು ಬಿಡುಗಡೆಯಾದ ಈ ಹಾಡು ಯೂಟ್ಯೂಬ್ ಇತಿಹಾಸದಲ್ಲೇ ಅತೀ ದೊಡ್ಡ ಸೆನ್ಸೇಷನ್ ಸೃಷ್ಟಿಸಿತ್ತು. ಇದೀಗ ಬಿಡುಗಡೆಯಾಗಿ 14 ವರ್ಷಗಳು ಕಳೆದಿದ್ದರೂ ಇದರ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ಯೂಟ್ಯೂಬ್ ಇತಿಹಾಸದಲ್ಲೇ ಮೊದಲ ದಾಖಲೆ

ವಿಚಿತ್ರ ಕಾನ್ಸೆಪ್ಟ್, ವಿಶೇಷ ನೃತ್ಯ ಮತ್ತು ಅತ್ಯಂತ ಕ್ಯಾಚಿ ಸಾಲುಗಳಿಂದ ಕೂಡಿದ ‘ಗಂಗ್ನಮ್ ಸ್ಟೈಲ್’ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‌ನಲ್ಲಿ ಮೊದಲ ಬಾರಿಗೆ 1 ಬಿಲಿಯನ್ (100 ಕೋಟಿ) ವೀಕ್ಷಣೆ ಸಾಧಿಸಿದ ವಿಶ್ವದ ಮೊದಲ ವಿಡಿಯೋ ಎಂಬ ಇತಿಹಾಸವನ್ನು ಈ ಹಾಡು ಬರೆದಿತ್ತು. ಇದೀಗ ಈ ಹಾಡು ಸಂಗೀತ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಬರೋಬ್ಬರಿ 6 ಬಿಲಿಯನ್ ಅಂದರೆ 600 ಕೋಟಿ ವೀಕ್ಷಣೆಗಳ ಗಡಿ ಸಮೀಪಿಸಿದೆ. ಯೂಟ್ಯೂಬ್ ಇತಿಹಾಸದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಸಂಗೀತ ವಿಡಿಯೋಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ.

PSY ಅವರ ಆದಾಯವೆಷ್ಟು?

ಬರೋಬ್ಬರಿ 600 ಕೋಟಿ ವೀಕ್ಷಣೆ ಪಡೆದ ಈ ಹಾಡಿನ ಮೂಲಕ ಸಿಂಗರ್ PSY ಅವರಿಗೆ ಎಷ್ಟು ಆದಾಯ ಬಂದಿರಬಹುದು ಎಂಬ ಚರ್ಚೆ ಈಗ ಜಗತ್ತಿನಾದ್ಯಂತ ನಡೆಯುತ್ತಿದೆ. ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, ಜಾಹೀರಾತು ಮತ್ತು ಇತರ ಮೂಲಗಳಿಂದ ಕೇವಲ ಈ ಒಂದೇ ಹಾಡಿನ ಮೂಲಕ ಸೈ ಅವರಿಗೆ ಸುಮಾರು 470 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಅಂದಾಜಿಸಲಾಗಿದೆ. 2013ರಲ್ಲಿ ಗೂಗಲ್ ಹಂಚಿಕೊಂಡ ಮಾಹಿತಿಯಂತೆ, ಹಾಡು 1.2 ಬಿಲಿಯನ್ ವೀಕ್ಷಣೆ ಹೊಂದಿದ್ದಾಗಲೇ ಜಾಹೀರಾತಿನ ಮೂಲಕ 8 ಮಿಲಿಯನ್ ಡಾಲರ್ ಆದಾಯ ಬಂದಿತ್ತು. ಪ್ರಸ್ತುತ 6 ಬಿಲಿಯನ್ ವೀಕ್ಷಣೆ ದಾಟಿರುವುದರಿಂದ ಆದಾಯವು ನೂರಾರು ಕೋಟಿಗಳಷ್ಟಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಯೂಟ್ಯೂಬ್ ಆದಾಯ ಮಾತ್ರವಲ್ಲ

ಗಂಗ್ನಮ್ ಸ್ಟೈಲ್ ಮೂಲಕ ಬಂದ ಆದಾಯವು ಕೇವಲ ಯೂಟ್ಯೂಬ್ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಡಿನ ಡೌನ್‌ಲೋಡ್‌ಗಳು, ಲೈಸೆನ್ಸಿಂಗ್, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ವಿವಿಧ ಜಾಗತಿಕ ಒಪ್ಪಂದಗಳ ಮೂಲಕವೂ PSY ಅವರಿಗೆ ಭಾರಿ ಲಾಭ ಹರಿದುಬಂದಿದೆ. ಕೇವಲ ಇಂಗ್ಲಿಷ್ ಹಾಡುಗಳಷ್ಟೇ ಅಲ್ಲ, ಒಂದು ಕೊರಿಯನ್ ಹಾಡು ಕೂಡ ಜಾಗತಿಕ ಮಟ್ಟದಲ್ಲಿ ಮ್ಯಾಜಿಕ್ ಮಾಡಬಲ್ಲದು ಎಂದು ಈ ಹಾಡು ಸಾಬೀತುಪಡಿಸಿತು.

ದಕ್ಷಿಣ ಕೊರಿಯಾದ ಒಬ್ಬ ಸಿಂಗರ್ ಅನ್ನು ರಾತ್ರೋರಾತ್ರಿ ಜಾಗತಿಕ ಸ್ಟಾರ್ ಆಗಿ ಪರಿವರ್ತಿಸಿದ ‘ಗಂಗ್ನಮ್ ಸ್ಟೈಲ್’ ಇಂದಿಗೂ ಸಂಗೀತ ಲೋಕದ ಅದ್ಭುತಗಳಲ್ಲಿ ಒಂದಾಗಿ ಉಳಿದಿದೆ.

Scroll to load tweet…