Kids learning tips: ಮಗುವಿಗೆ ಬರೆಯಲು ಕಲಿಸುವುದು ಒಂದು ಕಲೆ! ನೇರವಾಗಿ ಅಕ್ಷರಗಳನ್ನು ಬರೆಸುವ ಬದಲು, ಮಕ್ಕಳ ತಜ್ಞ ಡಾ. ಅರ್ಪಿತ್ ಗುಪ್ತ ಅವರು ಸೂಚಿಸಿರುವ ಈ 6 ವೈಜ್ಞಾನಿಕ ಮತ್ತು ಸರಳ ಹಂತಗಳನ್ನು ಅನುಸರಿಸಿ. ಇದರಿಂದ ನಿಮ್ಮ ಮಗು ಒತ್ತಡವಿಲ್ಲದೆ ಸುಲಭವಾಗಿ ಬರೆಯಲು ಕಲಿಯುತ್ತದೆ.
ಮಗು ಬೆಳೆಯುತ್ತಿದ್ದಂತೆ ಪೋಷಕರಿಗೆ ತಮ್ಮ ಮಗು ಬೇಗನೆ ಓದು-ಬರಹ ಕಲಿಯಲಿ ಎಂಬ ಹಂಬಲವಿರುತ್ತದೆ. ಆದರೆ, ಮಗುವಿಗೆ ಬರೆಯಲು ಕಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೆಚ್ಚಿನ ಪೋಷಕರು ಮಗುವಿಗೆ ನೇರವಾಗಿ A B C D ಅಥವಾ 1 2 3 4 ಅಥವಾ ಕನ್ನಡ ಅಕ್ಷರಗಳನ್ನು ಬರೆಯಲು ಒತ್ತಾಯಿಸುತ್ತಾರೆ. ಆದರೆ, ಇದು ಸರಿಯಾದ ಕ್ರಮವಲ್ಲ ಎಂದು ಪ್ರಖ್ಯಾತ ಮಕ್ಕಳ ತಜ್ಞರಾದ ಡಾ. ಅರ್ಪಿತ್ ಗುಪ್ತ ತಿಳಿಸಿದ್ದಾರೆ.
ಅಕ್ಷರಗಳನ್ನು ಬರೆಯುವ ಮುನ್ನ ಮಗುವಿನ ಬೆರಳುಗಳ ಹಿಡಿತ, ಸ್ನಾಯುಗಳ ಬಲ ಮತ್ತು ಕಣ್ಣು-ಕೈಗಳ ಸಮತೋಲನ (Hand-eye coordination) ಉತ್ತಮವಾಗಿರಬೇಕು. ಅದಕ್ಕಾಗಿ ಅವರು ಈ ಕೆಳಗಿನ ಹಂತ-ಹಂತದ ವಿಧಾನವನ್ನು ಸೂಚಿಸಿದ್ದಾರೆ..

ಮುಕ್ತವಾಗಿ ಗೀಚಲು ಬಿಡಿ (Free Scribbling)
ಮೊದಲನೆಯದಾಗಿ ಮಗುವಿನ ಕೈಗೆ ಪೆನ್ಸಿಲ್ ಅಥವಾ ಕ್ರೆಯಾನ್ಸ್ ನೀಡಿ ಒಂದು ಕಾಗದದ ಮೇಲೆ ತನಗೆ ಇಷ್ಟ ಬಂದಂತೆ ಗೀಚಲು ಬಿಡಿ. ಅದು ಓರೆ-ಕೋರೆ ರೇಖೆಗಳಾಗಿರಲಿ ಅಥವಾ ಸುಮ್ಮನೆ ಗೆರೆಗಳಾಗಿರಲಿ, ಮಗುವನ್ನು ತಡೆಯಬೇಡಿ. ಇದರಿಂದ ಮಗುವಿಗೆ ಪೆನ್ಸಿಲ್ ಹಿಡಿಯುವ ಅಭ್ಯಾಸವಾಗುತ್ತದೆ ಮತ್ತು ಕೈಗಳು ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.

ನಿಯಂತ್ರಿತ ಗೀಚುವಿಕೆ (Controlled Scribbling)
ಮಗು ಮುಕ್ತವಾಗಿ ಗೀಚಲು ಕಲಿತ ನಂತರ, ಒಂದು ಚೌಕ (Box) ಅಥವಾ ವೃತ್ತವನ್ನು ಹಾಕಿ ಅದರ ಒಳಗೆ ಮಾತ್ರ ಗೀಚಲು ಹೇಳಿ. ಇದರಿಂದ ಮಗುವಿಗೆ ತನ್ನ ಕೈಗಳ ಚಲನೆಯನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಿಯಂತ್ರಿಸುವುದು ಹೇಗೆ ಎಂಬುದು ತಿಳಿಯುತ್ತದೆ.

ಸರಳ ರೇಖೆಗಳ ಅಭ್ಯಾಸ
ನಂತರ ಮಗುವಿಗೆ ಮೂರು ವಿಧದ ರೇಖೆಗಳನ್ನು ಕಲಿಸಿಕೊಡಿ..
ನಿಂತಿರುವ ರೇಖೆ (Standing Line): ಮೇಲಿನಿಂದ ಕೆಳಕ್ಕೆ ಎಳೆಯುವ ಗೆರೆ.
ಮಲಗಿರುವ ರೇಖೆ (Sleeping Line): ಎಡದಿಂದ ಬಲಕ್ಕೆ ಎಳೆಯುವ ಗೆರೆ.
ಓರೆ ರೇಖೆ (Slanting Line): ಓರೆಯಾಗಿ ಎಳೆಯುವ ಗೆರೆ.
ಈ ರೇಖೆಗಳ ಅಭ್ಯಾಸವು ಮುಂದೆ ಅಕ್ಷರಗಳನ್ನು ಬರೆಯಲು ಬಹಳ ಸಹಕಾರಿಯಾಗುತ್ತದೆ.

ವಕ್ರರೇಖೆ ಮತ್ತು ವಿನ್ಯಾಸಗಳು (Curves and Patterns)
ನೇರ ಗೆರೆಗಳ ನಂತರ ಮಗುವಿಗೆ ವಕ್ರರೇಖೆಗಳನ್ನು (Curves) ಬರೆಯಲು ಕಲಿಸಿ. ನಂತರ ಕೆಲವು ಸರಳ ವಿನ್ಯಾಸಗಳನ್ನು (Patterns) ಉದಾಹರಣೆಗೆ ಅಲೆಗಳಂತೆ ಬರೆಯುವುದು ಅಥವಾ ಒಂದೇ ಆಕೃತಿಯನ್ನು ಪದೇ ಪದೇ ಬರೆಯುವುದನ್ನು ಅಭ್ಯಾಸ ಮಾಡಿಸಿ. ಇದರಿಂದ ಬೆರಳುಗಳ ಮೇಲೆ ಮಗುವಿಗೆ ಹಿಡಿತ ಸಿಗುತ್ತದೆ.

ಚುಕ್ಕೆಗಳನ್ನು ಜೋಡಿಸುವುದು (Joining Dots)
ಕಾಗದದ ಮೇಲೆ ಎರಡು ಚುಕ್ಕೆಗಳನ್ನು ಇಟ್ಟು, ಅವುಗಳನ್ನು ಒಂದು ಗೆರೆಯ ಮೂಲಕ ಜೋಡಿಸಲು ಹೇಳಿ. ಇದು ಮಗುವಿಗೆ ಕೈಯನ್ನು ಯಾವ ದಿಕ್ಕಿನಲ್ಲಿ ಚಲಿಸಬೇಕು ಎಂಬ ಸ್ಪಷ್ಟತೆಯನ್ನು ನೀಡುತ್ತದೆ.

ಕೊನೆಯಲ್ಲಿ ಅಕ್ಷರಗಳ ಆರಂಭ
ಮಗು ಈ ಮೇಲಿನ ಎಲ್ಲಾ ಹಂತಗಳಲ್ಲಿ ಪರಿಣತಿ ಪಡೆದ ನಂತರವಷ್ಟೇ ಅಕ್ಷರ ಅಥವಾ ಅಂಕಿಗಳನ್ನು ಬರೆಯಲು ಕಲಿಸಬೇಕು. ಆಗ ಮಗುವಿನ ಕೈ ಅಕ್ಷರಗಳ ತಿರುವುಗಳಿಗೆ ಒಗ್ಗಿಕೊಂಡಿರುತ್ತದೆ ಮತ್ತು ಮಗು ಸುಲಭವಾಗಿ ಬರೆಯಲು ಕಲಿಯುತ್ತದೆ.


ಪೋಷಕರಿಗೆ ವಿಶೇಷ ಕಿವಿಮಾತು
ಪ್ರತಿ ಮಗುವು ವಿಭಿನ್ನವಾಗಿರುತ್ತದೆ. ಒಂದು ಮಗು ಬೇಗ ಕಲಿತರೆ ಇನ್ನೊಂದು ಮಗು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ಮಗುವಿನ ಮೇಲೆ ಎಂದಿಗೂ ಒತ್ತಡ ಹೇರಬೇಡಿ. ದಿನಾಲು ಸ್ವಲ್ಪ ಸಮಯ ಆಟವಾಡುತ್ತಾ ಮಗುವಿಗೆ ಅಭ್ಯಾಸ ಮಾಡಿಸಿ. ಒತ್ತಡವಿಲ್ಲದ ಕಲಿಕೆಯು ಮಗುವಿನ ಮನಸ್ಸಿನಲ್ಲಿ ಬರೆಯುವ ಬಗ್ಗೆ ಆಸಕ್ತಿ ಮೂಡಿಸುತ್ತದೆ.



