ಅಡುಗೆ ಮನೆ ಎಷ್ಟೇ ಕ್ಲೀನ್ ಮಾಡಿದ್ರೂ ಸಿಂಕ್ ಸುತ್ತಮುತ್ತಲಿನ ಜಾಗ ಅದ್ರ ಸೌಂದರ್ಯ ಹಾಳುಮಾಡ್ತಿದ್ದರೆ ಚಿಂತೆ ಬೇಡ. ಸಿಂಕ್ ಅಕ್ಕಪಕ್ಕದ ಜಾಗವನ್ನು ಸುಲಭ ಟ್ರಿಕ್ಸ್ ನಿಂದ ಕ್ಲೀನ್ ಇಡ್ಬಹುದು.
ಕಿಚನ್ ಸ್ವಚ್ಛವಾಗಿದ್ರೆ ಮನೆ ಮಂದಿಯೆಲ್ಲ ಆರೋಗ್ಯವಾಗಿದ್ದಂತೆ. ಅಡುಗೆ ಮಾಡಿದ್ಮೇಲೆ, ಅಡುಗೆ ಮಾಡುವ ಮುನ್ನ ಕಿಚನ್ ಸ್ವಚ್ಛತೆಗೆ ಗಮನ ನೀಡ್ಬೇಕು. ಬಹುತೇಕರು ಕಿಚನ್ ಕ್ಲೀನ್ ಮಾಡುವಾಗ ಟೈಲ್ಸ್, ಗ್ಯಾಸ್ ಸ್ಟೌವ್ ಮತ್ತು ಕೌಂಟರ್ಟಾಪ್ ಸ್ವಚ್ಛಗೊಳಿಸ್ತಾರೆ. ಆದ್ರೆ ಕಿಚನ್ ಸಿಂಕ್ ಸುತ್ತಮುತ್ತಲಿನ ಜಾಗವನ್ನು ಮರೆತುಬಿಡ್ತಾರೆ.
ಸಿಂಕ್ ಬಳಿ ದಿನವಿಡೀ ಪಾತ್ರೆ ಕ್ಲೀನಿಂಗ್, ತರಕಾರಿ ಕ್ಲೀನಿಂಗ್ ಸೇರಿದಂತೆ ಅನೇಕ ಕೆಲ್ಸ ನಡೆಯುತ್ತಿರುತ್ತದೆ. ನೀರಿನ ಹನಿ, ಎಣ್ಣೆ ಜಿಡ್ಡು ಮತ್ತು ಆಹಾರದ ಸಣ್ಣ ತುಂಡುಗಳು ಸಿಂಕ್ ಸುತ್ತಲಿನ ಕೌಂಟರ್ಟಾಪ್ ಮೇಲೆ ಬೀಳುತ್ತವೆ. ಇದರಿಂದ ಆ ಜಾಗದಲ್ಲಿ ನಿಧಾನವಾಗಿ ಕೊಳೆ ಮತ್ತು ಕಲೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ.
ಸಿಂಕ್ ಗೆ ಆಲ್ಯೂಮಿನಿಯಂ ಫಾಯಿಲ್ ಬಳಕೆ
ಸಿಂಕ್ ಸುತ್ತಮುತ್ತಲಿನ ಜಾಗ ಸ್ವಚ್ಛವಾಗಿರಬೇಕು ಅಂದ್ರೆ ನೀವು ಅಲ್ಯೂಮಿನಿಯಂ ಫಾಯಿಲ್ ಬಳಸ್ಬೇಕು. ಸರಿಯಾಗಿ ಬಳಸಿದರೆ ಇದು ಸಿಂಕ್ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಡಲು ಸಹಾಯ ಮಾಡಬಹುದು.
ಅಲ್ಯೂಮಿನಿಯಂ ಫಾಯಿಲ್ ಬಳಕೆ ಹೇಗೆ?
ಮೊದಲು ಸಿಂಕ್ ಸುತ್ತಲಿನ ಕೌಂಟರ್ಟಾಪ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಅಲ್ಲಿರುವ ಹಳೆಯ ಕಲೆ, ಎಣ್ಣೆಯ ಜಿಡ್ಡು ಮತ್ತು ಕೊಳೆಯನ್ನು ತೆಗೆದುಹಾಕಿ. ನಂತರ ಒಣ ಬಟ್ಟೆಯಿಂದ ಆ ಜಾಗವನ್ನು ಸಂಪೂರ್ಣವಾಗಿ ಒರೆಸಿ ಒಣಗಿಸಿ. ಈಗ ಅಗತ್ಯವಿರುವಷ್ಟು ಅಲ್ಯೂಮಿನಿಯಂ ಫಾಯಿಲ್ ತೆಗೆದುಕೊಂಡು, ನೀರು ಅಥವಾ ಕೊಳೆ ಹೆಚ್ಚಾಗಿ ಬೀಳುವ ಜಾಗದಲ್ಲಿ ಹಾಕಿ. ಫಾಯಿಲ್ ಅಲುಗಾಡದಂತೆ ಕೈಯಿಂದ ನಿಧಾನವಾಗಿ ಒತ್ತಿ ಸರಿಯಾಗಿ ಫಿಕ್ಸ್ ಮಾಡಿ.
ಪ್ರಯೋಜನ ಏನು?
ಪಾತ್ರೆ ತೊಳೆಯುವಾಗ ಬೀಳುವ ನೀರಿನ ಹನಿ, ಎಣ್ಣೆಯ ಜಿಡ್ಡು ಮತ್ತು ಸಣ್ಣ ಆಹಾರದ ತುಂಡುಗಳು ನೇರವಾಗಿ ಕೌಂಟರ್ಟಾಪ್ ಮೇಲೆ ಬೀಳುವುದನ್ನು ಫಾಯಿಲ್ ಸ್ವಲ್ಪ ಮಟ್ಟಿಗೆ ತಡೆಯುತ್ತದೆ. ಇದರಿಂದ ಆ ಜಾಗವನ್ನು ಪದೇಪದೇ ಒರೆಸುವ ಕೆಲಸ ಕಡಿಮೆಯಾಗುತ್ತದೆ. ಫಾಯಿಲ್ ಹೆಚ್ಚು ಕೊಳೆಯಾದಾಗ ಅದನ್ನು ತೆಗೆದು ಹೊಸದನ್ನು ಹಾಕಬಹುದು. ಆದರೆ ಸಿಂಕ್ ಸುತ್ತಲಿನ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯ. ಆಹಾರ ಅಥವಾ ಕೊಳೆ ಫಾಯಿಲ್ ಕೆಳಗೆ ಸಿಲುಕದಂತೆ ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು.


