ಪ್ರತಿದಿನ ಬಳಸಲು ಬೇಕಾದಷ್ಟು ಹುಣಸೆಯನ್ನು ಮಾತ್ರ ಸಣ್ಣ ಡಬ್ಬಿಯಲ್ಲಿ ತೆಗೆದಿಡಿ. ದೊಡ್ಡ ಡಬ್ಬಿಯನ್ನು ಒದ್ದೆ ಕೈ ಅಥವಾ ಚಮಚದಿಂದ ಪದೇಪದೇ ತೆರೆಯುವುದರಿಂದ ತೇವಾಂಶ ಒಳಗೆ ಸೇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಅಜ್ಜಿ ಹೇಳಿದ ಈ ಸೀಕ್ರೆಟ್ ಫಾಲೋ ಮಾಡಿ..
Tamarind Storage Tips-ಹುಣಸೆಹಣ್ಣು ಕಪ್ಪಾಗಿ ಹಾಳಾಗುತ್ತಿದೆಯಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತೆ!
ಅಡುಗೆಮನೆಯಲ್ಲಿ ಹುಣಸೆಹಣ್ಣು ಇಲ್ಲ ಅಂದ್ರೆ ಸಾಂಬಾರ್, ರಸಂ, ದಾಲ್ ಸೇರಿದಂತೆ ಹಲವು ಖಾದ್ಯಗಳ ರುಚಿಯೇ ಅಪೂರ್ಣ! ಹೀಗಾಗಿ ಹಲವರು ಒಂದೇ ಬಾರಿ ಸಾಕಷ್ಟು ಹುಣಸೆಹಣ್ಣು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಮಳೆಗಾಲ ಬಂತು ಅಂದ್ರೆ ಕಥೆಯೇ ಬೇರೆ. ಗಾಳಿಯಲ್ಲಿನ ತೇವಾಂಶ ಹೆಚ್ಚಾಗುತ್ತಿದ್ದಂತೆ ಹುಣಸೆಹಣ್ಣು ಮೆತ್ತಗಾಗಿ, ಜಿಗುಟಾಗಿ, ಕೆಲವೇ ದಿನಗಳಲ್ಲಿ ಕಪ್ಪಾಗಿ ಶಿಲೀಂಧ್ರ ಹಿಡಿಯುವ ಸಾಧ್ಯತೆ ಇರುತ್ತದೆ.
ಹಾಗಾದರೆ ಕಷ್ಟಪಟ್ಟು ಖರೀದಿಸಿದ ಹುಣಸೆಹಣ್ಣನ್ನು ವರ್ಷಗಟ್ಟಲೆ ಹೇಗೆ ಫ್ರೆಶ್ ಆಗಿ ಇಟ್ಟುಕೊಳ್ಳುವುದು? ಇಲ್ಲಿವೆ ಕೆಲವು ಸರಳ ಉಪಾಯಗಳು.
ಮೊದಲ ಹೆಜ್ಜೆ: ಬೀಜ ತೆಗೆದು ಇಡಿ!
ಮಾರುಕಟ್ಟೆಯಿಂದ ತಂದ ಹುಣಸೆಹಣ್ಣನ್ನು ಹಾಗೆಯೇ ಡಬ್ಬಿಯಲ್ಲಿ ತುಂಬಿಡುವ ಬದಲು ಅದರ ಬೀಜಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಉತ್ತಮ. ತೇವಾಂಶ ಉಳಿದುಕೊಂಡರೆ ಹುಣಸೆ ಬೇಗ ಹಾಳಾಗುವ ಸಾಧ್ಯತೆ ಇರುವುದರಿಂದ ಈ ಸಣ್ಣ ಕೆಲಸವೇ ದೊಡ್ಡ ವ್ಯತ್ಯಾಸ ಮಾಡಬಹುದು.
ಯಾವ ಡಬ್ಬಿಯಲ್ಲಿ ಇಡಬೇಕು?
ಹುಣಸೆಹಣ್ಣನ್ನು ಪ್ಲಾಸ್ಟಿಕ್, ಅಲ್ಯೂಮಿನಿಯಂ ಅಥವಾ ಉಕ್ಕಿನ ಪಾತ್ರೆಯಲ್ಲಿ ಇಡುವುದನ್ನು ತಪ್ಪಿಸುವುದು ಒಳಿತು. ಹುಣಸೆಯಲ್ಲಿರುವ ಆಮ್ಲೀಯ ಗುಣ ಲೋಹದೊಂದಿಗೆ ಪ್ರತಿಕ್ರಿಯಿಸಿ ಬಣ್ಣದಲ್ಲಿ ಬದಲಾವಣೆ ತರಬಹುದು. ಗಾಳಿಯಾಡದ ಗಾಜಿನ ಬಾಟಲಿ ಅಥವಾ ಮಣ್ಣಿನ ಜಾಡಿ ಬಳಸುವುದು ಉತ್ತಮ ಆಯ್ಕೆ.
ಇನ್ನೊಂದು ಹಳೆಯ ವಿಧಾನವೂ ಇದೆ. ಹುಣಸೆಹಣ್ಣನ್ನು ಪದರಪದರವಾಗಿ ಜೋಡಿಸುವಾಗ ಮಧ್ಯೆ ಸ್ವಲ್ಪ ಕಲ್ಲುಪ್ಪು ಚಿಮುಕಿಸಿ. ಉಪ್ಪು ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ಹುಣಸೆಹಣ್ಣು ಬೇಗ ಹಾಳಾಗುವುದನ್ನು ತಡೆಯಬಹುದು.
ಹುಣಸೆ ಜಾಸ್ತಿ ಇದೆಯಾ? ಫ್ರಿಜ್ ಮೊರೆ ಹೋಗಿ!
ಹೆಚ್ಚು ಪ್ರಮಾಣದಲ್ಲಿದ್ದರೆ ಹುಣಸೆಯ ತಿರುಳನ್ನು ಬೇರ್ಪಡಿಸಿ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಬಹುದು. ಮತ್ತೊಂದು ಸುಲಭ ವಿಧಾನವೆಂದರೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ತಿರುಳನ್ನು ತೆಗೆದು ಪೇಸ್ಟ್ ಮಾಡಿ, ಗಾಜಿನ ಬಾಟಲಿಯಲ್ಲಿ ಸಂಗ್ರಹಿಸುವುದು.
ಕೊನೆಯದಾಗಿ ಒಂದು ಮುಖ್ಯ ಟಿಪ್—ಪ್ರತಿದಿನ ಬಳಸಲು ಬೇಕಾದಷ್ಟು ಹುಣಸೆಯನ್ನು ಮಾತ್ರ ಸಣ್ಣ ಡಬ್ಬಿಯಲ್ಲಿ ತೆಗೆದಿಡಿ. ದೊಡ್ಡ ಡಬ್ಬಿಯನ್ನು ಒದ್ದೆ ಕೈ ಅಥವಾ ಚಮಚದಿಂದ ಪದೇಪದೇ ತೆರೆಯುವುದರಿಂದ ತೇವಾಂಶ ಒಳಗೆ ಸೇರಬಹುದು.
ಈ ಸಣ್ಣ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಮಳೆಗಾಲದಲ್ಲೂ ಹುಣಸೆಹಣ್ಣಿನ ಬಣ್ಣ, ರುಚಿ ಮತ್ತು ಗುಣಮಟ್ಟವನ್ನು ಹೆಚ್ಚು ಕಾಲ ಕಾಪಾಡಿಕೊಳ್ಳಬಹುದು.


