ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.
ರಾಮನಗರ: ಈ ಬಾರಿ ಎಲ್ಲೆಲ್ಲೂ ಬರ. ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೆಲವು ದೇಶಗಳಲ್ಲಿ ಪ್ರವಾಹದಿಂದ ಅಸಂಖ್ಯ ಜನರು ಸಾವಿಗೀಡಾಗಿದ್ದರೆ, ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆಯೇ ಇಲ್ಲ. ನೈಸರ್ಗಿಕ ವಿಕೋಪದಿಂದಾಗಿ, ಅಗತ್ಯ ವಸ್ತುಗಳು ಕೂಡ ಗಗನಕ್ಕೆ ಏರುತ್ತಿವೆ. ಇನ್ನು ತೆಂಗಿನ ಕಾಯಿ ಬೆಲೆ ಕೂಡ ವಿಪರೀತ ಹೆಚ್ಚಾಗಿದೆ. ಒಂದೆಡೆ ಮಳೆಯ ಕೊರತೆ, ಇನ್ನೊಂದೆಡೆ ನುಸಿಪೀಡೆ ಸಮಸ್ಯೆ ಇವುಗಳಿಂದ ತೆಂಗಿನ ಮರಕ್ಕೆ ಭಾರಿ ಹೊಡೆತ ಬಿದ್ದಿದೆ. ತೆಂಗಿನ ಮರ ಮಾತ್ರವಲ್ಲದೇ ಅಡಕೆ ಬೆಳೆಗಾರರೂ ತತ್ತರಿಸಿಹೋಗಿದ್ದಾರೆ. ಅಷ್ಟೇ ಅಲ್ಲದೇ, ತೋಟ, ಹೊಲಗಳಿಗೆ ನೀರು ಇಲ್ಲದೇ ಜನರು ಆಕಾಶದತ್ತ ಮುಖ ಮಾಡುವಂತಾಗಿದೆ.
ತೆಂಗಿನಕಾಯಿ ಬೆಲೆ ಗಗನಕ್ಕೆ
ಕರ್ನಾಟಕದಲ್ಲಿ ಪ್ರಸ್ತುತ ತೆಂಗಿನಕಾಯಿ ಸರಾಸರಿ ಸಗಟು ಬೆಲೆಯು ಪ್ರತಿ ಕ್ವಿಂಟಾಲ್‌ಗೆ ಸುಮಾರು ₹23,200 ಇದೆ.ಪ್ರತಿ ತೆಂಗಿನಕಾಯಿಗೆ ಮಾರುಕಟ್ಟೆ ಹಾಗೂ ಗಾತ್ರದ ಆಧಾರದ ಮೇಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ₹25 ರಿಂದ ₹45 ವರೆಗೆ ಇದೆ. ಆದರೆ 45 ರೂಪಾಯಿ ತೆಂಗಿನ ಕಾಯಿ ಸರಿಯಾಗಿ ಬಳಸಿದರೆ ಒಂದು ದಿನಕ್ಕೂ ಸಾಕಾಗುವುದಿಲ್ಲ ಎನ್ನುವ ರೀತಿಯಲ್ಲಿ ಚಿಕ್ಕದಾಗಿದೆ. ಇನ್ನು 25-30 ರೂಪಾಯಿಗಳ ತೆಂಗಿನಕಾಯಿಯಂತೂ ಹೇಳುವುದೇ ಬೇಡ ಬಿಡಿ!
ಹೀರೇಕಾಯಿ ರೂಪ ಪಡೆದ ತೆಂಗಿನಕಾಯಿ
ಇದರ ನಡುವೆಯೇ, ರಾಮನಗರದಲ್ಲೊಂದು ವಿಸ್ಮಯ ನಡೆದಿದೆ. ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದ ತೆಂಗಿನಮರವೊಂದರಲ್ಲಿ ಹೀರೇಕಾಯಿಯ ಮಾದರಿಯಲ್ಲಿ ಉದ್ದನೆಯ ತೆಂಗಿನಕಾಯಿ ಬೆಳೆದಿದೆ. ಅಷ್ಟಕ್ಕೂ ಇದು ನೀರಿನ ಕೊರತೆಯಿಂದ ಹೀಗೆ ಆಗಿದ್ದಿರಬಹುದು.
ಆದರೆ ನೋಡಲು ಇದು ಹೀರೇಕಾಯಿಯನ್ನು ಹೋಲುವ ರೀತಿಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ತಮ್ಮ ತೋಟದಲ್ಲಿ ಈ ರೀತಿಯ ತೆಂಗಿನಕಾಯಿ ದೊರೆತಿದ್ದು, ಇದನ್ನು ನೋಡಿದಾಗ ತಮಗೂ ಅಚ್ಚರಿಯಾಯಿತು ಎಂದು ಶಿವಣ್ಣ ತಿಳಿಸಿದ್ದಾರೆ.


