ಟಿಪ್ಪು ಕಟೌಟ್ ಮೇಲೆ ಪಾಕಿಸ್ತಾನ ಪರ ಹಾಡು ಬಳಸಿದ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ 'ಚಿಕ್ಕಮಗಳೂರು ಚಲೋ'ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ತಹಶೀಲ್ದಾರ್ ನಗರದಾದ್ಯಂತ ಬಿಎನ್‌ಎಸ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈಗ ಟಿಪ್ಪು ಕಟೌಟ್ ಕಿಡಿ ಹೊತ್ತಿಸಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನ ಪರವಾದ ಹಾಡನ್ನು ಬಳಸಿದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಈಗ ನಗರದಾದ್ಯಂತ ಬಿಗಿ ಕ್ರಮ ಕೈಗೊಂಡಿದೆ.

ವಿವಾದದ ಹಿನ್ನೆಲೆ ಏನು?

ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಒಂದಕ್ಕೆ ಪಾಕಿಸ್ತಾನದ ಪರವಾದ ಹಾಡನ್ನು ಹಿನ್ನೆಲೆಯಾಗಿ ಬಳಸಿ ವಿಡಿಯೋ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ದೇಶದ್ರೋಹಿ ಕೃತ್ಯವೆಂದು ಆರೋಪಿಸಿರುವ ಸಂಘಟನೆಗಳು ನಾಳೆ (ಅ. 18) 'ಚಿಕ್ಕಮಗಳೂರು ಚಲೋ' ಮತ್ತು ಬೃಹತ್ 'ತಿರಂಗಾ ಯಾತ್ರೆ'ಗೆ ಕರೆ ನೀಡಿವೆ.

ನಿಷೇಧಾಜ್ಞೆ ಜಾರಿ

ಪ್ರತಿಭಟನೆ ಮತ್ತು ಸಭೆಗಳಿಂದ ಶಾಂತಿ ಭಂಗವಾಗುವ ಆತಂಕ ಇರುವುದರಿಂದ ಚಿಕ್ಕಮಗಳೂರು ತಹಶೀಲ್ದಾರ್ ರೇಷ್ಮಾ ಅವರು ನಗರದ ತಾಲೂಕು ಕಚೇರಿ ಆವರಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಸೆಕ್ಷನ್ 163ರ ಅಡಿ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಯಾವುದೇ ಸಭೆ ಮುಷ್ಕರ ಅಥವಾ ಮೆರವಣಿಗೆ ನಡೆಸುವಂತಿಲ್ಲ.

ರಾಷ್ಟ್ರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಿಕ್ಕಮಗಳೂರು ಚಲೋ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಆಯೋಜಿಸಲಾಗಿತ್ತು. ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಬೃಹತ್ ತಿರಂಗಾ ಯಾತ್ರೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಈಗ ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಈ ಕಾರ್ಯಕ್ರಮಗಳು ನಡೆಯುತ್ತವೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಮೂಡಿದೆ. ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.