ಮಲೆ ಮಹದೇಶ್ವರ ವನ್ಯಧಾಮದ ಹನೂರು ವಲಯದಲ್ಲಿ, ನೀರು ಕುಡಿಯಲು ಬಂದ ಕಡವೆಯನ್ನು ಬೇಟೆಗಾರರು ನಾಡಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾರೆ. ಕಡವೆಯ ಮಾಂಸವನ್ನು ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ, ಬೇಟೆಗಾರರು ಪರಾರಿ, ಪತ್ತೆಗೆ ಕ್ರಮ.
ಚಾಮರಾಜನಗರ(ಸೆ.3): ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಇದೀಗ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೇಟೆಗಾರರ ಕ್ರೌರ್ಯಕ್ಕೆ ಕಡವೆ ಬಲಿಯಾದ ಘಟನೆ ನಡೆದಿದೆ.
ಕಡವೆಯನ್ನ ಮೂರು ತುಂಡು ಮಾಡಿ ಪರಾರಿ!
ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ವೇಳೆಯೇ ಕಡವೆಯ ಮೇಲೆ ನಾಡಬಂದೂಕು ಬಳಸಿ ದಾಳಿ ಮಾಡಿರುವ ಬೇಟೆಗಾರರು, ಕಡವೆಯನ್ನ ಕೊಂದು ಮೂರು ತುಂಡು ಮಾಡಿ ಚೀಲದಲ್ಲಿ ತುಂಬಿ ಸಾಗಾಟ ನಡೆಸಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಬೇಟೆಗಾರರ ಮೇಲೆ ದಾಳಿ ನಡೆಸಿದ್ದಾರೆ.
ಕಡವೆ ಮಾಂಸದ ಚೀಲ ಬಿಟ್ಟು ಬೇಟೆಗಾರರು ಪರಾರಿ
ಅರಣ್ಯ ಸಿಬ್ಬಂದಿ ದಾಳಿಗೆ ಹೆದರಿ ಕಡವೆ ಮಾಂಸದ ಚೀಲವನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಕಡವೆ ಬೇಟೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿರುವ ಅರಣ್ಯ ಸಿಬ್ಬಂದಿ ಪರಾರಿಯಾಗಿರುವ ಬೇಟೆಗಾರರ ಪತ್ತೆಗೆ ಮುಂದಾಗಿದ್ದಾರೆ.
ಪದೇಪದೆ ವನ್ಯಜೀವಿಗಳನ್ನ ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. ವನ್ಯಜೀವಿಗಳ ಬೇಟೆಯಾಡಿ ನೆರೆ ರಾಜ್ಯಗಳಿಗೆ ಮಾಂಸ ಸಾಗಿಸಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ ವನ್ಯಜೀವಿಗಳನ್ನ ಸಂರಕ್ಷಿಸುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.


