- Home
- Karnataka Districts
- ಮುಳ್ಳು ಚುಚ್ಚಿದ್ರೂ ಹೇಳುತ್ತಿದ್ದ ಮಗಳು, ಈಗ 3 ಅಡಿ ಕಿಟಕಿಯಲ್ಲಿ ಹೆಣವಾಗಿದ್ದಾಳೆ; ನ್ಯಾಯ ಕೇಳಿದ ಅಪ್ಪ!
ಮುಳ್ಳು ಚುಚ್ಚಿದ್ರೂ ಹೇಳುತ್ತಿದ್ದ ಮಗಳು, ಈಗ 3 ಅಡಿ ಕಿಟಕಿಯಲ್ಲಿ ಹೆಣವಾಗಿದ್ದಾಳೆ; ನ್ಯಾಯ ಕೇಳಿದ ಅಪ್ಪ!
ದಾವಣಗೆರೆಯ ಟೀಂ ಅಕಾಡೆಮಿ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಂಜಿತಾ (17) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿದ್ಯಾಭ್ಯಾಸ ಮಾಡಿ ಉನ್ನತ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ 17 ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಆಂಜನೇಯ ಬಡಾವಣೆ ಸಮೀಪವಿರುವ 'ಟೀಂ ಅಕಾಡೆಮಿ'ಯ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ (17) ಅವರ ಕೊನೆಯುಸಿರೆಳೆದ ದುರ್ದೈವಿ.
ಮಗಳ ಸಾವಿನ ಸುತ್ತ ತೀವ್ರ ಸಂಶಯ ವ್ಯಕ್ತಪಡಿಸಿರುವ ಪೋಷಕರು, 'ಕಾಲೇಜು ಆಡಳಿತ ಮಂಡಳಿಯೇ ನಮ್ಮ ಮಗಳನ್ನು ಹೊಡೆದು ಸಾಯಿಸಿದೆ' ಎಂದು ಗಂಭೀರ ಆರೋಪ ಮಾಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಣ್ಣೀರ ಕೋಡಿ ಹರಿಸಿದ ತಂದೆ: "ಮೂರು ಅಡಿ ಕಿಟಕಿಯಲ್ಲಿ ಸಾವು ಹೇಗೆ ಸಾಧ್ಯ?"
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಮತ್ತು ರೂಪಾ ದಂಪತಿಯ ಪುತ್ರಿಯಾಗಿರುವ ರಂಜಿತಾ, ಮೊದಲ ವರ್ಷದ ಪಿಯುಸಿಯಿಂದಲೂ ಇದೇ ಟೀಂ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮಗಳ ಪಾರ್ಥಿವ ಶರೀರವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿದ ತಂದೆ ನಿಂಗಪ್ಪ ಅವರ ಮಾತುಗಳು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿದವು.
'ನನ್ನ ಮಗಳಿಗೆ ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ತಕ್ಷಣ ನನಗೆ ತಿಳಿಸುತ್ತಿದ್ದಳು. ಹಾಸ್ಟೆಲ್‌ಗೆ ಹೋದಾಗಲೆಲ್ಲಾ ಪ್ರೀತಿಯಿಂದ ಓಡಿ ಬಂದು ಅಪ್ಪಿಕೊಳ್ಳುತ್ತಿದ್ದಳು. ಘಟನೆ ನಡೆದ ದಿನ ಬೆಳಗ್ಗೆಯೂ ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ಅಂತಹ ಮುಗ್ಧ ಮಗಳು ಕೇವಲ ಮೂರು ಅಡಿ ಎತ್ತರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ? ಆಕೆಯ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ. ನನ್ನ ಮಗಳಿಗೆ ಏನೋ ಅನ್ಯಾಯವಾಗಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ತಂದೆ ನಿಂಗಪ್ಪ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.
ಪೋಷಕರ ಪ್ರತಿಭಟನೆಯ ಆತಂಕ: ಕಾಲೇಜಿಗೆ ಬೀಗ
ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಕಾಲೇಜಿನ ಮುಂದೆ ಜಮಾಯಿಸುವ ಸಾಧ್ಯತೆ ಇತ್ತು. ಯಾವುದೇ ಅಹಿತಕರ ಘಟನೆಗಳು ಅಥವಾ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟೀಂ ಅಕಾಡೆಮಿ ಆಡಳಿತ ಮಂಡಳಿಯು ಕಾಲೇಜಿಗೆ ದಿಢೀರ್ ರಜೆ ಘೋಷಿಸಿ, ಗೇಟ್‌ಗಳಿಗೆ ಬೀಗ ಜಡಿದಿದೆ.
ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ ಏನು?
ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಟೀಂ ಅಕಾಡೆಮಿ ಕಾಲೇಜಿನ ಅಧ್ಯಕ್ಷ ಕೆ.ಎಂ. ಮಂಜಪ್ಪ ಅವರು, ‘ರಂಜಿತಾ ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ವಾಪಸ್ ಬಂದಿದ್ದಳು. ಬಂದಾಗಿನಿಂದ ಕೊಂಚ ಮೌನವಾಗಿದ್ದಳು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಘಟನೆಯ ದಿನ ಸಂಜೆ 5:30ಕ್ಕೆ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ರಾತ್ರಿ 8:30ಕ್ಕೆ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿನಿಯರು ಬಂದು ನೋಡಿದಾಗ ಒಳಗಿನಿಂದ ಬಾಗಿಲು ತೆರೆದಿರಲಿಲ್ಲ’ ಎಂದು ತಿಳಿಸಿದರು.
ಈ ಘಟನೆ ನಂತರ, ವಾರ್ಡನ್ ನಮಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯ ಪೋಷಕರು ದಾವಣಗೆರೆಯಲ್ಲಿರುವ ತಮ್ಮ ಸಂಬಂಧಿಕರನ್ನು ಕಳುಹಿಸಿಕೊಟ್ಟಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಕರ ಸಮ್ಮುಖದಲ್ಲೇ ಬಾಗಿಲು ಒಡೆದು ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗಿಲ್ಲ. ಪೋಷಕರು ಅತೀವ ದುಃಖದಲ್ಲಿದ್ದು, ಭಾವೋದ್ವೇಗದಿಂದ ಆರೋಪ ಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ’ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಸದ್ಯ ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದ್ದು, ಸ್ಥಳದಲ್ಲಿದ್ದ ವಿದ್ಯಾರ್ಥಿನಿಯರು ಮತ್ತು ವಾರ್ಡನ್‌ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

