ಚಾಮರಾಜನಗರ ಶೂಟೌಟ್‌ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅರಣ್ಯಾಧಿಕಾರಿಗಳು ಇವತ್ತು ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಇರುವ ವಿಚಾರಗಳು ಪ್ರಕರಣಕ್ಕೆ ಮೇಜರ್ ತಿರುವು ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಚಾಮರಾಜನಗರ: ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆಗಾರರ ಮೇಲಿನ ಗುಂಡಿನ ದಾಳಿ (Encounter) ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಇಂದು ಎರಡನೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಘಟನಾ ಸ್ಥಳದಲ್ಲಿ ವನ್ಯಜೀವಿ ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಗುಂಡಿನ ದಾಳಿ ನಡೆದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ (IAS) ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಅದರಂತೆ ದಿನೇಶ್‌ಕುಮಾರ್ ಮೀನಾ ಅವರು ಆಗಸ್ಟ್ 15 ಮತ್ತು 16 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ತನಿಖೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ತನಿಖಾಧಿಕಾರಿಗಳು ಕೋರಿದ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸಿಕ್ಕಿದ್ದೇನು?

ಕೂಂಬಿಂಗ್ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಗೆ ಘಟನಾ ಸ್ಥಳದಲ್ಲಿ ಕಳ್ಳಬೇಟೆಗಾರರು ಬಿಟ್ಟು ಹೋಗಿದ್ದ ಎನ್ನಲಾದ ಹಲವು ವಸ್ತುಗಳು ಲಭ್ಯವಾಗಿವೆ. ಎರಡು ಚೀಲಗಳಲ್ಲಿ ತುಂಬಿದ್ದ ಅಂದಾಜು 20 ರಿಂದ 30 ಕೆಜಿ ತೂಕದ ವನ್ಯಜೀವಿ ಮಾಂಸ ಪತ್ತೆಯಾಗಿದೆ. ನಾಲ್ಕು ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, ಎರಡು ಲೀಟರ್‌ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಾಲು ಲೀಟರ್ ನೀರು ಪತ್ತೆಯಾಗಿದೆ. ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಯಾವ ಪ್ರಾಣಿಯ ಮಾಂಸ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅರಣ್ಯ ಇಲಾಖೆ ಆಸ್ತಿಪಾಸ್ತಿ ಮೇಲೆ ದಾಳಿ

ಎನ್‌ಕೌಂಟರ್ ಘಟನೆ ನಡೆದ ನಂತರ ಅರಣ್ಯ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೆಲವು ದುಷ್ಕರ್ಮಿಗಳು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಏಳು ಕಳ್ಳಬೇಟೆ ತಡೆ ಶಿಬಿರಗಳು (Anti-Poaching Camps) ಮತ್ತು ಒಂಬತ್ತು ವಸತಿಗೃಹಗಳಿಗೆ ಹಾನಿ ಮಾಡಲಾಗಿದೆ. ವಸತಿಗೃಹಗಳಲ್ಲಿದ್ದ ಪೀಠೋಪಕರಣಗಳು ಮತ್ತು ಸಾಮಾನು ಸರಂಜಾಮುಗಳನ್ನು ಪುಡಿಪುಡಿ ಮಾಡಲಾಗಿದೆ. ಇಲಾಖೆಗೆ ಸೇರಿದ ಒಂದು ಜೀಪ್ (ನಾಲ್ಕು ಚಕ್ರದ ವಾಹನ) ಹಾಗೂ ಸಿಬ್ಬಂದಿಯ ನಾಲ್ಕು ದ್ವಿಚಕ್ರ ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ.

ಪೊಲೀಸ್ ದೂರು ದಾಖಲು

ದುಷ್ಕರ್ಮಿಗಳ ಈ ಕೃತ್ಯದಿಂದ ಸರ್ಕಾರಕ್ಕೆ ಮತ್ತು ಇಲಾಖಾ ಸಿಬ್ಬಂದಿಗೆ ಅಪಾರ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಎಸಿಎಫ್ ಮರಿಸ್ವಾಮಿ ಅವರು ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆಯಾಗಿ ಕಾವೇರಿ ವನ್ಯಧಾಮದಲ್ಲಿ ನಡೆದ ಈ ಎನ್‌ಕೌಂಟರ್ ಮತ್ತು ನಂತರ ನಡೆದ ವಿಧ್ವಂಸಕ ಕೃತ್ಯಗಳು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಪತ್ರಿಕಾ ಪ್ರಕಟಣೆ

ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ದಾಖಲಾದ ವನ್ಯಜೀವಿ ಅಪರಾಧ ವರದಿ ಸಂಖ್ಯೆ: 01/2026-27 ದಿನಾಂಕ: 15.08.2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ

ಪತ್ರಿಕಾ ಪ್ರಕಟಣೆ - 02 ದಿನಾಂಕ: 16.08.2026

ದಿನಾಂಕ: 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆ ಕಾರ್ಯಾಚರಣೆಯ ಪ್ರಕರಣದಲ್ಲಿ ಗುಂಡಿನ ದಾಳಿ ನಡೆದಿರುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರು ಶ್ರೀ ದಿನೇಶಕುಮಾರ್ ಮೀನಾ, ಭಾ.ಆ.ಸೇ., ಉಪವಿಭಾಗಾಧಿಕಾರಿಗಳು, ಕೊಳ್ಳೇಗಾಲ ಉಪವಿಭಾಗ, ಕೊಳ್ಳೇಗಾಲ ಇವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿರುತ್ತಾರೆ.

ಅದರಂತೆ, ಸದರಿ ಉಪವಿಭಾಗಾಧಿಕಾರಿಗಳು ದಿನಾಂಕ: 15.08.2026 ರಂದು ಘಟನಾ ಸ್ಥಳಕ್ಕೆ ತನಿಖೆಯ ಸಲುವಾಗಿ ತೆರಳಿದ್ದು, ಸದರಿ ದಿನದಂದು ತನಿಖೆಯು ಪೂರ್ಣವಾಗಿರುವುದಿಲ್ಲ. ಆದುದರಿಂದ ದಿನಾಂಕ: 16.08.2026 ರಂದು ತನಿಖೆಯು ಮುಂದುವರೆದಿರುತ್ತದೆ. ಅದರ ಭಾಗವಾಗಿ ಉಪ ವಿಭಾಗಾಧಿಕಾರಿಗಳ ಸಮಕ್ಷಮ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಜರಾಗಿ ತನಿಖಾಧಿಕಾರಿಗಳು ಕೋರಿರುವ ಮಾಹಿತಿಯನ್ನು ಒದಗಿಸಿರುತ್ತಾರೆ.

ಮುಂದುವರೆದು, ದಿನಾಂಕ: 15.08.2026 ರಂದು ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳಿಗೆ 02 ಚೀಲಗಳಲ್ಲಿ ಯಾವುದೋ ವನ್ಯಪ್ರಾಣಿಯ ಮಾಂಸ ತುಂಬಿರುವುದು ಕಂಡುಬಂದಿದ್ದು, ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸದರಿ ಮಾಂಸವನ್ನು ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿಯೇ ಸಂರಕ್ಷಿಸಿರುತ್ತಾರೆ ಹಾಗೂ ದಿನಾಂಕ: 16.08.2026 ರ ಪೂರ್ವಾಹ್ನ ಉಪವಿಭಾಗಾಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಸಮಕ್ಷಮ ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದ 04 ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, 02 ಲೀಟರ್ ನೀಲಿ ಕ್ಯಾಪ್ ಹೊಂದಿರುವ ಮರಿಂಡಾ ಪ್ಲಾಸ್ಟಿಕ್ ಬಾಟಲಿನಲ್ಲಿ ಅಂದಾಜು ¼ ಲೀಟರ್ ನೀರು ಮತ್ತು 02 ಚೀಲಗಳಲ್ಲಿ ತುಂಬಿದ ಅಂದಾಜು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ಸರ್ಕಾರದ ಪರವಾಗಿ ಅಮಾನತುಪಡಿಸಿ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ವಶಪಡಿಸಿಕೊಳ್ಳಲಾದ ವನ್ಯಪ್ರಾಣಿ ಮಾಂಸದ ಪರೀಕ್ಷೆಯನ್ನು ದಿನಾಂಕ: 16.08.2026 ರ ಅಪರಾಹ್ನ ನಡೆಸಲಾಗಿರುತ್ತದೆ.

ಅಲ್ಲದೇ, ಸದರಿ ಘಟನೆ ನಡೆದ ತರುವಾಯ ಕೆಲವು ದುಷ್ಕರ್ಮಿಗಳು 07 ಕಳ್ಳಬೇಟೆ ತಡೆ ಶಿಬಿರಗಳು, 09 ವಸತಿಗೃಹಗಳಿಗೆ ಹಾನಿ ಮಾಡಿದ್ದು, ಸದರಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಹಾಗೂ ಸಾಮಾನು ಸರಂಜಾಮುಗಳನ್ನು ಮತ್ತು 01 ಸಂಖ್ಯೆ ನಾಲ್ಕು ಚಕ್ರದ ಇಲಾಖಾ ವಾಹನ ಹಾಗೂ ಸಿಬ್ಬಂದಿಗಳ 04 ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿರುತ್ತಾರೆ. ಇದರಿಂದ ಸರ್ಕಾರಕ್ಕೆ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಅಪಾರ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಈ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳಿಗೆ ದೂರನ್ನು ನೀಡಲಾಗಿರುತ್ತದೆ.

ಸಹಿ/-

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಕಾವೇರಿ ವನ್ಯಜೀವಿ ವಿಭಾಗ,

ಕೊಳ್ಳೇಗಾಲ