ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲ ಹಂತದ 9 ಆನೆಗಳ ಗಜಪಡೆ ಆಗಮಿಸಿದೆ. 6 ಬಾರಿ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ್ದರಿಂದ ಗೌರವಯುತ ವಿದಾಯ ನೀಡಲಾಗಿದ್ದು, ಈ ಬಾರಿ ದಸರಾ ಕಂಬಳ ಆಯೋಜನೆಯೂ ಖಚಿತವಾಗಿದೆ.

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆ ಭರ್ಜರಿ ಎಂಟ್ರಿಯಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ 9 ಆನೆಗಳ ಮೊದಲ ತಂಡವನ್ನು ಜಿಲ್ಲಾಡಳಿತ ನಾಡಿಗೆ ಬರಮಾಡಿಕೊಂಡಿದೆ. ಇದೇ ವೇಳೆ, ಸತತ 6 ವರ್ಷಗಳ ಕಾಲ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯ ಮೆರೆದಿದ್ದ ಕ್ಯಾಪ್ಟನ್ ಅಭಿಮನ್ಯುಗೆ ಆತ್ಮೀಯ ಭೀಳ್ಕೊಡುಗೆ ಸಿಕ್ಕಿದೆ.

ಇಂದಿನಿಂದ ಮೈಸೂರಿನ ದಸಾರ ಸಂಭ್ರಮ ಶುರುವಾಗಿದೆ. ಹುಣಸೂರು ತಾಲೂಕಿ‌ನ ವೀರನ ಹೊಸಹಳ್ಳಿ ಹೆಬ್ಬಾಗಿಲಿನಲ್ಲಿ ಗಜಪಯಣಕ್ಕೆ‌ ಅದ್ಧೂರಿ ಸ್ವಾಗತ ಸಿಕ್ಕಿದೆ. ಕಾಡಿನ ರಸ್ತೆಗಳನ್ನು ಸಿಂಗರಿಸಿ, ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಗಜಪಡೆಗೆ ವಿಧ್ಯುಕ್ತ ಚಾಲನೆ ನೀಡಿದರು. ಗಜಪಡೆಗೆ ಫಲ ತಾಂಬೂಲ, ಕಬ್ಬು, ಬೆಲ್ಲ, ಹಣ್ಣು-ಹಂಪಲುಗಳ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಮೊದಲ ಹಂತದ ಗಜಪಡೆಯಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಅರಮನೆ ನಗರಿಯತ್ತ ಹೆಜ್ಜೆ ಹಾಕಿದವು.

ಸಂಜೆ ಮೊದಲ ತಂಡದ 9 ಆನೆಗಳು ಮೈಸೂರಿಗೆ ಆಗಮಿಸಿದ್ದು, ಆಗಸ್ಟ್ 28ರಂದು ಬೆಳಗ್ಗೆ 8:45ಕ್ಕೆ ಅರಣ್ಯ ಭವನದಿಂದ ಮೈಸೂರು ಅರಮನೆ ಆವರಣಕ್ಕೆ ಪಾದಾರ್ಪಣೆ ಮಾಡಲಿವೆ. ನಂತರದ ದಿನಗಳಲ್ಲಿ 2ನೇ ಹಂತದಲ್ಲಿ ಉಳಿದ ಆನೆಗಳು ಸೇರ್ಪಡೆಯಾಗಲಿವೆ.

ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆಯ ವಿದಾಯ

ಇನ್ನು ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ದಸರಾದಲ್ಲಿ ಭಾಗಿಯಾಗಿ, 6 ಬಾರಿ ಚಿನ್ನದ ಅಂಬಾರಿಯನ್ನು ನಿರ್ವಿಘ್ನವಾಗಿ ಹೊತ್ತಿದ್ದ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುಗೆ 60 ವರ್ಷ ತುಂಬಿದೆ. ಸರ್ಕಾರದ ನಿಯಮಾನುಸಾರ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯುಗೆ ವಿಶ್ರಾಂತಿ ನೀಡಲಾಗಿದೆ. ಈಗಾಗಿ ಗಜಪಯಣದ ವೇಳೆ ಅಭಿಮನ್ಯುವಿಗೆ ಆತ್ಮೀಯ ಭೀಳ್ಕೊಡುಗೆ ನೀಡಲಾಯಿತು. ​ಶಂಖ, ಚಕ್ರ, ಗಂಡಭೇರುಂಡ ಹಾಗೂ ಹೂವಿನ ಬಳ್ಳಿಯ ಚಿತ್ತಾರಗಳಿಂದ ಅಭಿಮನ್ಯುವನ್ನು ಭವ್ಯವಾಗಿ ಸಿಂಗರಿಸಲಾಗಿತ್ತು. ​ದಾರಿಯುದ್ದಕ್ಕೂ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಹೂಮಳೆ ಸುರಿಸಿದರು. ಜೊತೆಗಿದ್ದ ಇತರ ಆನೆಗಳು ಸಾಲಾಗಿ ನಿಂತು ಗೌರವ ಸಲ್ಲಿಸಿದ ಕ್ಷಣ ಬಾಹುಕವಾಗಿತ್ತು.

ಈ ಬಾರಿ ದಸರಾ ಕಂಬಳ ಫಿಕ್ಸ್

ಮತ್ತೊಂದೆಡೆ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜನೆ ಕುರಿತ ಗೊಂದಲಗಳಿಗೆ ತೆರೆಬಿದ್ದಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಈ ಬಾರಿ ನಿಗದಿತ ಜಾಗದಲ್ಲೇ ದಸರಾ ಕಂಬಳವನ್ನು ಸರ್ಕಾರದಿಂದಲೇ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ವೀರನ ಹೊಸಹಳ್ಳಿಯಲ್ಲಿ ಈ ವಿಚಾರವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ​ಕ್ಯಾಪ್ಟನ್ ಅಭಿಮನ್ಯುವಿನ ನಿವೃತ್ತಿಯ ಭಾವುಕ ಕ್ಷಣಗಳ ನಡುವೆಯೇ, ಹೊಸ ಅಂಬಾರಿ ಆನೆಯ ಆಯ್ಕೆಯ ತಾಲೀಮಿಗೆ ಅರಮನೆ ನಗರಿ ಸಜ್ಜಾಗಿದ್ದು, ಅರಮನೆ ನಗರಿಯಲ್ಲಿ ದಸರಾ ಕಳೆ ಗರಿಗೆದರುತ್ತಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)