ಬೆನ್ನು ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಹಮದ್ ಹುಸೇನ್, ತನ್ನ ಗೆಳತಿಯೊಂದಿಗೆ ವಿಶೇಷ ಕೊಠಡಿಯಲ್ಲಿ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಧೀಶರ ದಿಢೀರ್ ಭೇಟಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಮಂಡ್ಯ: ಜೈಲಿನಲ್ಲಿ ಇರಬೇಕಿದ್ದ ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲಿ ರಾಜ್ಯಾತಿಥ್ಯ ನೀಡಿದ ಪ್ರಕರಣಕ್ಕೆ ಸಂಧಿಸಿದಂತೆ ಪೊಲೀಸ್ ಪೇದೆ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಚಂದ್ರು ಅಮಾನತುಗೊಂಡಿದ್ದು, ಕರ್ತವ್ಯ ಲೋಪ ಹಿನ್ನಲೆ ಮಂಡ್ಯ ಎಸ್‌ಪಿ ಡಾ.ಶೋಭಾರಾಣಿ ಅಮಾನತು ಆದೇಶ ನೀಡಿದ್ದಾರೆ.
ಆರೋಪಿ ಮಹಮದ್ ಹುಸೇನ್, ಬೆನ್ನು ನೋವು ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದನಂತೆ. ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿ ವಿಶೇಷ ಕೊಠಡಿಯಲ್ಲಿ ಗೆಳತಿಯೊಂದಿಗೆ ಏಕಾಂತದಲ್ಲಿ ಸಿಕ್ಕಿ ಬಿದ್ದಿದ್ದ. ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಭೇಟಿ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ನ್ಯಾಯಾಧೀಶಕರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ವರದಿ ನೀಡುವಂತೆ ಸೂಚನೆ ನೀಡಿದ್ದರು.
ಇದರ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಕರ್ತವ್ಯಲೋಪದ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಇಡೀ ಪ್ರಕರಣದ ಕುರಿತು ಡಿಐಜಿ ಕಾರಾಗೃಹ (ದಕ್ಷಿಣ) ದಿವ್ಯಾಶ್ರೀ ನೇತೃತ್ವದಲ್ಲಿ ತನಿಖೆಗೆ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದರು.
ಲೋಕಾಯುಕ್ತ ಪೊಲೀಸರಿಂದ ಆರೋಪಿ ಅರೆಸ್ಟ್
ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್ ನೇತೃತ್ವದ ತಂಡದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿ ಜೊತೆಗೆ ಯುವತಿ ಇರುವುದು ಕಂಡು ಬಂದಿತ್ತು. ಲೋಕಾಯುಕ್ತ ಪೊಲೀಸರಿಂದ ಅರೆಸ್ಟ್ ಆಗಿದ್ದ ಶ್ರೀರಂಗಪಟ್ಟಣ ADLR ಮಹಮದ್ ಹುಸೇನ್ ಎಂಬ ಆರೋಪಿ ಜೈಲಿನಲ್ಲಿರಬೇಕಿತ್ತು. ಆದರೆ ಹುಸೇನ್ ನನ್ನು ಜೈಲಾಧಿಕಾರಿಗಳು ಮಿಮ್ಸ್‌ಗೆ ದಾಖಲು ಮಾಡಿ, ವಿಶೇಷ ರೂಪ ವ್ಯವಸ್ಥೆಯನ್ನು ಮಾಡಿದ್ದರು. ನ್ಯಾಯಾಧೀಶರ ಪರಿಶೀಲನೆ ವೇಳೆ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಪೆಷಲ್ ರೂಮ್‌ನಲ್ಲಿ ಅನಧಿಕೃತ ಚಿಕಿತ್ಸೆ ನೀಡುತ್ತಿರುವುದು ಖಚಿತವಾಗಿತ್ತು.
ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರು ಆಸ್ಪತ್ರೆಗೆ ದಾಖಲು
ಆರೋಪಿಯನ್ನು ಕಂಡು ವೈದ್ಯಾಧಿಕಾರಿಗಳಿಗೆ ನ್ಯಾಯಾಧಶೀರು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಆತನಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದರಂತೆ. ಅಲ್ಲದೇ, ಇದೇ ವೇಳೆ ಆರೋಪಿ ಇದ್ದ ಸ್ಪೆಷಲ್ ರೂಮ್‌ನಲ್ಲಿ ಮಹಿಳೆಗೆ ಪ್ರಶ್ನಿಸಿದರೆ, ತಾನು ಆರೋಪಿಯ ಗೆಳತಿ ಆಕೆ ಹೇಳಿದ್ದಳಂತೆ.


