ಕೊಪ್ಪಳದ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಂ ಧರ್ಮವನ್ನು ಶ್ರೇಷ್ಠ ಮತ್ತು ವೈಜ್ಞಾನಿಕ ಎಂದು ಬಣ್ಣಿಸಿದ್ದಾರೆ. ತಮಗೆ ಹಜ್ ಯಾತ್ರೆಗೆ ಹೋಗುವ ಆಸೆ ಇದೆ ಎಂದ ಅವರು, ಕುರಾನ್ ಅಧ್ಯಯನ ಮಾಡುವುದಾಗಿಯೂ ತಿಳಿಸಿದರು. ಇದೇ ವೇಳೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ರಾಯರೆಡ್ಡಿ ಅವರ ಜ್ಞಾನವನ್ನು ಶ್ಲಾಘಿಸಿದರು.
ಕೊಪ್ಪಳ: ನಾನು ಇಸ್ಲಾಂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದೇನೆ, ಬೇರೆ ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ. ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆ ಇದೆ. ಹಲವರಿಗೆ ಇಸ್ಲಾಂ ಧರ್ಮ ಏನು ಅಂತಲೇ ಗೊತ್ತಿಲ್ಲ. ಮಠಮಾನ್ಯಗಳಿಗೆ ನಾನು ಜಾಸ್ತಿ ಹೋಗೋದೋಯಿಲ್ಲ ಎಂದು ಕೊಪ್ಪಳದ ಕುಕನೂರಿನಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಇಸ್ಲಾಂ ಶ್ರೇಷ್ಠ: ಸಚಿವರ ಹೇಳಿಕೆಯ ಹಿಂದಿನ ಮರ್ಮವೇನು?
ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ನನಗೆ ಹಜ್ ಯಾತ್ರೆಗೆ ಹೋಗುವ ಆಸೆ ಇದೆ. ಇಸ್ಲಾಂ ಧರ್ಮ ಒಂದು ಶ್ರೇಷ್ಠ ಧರ್ಮ, ಇಸ್ಲಾಂ ಬಗ್ಗೆ ತಪ್ಪು ಕಲ್ಪನೆ ಮಾಡಲಾಗುತ್ತಿದೆ. ನಾನು ಕುರಾನ್ ಸ್ಟಡಿ ಮಾಡಲಿಕ್ಕೆ ತಯಾರಿದ್ದೇನೆ. ಧರ್ಮದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು. ನಾನು ಮಠಮಾನ್ಯಗಳಿಗೆ ಜಾಸ್ತಿ ಹೋಗುವುದಿಲ್ಲ ಎಂದಿದ್ದಾರೆ.
ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಕೊಟ್ಟಿಲ್ಲ
ವೈಜ್ಞಾನಿಕವಾಗಿ ಇರುವ ಧರ್ಮ ಎಂದರೆ ಅದು ಇಸ್ಲಾಂ ಧರ್ಮ. ಅವುಗಳ ಹಿಂದಿನ ಇತಿಹಾಸವನ್ನ ಅಧ್ಯಯನ ಮಾಡಬೇಕು. ನನಗೆ ಹಜ್ ಯಾತ್ರೆಗೆ ಹೋಗೊಕೆ ಆಸೆ ಇದೆ, ಆದರೆ ಅವಕಾಶ ಇಲ್ಲ. ಅಲ್ಲಿಗೆ ಹೋಗೊಕೆ ಕನ್ವರ್ಟ್ ಆಗಿರಬೇಕು. ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಕೊಟ್ಟಿಲ್ಲ. ಕುರಾನ್ ಯಾರು ಬೇಕಾದರೂ ಓದಬಹುದು, ಮಹಮ್ಮದ್ ಪೈಂಗಬರ್ ಇಡೀ ಬ್ರಹ್ಮಾಂಡಕ್ಕೆ ಕುರಾನ್ ಕೊಟ್ಟಿದ್ದಾರೆ. ಈ ಧರ್ಮ ವೈಜ್ಞಾನಿಕವಾಗಿದೆ. ಮನುಷ್ಯ ಹೇಗೆ ಬದುಕಬೇಕೆಂದು ಈ ಧರ್ಮದಲ್ಲಿ ಇದೆ ಎಂದು ಸಚಿವರು ಹೇಳಿದ್ದಾರೆ.
ಎಲ್ಲಾ ಧರ್ಮಗಳಲ್ಲಿನ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು
ಮತಾಂಧರಾಗಬಾರದು, ಜಾತಿವಾದಿಯಾಗಬಾರದು. ಎಲ್ಲಾ ಧರ್ಮಗಳಲ್ಲಿನ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇಸ್ಲಾಂ ಧರ್ಮ ಬಹಳ ಮಾನವೀಯತೆಯ ಧರ್ಮ ಎಂದು ಹೇಳಿದರು. ಈ ಮಾತಿನ ನಡುವೆ ವ್ಯಕ್ತಿಯೊಬ್ಬರ 'ಹರಾಮ್' ಎಂದು ಕೂಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಹರಾಮ್ ಅಂದರೆ ಬಡಿತಾರೆ. ಮಸೀದಿಗೆ ಹೋಗಿ ಅಲ್ಲಾಹು ಅಕ್ಬರ್ ಅಂದರೆ ನಡೆಯೋಲ್ಲ. ಎಲ್ಲಾ ಧರ್ಮದಲ್ಲಿಯೂ ಹಾಗೆಯೇ ಇದೆ. ದೇವಸ್ಥಾನದಲ್ಲಿಯೂ ಹಾಗಯೇ ಮಾಡುತ್ತಾರೆ. ಶಾದಿ ಮಹಲ್ ಗೆ ಸರ್ಕಾರ ದುಡ್ಡು ಕೊಟ್ಟಿದ್ದೇವೆ. ಸೌದಿ ಅರೇಬಿಯಾ, ಪಾಕಿಸ್ತಾನ, ಮುಸ್ಲಿಂ ದೇಶದಿಂದ ದುಡ್ಡು ಬರೋದಿಲ್ಲ. ಯಾವುದೇ ಧರ್ಮ ಇರಲಿ, ಧಾರ್ಮಿಕ ಕ್ಷೇತ್ರದ ಹುಂಡಿ, ಭೂಮಿ ಮುಟ್ಟಿದರೆ ಮುಟ್ಟಿದರೆ ಅದು ಮಹಾಪಾಪ. ಉರ್ದು ಭಾಷೆ ಮುಸ್ಲಿಂ ಭಾಷೆ ಅಲ್ಲ. ದೇವರಿಗೆ ರೂಪ ಇಲ್ಲ, ದೇವರು ಒಬ್ಬನೇ ಅಂತ ಹೇಳಿದ್ದಾರೆ. ಕುಡಿಯುವಂತೆ ಇಲ್ಲ, ಮದ್ಯ ಮಾರಾಟ ಮಾಡುವಂತೆ ಇಲ್ಲ. ಯಾವ ರೀತಿ ಆಹಾರ ತಿನ್ನಬೇಕು ಅಂತ ನೀಡಿದ್ದಾರೆ. ಸತ್ತ ಪ್ರಾಣಿಗಳನ್ನು ತಿನ್ನುವಂತೆ ಇಲ್ಲ. ಹಂದಿ ಸೇವನೆ ಮಾಡಬಾರದು ಅಂತ ಹೇಳಿದ್ದಾರೆ. ಐದು ಬಾರಿ ನಮಾಜ್ ಮಾಡಲೇಬೇಕು. ಪ್ರತಿ ವರ್ಷ ನೀವು ಬಡವರಿಗೆ ದಾನ ಮಾಡಲೇಬೇಕು. ಪೈಗಂಬರ್ ಬಹಳ ವೈಜ್ಞಾನಿಕವಾಗಿ ಈ ಎಲ್ಲಾ ಅಂಶಗಳನ್ನು ಹೇಳಿದ್ದಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಬಂದ ಮೇಲೆ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ
ಕುಕನೂರು ಪಟ್ಟಣದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಮುಸ್ಲಿಂ ಜನಸಂಖ್ಯೆ ದೊಡ್ಡದಿದ್ದರೂ ಇನ್ನೂ ಅಭಿವೃದ್ಧಿ ಆಗಿಲ್ಲ. ಮುಸ್ಲಿಂ ಸಮುದಾಯ ಅಭಿವೃದ್ಧಿ ಮಾಡುವುದು ನಮ್ಮ ಆಧ್ಯತೆ. ಸಿದ್ದರಾಮಯ್ಯ ಅವರು ಬಂದ ಮೇಲೆ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ ಎಂದು ಹೇಳಿದರು.
ಇದೇ ವೇಳೆ ರಾಯರೆಡ್ಡಿ ಅವವರನ್ನು ಹಾಡಿಹೊಗಳಿದ ಯತೀಂದ್ರ ಸಿದ್ದರಾಮಯ್ಯ, ಬಸವರಾಜ ರಾಯರೆಡ್ಡಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಇಸ್ಲಾಂ ಧರ್ಮದ ಬಗ್ಗೆ ರಾಯರೆಡ್ಡಿ ಅವರಿಗೆ ಜ್ಞಾನ ಇದೆ. ರಾಯರೆಡ್ಡಿ ಅವರು ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ರಾಜಕಾರಣ ಆರಂಭ ಮಾಡಿದ್ದಾರೆ. ತಂದೆ ಅವರ ಹಾದಿಯಲ್ಲಿ ರಾಯರೆಡ್ಡಿ ಅವರು ನಡೆಯುತ್ತಿರುತ್ತಾರೆ. ಎಲ್ಲರ ಸೃಷ್ಟಿಕರ್ತ ಒಬ್ಬನೇ, ಬೇರೆಯವರನ್ನು ಪ್ರೀತಿಯಿಂದ ಕಾಣಬೇಕು. ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಿ ರಾಜಕೀಯ ಬೆಳೆ ಬೆಯಿಸಿಕೊಳ್ಳಬಾರದು. ಧರ್ಮದ ಮದ್ಯೆ ರಾಜಕಾರಣ ಇರಬಾರದು. ಅಂತಹ ಕೆಲಸವನ್ನು ಕೆಲವೊಂದು ಪಕ್ಷ ಮಾಡುತ್ತವೆ. ಹೀಗಾಗಿ ರಾಜಕಾರಣದಲ್ಲಿ ಧರ್ಮ ಬೆರೆಸುವ ಪಕ್ಷಕ್ಕೆ ನಿಮ್ಮ ಬೆಂಬಲ ಇರಬಾರದೆಂದ ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.


