Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!

ಮದುವೆಗೆ ಕೆಲವೇ ಗಂಟೆಗಳಿರುವಾಗ, ಯುವಕನೊಬ್ಬನ ಮಾನಸಿಕ ಕಿರುಕುಳಕ್ಕೆ ಬೇಸತ್ತು ವಧು ರಕ್ಷಿತಾ ಹಾಗೂ ಆಕೆಯ ಹೆತ್ತವರು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಉಲ್ಲಾಸ್ ಗೌಡ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದು, ಆತನೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

Share this Video
  • FB
  • Linkdin
  • Whatsapp

ಅದೊಂದು ಸಾಧಾರಣ ಹಾಗೂ ನೆಮ್ಮದಿಯ ಪುಟ್ಟ ಕುಟುಂಬ. ತಂದೆ, ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು. ದೊಡ್ಡ ಮಗಳಿಗೆ ಎರಡು ವರ್ಷಗಳ ಹಿಂದೆಯೇ ವಿವಾಹವಾಗಿ ಗಂಡನ ಮನೆ ಸೇರಿದ್ದಾಳೆ. ಇನ್ನುಳಿದಿದ್ದ ಎರಡನೇ ಮಗಳು ರಕ್ಷಿತಾಳಿಗೆ ನಾಳೆ ಅದ್ಧೂರಿಯಾಗಿ ಮದುವೆ ನಡೆಯಬೇಕಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ ಮನೆಯ ಮುಂದೆ ಮದುವೆ ಚಪ್ಪರ ಇರಬೇಕಿತ್ತು, ಮದುಮಗಳ ನಗುವಿನ ಸದ್ದು ಕೇಳಿಸಬೇಕಿತ್ತು. ಆದರೆ, ವಿಧಿಯ ಆಟ ಮತ್ತು ನರರಾಕ್ಷಸನೊಬ್ಬನ ಕಾಟದಿಂದಾಗಿ ಇಂದು ಆ ಮನೆಯ ಮುಂದೆ ಚಟ್ಟಗಳು ನಿಂತಿವೆ! ಹಸೆಮಣೆ ಏರಬೇಕಿದ್ದ ಮಗಳು ಹೆತ್ತವರೊಂದಿಗೆ ಸ್ಮಶಾನದ ಹಾದಿ ಹಿಡಿದಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಡೀ ಕುಟುಂಬವೇ ವಿಷ ಸೇವಿಸಿ ಸಾಮೂಹಿಕವಾಗಿ ಆ*ತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ದುರಂತ ನಡೆದಿದೆ. ಈ ಇಡೀ ಸಾವಿನ ಹಿಂದಿರುವುದು ಉಲ್ಲಾಸ್ ಗೌಡ ಎಂಬಾತನ ಕ್ರೌರ್ಯ. ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಆತನೊಬ್ಬನ ಹೆಸರೇ ಪ್ರಮುಖವಾಗಿ ಉಲ್ಲೇಖವಾಗಿದೆ.

ಅನ್ನ ಹಾಕಿದ ಮನೆಗೇ ದ್ರೋಹ ಬಗೆದ ಪಾಪಿ:

ಸ್ಥಳೀಯರ ಪ್ರಕಾರ, ಉಲ್ಲಾಸ್ ಗೌಡ ಆ ಕುಟುಂಬಕ್ಕೆ ಅತ್ಯಂತ ಆಪ್ತನಾಗಿದ್ದ, ಮನೆಯ ಮಗನಂತಿದ್ದವನು. ಅದೇ ಮನೆಯಲ್ಲಿ ಎಷ್ಟೋ ದಿನ ಅನ್ನ ತಿಂದಿದ್ದ. ಆದರೆ ರಕ್ಷಿತಾ ಮದುವೆ ನಿಶ್ಚಯವಾದ ಮೇಲೆ ಆತನ ಕಣ್ಣು ಕೆಂಪಾಗಿದೆ. 'ರಕ್ಷಿತಾಳನ್ನು ನನಗೇ ಕೊಟ್ಟು ಮದುವೆ ಮಾಡಿ' ಎಂದು ಆಕೆಯ ತಂದೆಯ ಬಳಿ ಹಠ ಹಿಡಿದಿದ್ದಾನೆ. ಆದರೆ ಅದಕ್ಕೆ ತಂದೆ ಒಪ್ಪದಿದ್ದಾಗ ವಿಕೃತ ರೂಪ ತಳೆದಿದ್ದಾನೆ.

ಮದುವೆ ಗಂಡಿಗೆ ಸಂದೇಶ, ಫೋಟೋ ರವಾನೆ:

ರಕ್ಷಿತಾ ಯಾರನ್ನು ಮದುವೆಯಾಗಬೇಕಿತ್ತೋ, ಆ ಹುಡುಗನಿಗೆ ಉಲ್ಲಾಸ್ ಗೌಡ ಮೆಸೇಜ್ ಮಾಡಿದ್ದಾನೆ. 'ನಾನು ಮತ್ತು ರಕ್ಷಿತಾ ಪ್ರೀತಿಸುತ್ತಿದ್ದೇವೆ, ಅವಳನ್ನು ನೀನು ಮದುವೆಯಾಗಬೇಡ' ಎಂದು ಹೇಳಿ ಒಂದೆರಡು ಫೋಟೋಗಳನ್ನೂ ಕಳುಹಿಸಿ ಮದುವೆ ಮುರಿಯಲು ಯತ್ನಿಸಿದ್ದಾನೆ. ಆದರೆ, ಈ ಸಮಯದಲ್ಲಿ ಮದುವೆಯಾಗಬೇಕಿದ್ದ ಹುಡುಗ, ಹುಡುಗಿಯ ಮನೆಗೆ ಬಂದು 'ಏನೇ ಆದರೂ ನಿಮ್ಮ ಮಗಳನ್ನೇ ನಾನು ಮದುವೆಯಾಗುತ್ತೇನೆ' ಎಂದು ಧೈರ್ಯ ತುಂಬಿ ಹೋಗಿದ್ದಾನೆ. ಆದರೂ, ಸಮಾಜದಲ್ಲಿ ಆಗಬಹುದಾದ ಅಪಮಾನ ಹಾಗೂ ಉಲ್ಲಾಸ್ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಹೆದರಿದ ಅಪ್ಪ, ಅಮ್ಮ ಮತ್ತು ಮಗಳು ಮೂವರೂ ವಿಷ ಸೇವಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಅನ್ನ ಹಾಕಿದ ಮನೆಗೇ ಕೊಳ್ಳಿ ಇಟ್ಟ ಉಲ್ಲಾಸ್ ಗೌಡನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Video