ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!

ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸುಳಿವಿರದ ಕೊಲೆ ಪ್ರಕರಣವನ್ನು ಪೊಲೀಸರು ಒಂದು ತಿಂಗಳ ನಂತರ ಭೇದಿಸಿದ್ದಾರೆ. ಕೊಲೆಗೂ ಮುನ್ನ ಹಂತಕರು ಮಾಡಿದ್ದ ಒಂದು 'ಫೋನ್-ಪೇ' ವಹಿವಾಟಿನ ಜಾಡು ಹಿಡಿದು, ಸ್ನೇಹಿತರೇ ಆಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ರಾಜಧಾನಿಯ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆ ಒಂದು ಭೀಕರ ಕೊಲೆ ಪ್ರಕರಣ ಇಡೀ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಸುಳಿವೇ ಇಲ್ಲದ ಆ ಕೇಸ್‌ಗೆ ಈಗ ತಿಂಗಳ ನಂತರ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಚಾಣಾಕ್ಷತನದಿಂದ ಹಂತಕರು ಈಗ ಕಂಬಿ ಎಣಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?
ಸುಮಾರು ಒಂದು ತಿಂಗಳ ಹಿಂದೆ ಗಂಗಮ್ಮನಗುಡಿ ವ್ಯಾಪ್ತಿಯ ನಿರ್ಜನ ಪ್ರದೇಶದ ಲೇಔಟ್ ಒಂದರಲ್ಲಿ ಮೂಟೆ ಕಟ್ಟಿದ ಸ್ಥಿತಿಯಲ್ಲಿ ಕೊಳೆತ ಮೃತದೇಹವೊಂದು ಪತ್ತೆಯಾಗಿತ್ತು. ಮೃತದೇಹ ಸಿಗುವ ಮುನ್ನವೇ ನಾಲ್ಕು ದಿನಗಳು ಕಳೆದಿದ್ದರಿಂದ ಶವ ಗುರುತು ಸಿಗದಷ್ಟು ವಿರೂಪಗೊಂಡಿತ್ತು. ಸತ್ತವನು ಯಾರು? ಕೊಂದವರು ಯಾರು? ಎಂಬ ಯಾವ ಸುಳಿವು ಪೊಲೀಸರ ಬಳಿ ಇರಲಿಲ್ಲ.

ಪೊಲೀಸರ ಹಗಲು-ರಾತ್ರಿ ಕಾರ್ಯಾಚರಣೆ:
ಈ ಸವಾಲನ್ನು ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ರಘು ಪ್ರಸಾದ್ ಮತ್ತು ಅವರ ತಂಡ ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದೆ. ಆದರೂ ಹಂತಕರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಪೊಲೀಸರು ಮಾತ್ರ ಪಟ್ಟು ಬಿಡದೆ ತನಿಖೆ ಮುಂದುವರಿಸಿದ್ದರು.

ಬಾರ್ ಬಿಲ್ ನೀಡಿದ ‘ಡಿಜಿಟಲ್’ ಸುಳಿವು:
ತನಿಖೆಯ ವೇಳೆ ಹಂತಕರು ಕೊಲೆ ಮಾಡುವ ಮೊದಲು ಬಾರ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲಿ ಹಂತಕರು ಕುಡಿದ ನಶೆಯಲ್ಲಿದ್ದರೂ, ಬಿಲ್ ಪಾವತಿಸಲು 'ಫೋನ್-ಪೇ' (PhonePe) ಬಳಸಿದ್ದರು. ಈ ಒಂದು ಸಣ್ಣ ಡಿಜಿಟಲ್ ಟ್ರಾನ್ಸಾಕ್ಷನ್ ಪೊಲೀಸರಿಗೆ ಹಂತಕರ ವಿಳಾಸ ತಲುಪಲು ದಾರಿಯಾಯಿತು. ಆ ಫೋನ್-ಪೇ ನಂಬರ್ ಬೆನ್ನತ್ತಿದ ಪೊಲೀಸರಿಗೆ ಆರೋಪಿಗಳ ಪೂರ್ಣ ಮಾಹಿತಿ ಲಭ್ಯವಾಯಿತು.

ಕೊಲೆಗೆ ಕಾರಣವೇನು?
ಬಂಧಿತ ಆರೋಪಿಗಳು ಮತ್ತು ಮೃತ ವ್ಯಕ್ತಿ ಒಂದೇ ಊರಿನಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಗಂಗಮ್ಮನಗುಡಿ ಬಳಿ ಒಂದೇ ರೂಮಿನಲ್ಲಿ ವಾಸವಾಗಿದ್ದ ಇವರು, ಪ್ರತಿದಿನ ರಾತ್ರಿ ಪಾರ್ಟಿ ಮಾಡುತ್ತಿದ್ದರು. ಅಂದು ಪಾರ್ಟಿ ಮಾಡುವಾಗ ಸಣ್ಣ ವಿಷಯಕ್ಕೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಸ್ನೇಹಿತರೇ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಆತನನ್ನು ಸಾಯಿಸಿದ್ದಾರೆ. ನಂತರ ಗಾಬರಿಯಾದ ಅವರು ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಮೂಟೆ ಕಟ್ಟಿ ಲೇಔಟ್‌ನಲ್ಲಿ ಎಸೆದು ರಾತ್ರೋರಾತ್ರಿ ಊರಿಗೆ ಪರಾರಿಯಾಗಿದ್ದರು.

ಯಾವುದೇ ಸುಳಿವೇ ಇಲ್ಲದ ಈ ಕೇಸ್ ಅನ್ನು ಅದ್ಭುತವಾಗಿ ಭೇದಿಸಿದ ಗಂಗಮ್ಮನಗುಡಿ ಪೊಲೀಸರ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Video