ಸಚಿವ ಎಸ್ ಜೈಶಂಕರ್, ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಸೇರಿದಂತೆ ಹಲವು ಪ್ರಮುಖರಿಗೆ SIR ನೋಟಿಸ್ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ನಡುವೆ ಈ ನೋಟಿಸ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ನವದೆಹಲಿ (ಸೆ.20) ದೇಶದ ಹಲವೆಡೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಅಕ್ರಮವಾಗಿ ಸೇರಿಕೊಂಡಿರುವ ಮತದಾರರ ಹೆಸರು ತೆಗೆದುಹಾಕಿ ಸರಿಯಾದ ಪಟ್ಟಿ ತಯಾರಿಸಲಾಗುತ್ತಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಮತದಾರರ ಹೆಸರು, ವಿಳಾಸ ಸೇರಿದಂತೆ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. SIR ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ಹೊರಹಾಕುತ್ತಿದ್ದಂತೆ ಹಲವು ಪ್ರಮುಖರಿಗೆ SIR ನೋಟಿಸ್ ನೀಡಲಾಗಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್, ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ, ಬಿಜೆಪಿ ಶಾಸಕ ಕೈಲಾಶ್ ಗೆಹ್ಲೋಟ್, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖರಿಗೆ SIR ನೋಟಿಸ್ ನೀಡಲಾಗಿದೆ.
ಜೈಶಂಕರ್‌ಗೆ ನೋಟಿಸ್ ನೀಡಿದ್ದು ಯಾಕೆ
ಹೆಸರು, ವಿಳಾಸ, ದಾಖಲೆಗಳ ಲೋಪದೋಷಗಳ ಸಂಬಂಧ ಪ್ರಮುಖರಿಗೆ ನೋಟಿಸ್ ನೀಡಲಾಗಿದೆ. ಎಸ್ ಜೈಶಂಕರ್ ಹಾಗೂ ಅವರ ಪತ್ನಿಗೆ SIR ನೋಟಿಸ್ ನೀಡಲಾಗಿದೆ. ಇಬ್ಬರ ಹೆಸರು ಕಳೆದ ಮತದಾರರ ಪಟ್ಟಿಯಲ್ಲಿ ಮ್ಯಾಪ್ ಆಗಿಲ್ಲ ಎಂದು ನೋಟಿಸ್ ನೀಡಲಾಗಿದೆ. ಈ ಪೈಕಿ ಪೂರಕ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ಇನ್ನು ಬಿಜೆಪಿ ಹಿರಿಯ ನಾಯಕ, ರಾಜಕೀಯದಿಂದ ನಿವೃತ್ತಿಯಾಗಿರುವ ಎಲ್‌ಕೆ ಅಡ್ವಾಣಿ , ಅಡ್ವಾಣಿ ಪುತ್ರಿ ಪ್ರತಿಭಾ ಅಡ್ವಾಣಿ ಸೇರಿದಂತೆ ಕುಟುಂಬದ ಕೆಲ ಸದಸ್ಯರಿಗೂ ನೋಟಿಸ್ ನೀಡಲಾಗಿದೆ.
ದೆಹಲಿ ಬಿಜೆಪಿ ಶಾಸಕ ಕೈಲಾಶ್ ಗೆಹ್ಲೋಟ್, ಪತ್ನಿ ಮೌಶುಮಿ ಮಿಶ್ರಾ ಹಾಗೂ ಕುಟುಂಬಸ್ಥರಿಗೆ ಹೆಸರು ಮ್ಯಾಪಿಂಗ್ ಆಗಿಲ್ಲ ಎಂದು SIR ನೋಟಿಸ್ ನೀಡಲಾಗಿದೆ. ಇತ್ತ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಿಸೋಡಿಯಾ ಪತ್ನಿ ಸೀಮಾ , ಪುತ್ರನಿಗೂ SIR ನೋಟಿಸ್ ನೀಡಲಾಗಿದೆ. ಹೆಸರು ಮಿಸ್‌ಮ್ಯಾಚ್ ಸೇರಿದಂತೆ ಇತರ ಕೆಲ ಕಾರಣಗಳನ್ನು SIR ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ವಿಪಕ್ಷಗಳ ಪ್ರಮುಖ ನಾಯಕರಿಗೂ ನೋಟಿಸ್
ವಿಪಕ್ಷಗಳ ಪ್ರಮುಖ ನಾಯಕರಿಗೂ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ, ಕಪಿಲ್ ಸಿಬಲ್, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಕುಟುಂಬಸ್ಥರೂ ಸೇರಿದಂತೆ ಹಲವರು ಪ್ರಮುಖರಿಗೆ SIR ನೋಟಿಸ್ ನೀಡಲಾಗಿದೆ.
ನಾಯಕರ ವಾರ್ನಿಂಗ್
ಸುಬ್ರಮಣಿಯನ್ ಸ್ವಾಮಿ, ಕಪಿಲ್ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಆಯೋಗದ ನೋಟಿಸ್ ವಿರುದ್ದ ಗರಂ ಆಗಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಒತ್ತಡದಿಂದ ನೋಟಿಸ್ ಕಳುಹಿಸಲಾಗುತ್ತಿದೆ. ಚುನಾವಣಾ ಆಯೋಗ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಎಲ್ಲಾ ಪ್ರಯತ್ನ ನಡೆಸುತ್ತಿದೆ. ಹೆಸರು ಕೈಬಿಟ್ಟರೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.


