ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಅವರ ಕುಟುಂಬದ ಹೆಸರುಗಳು 'ದೋಷಪೂರಿತ ಪಟ್ಟಿ'ಯಲ್ಲಿ ಸೇರಿವೆ. 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಅವರಿಗೆ ನೋಟಿಸ್ ಜಾರಿಯಾಗುವ ನಿರೀಕ್ಷೆಯಿದೆ.
ಬೆಂಗಳೂರು (ಸೆ.9): ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ 'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' (SIR) ಪ್ರಕ್ರಿಯೆಯಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ, ಆಧಾರ್ ಕಾರ್ಡ್‌ನ ಸೃಷ್ಟಿಕರ್ತ, ಉದ್ಯಮಿ ನಂದನ್ ನಿಲೇಕಣಿ ಮತ್ತು ಅವರ ಇಡೀ ಕುಟುಂಬದ ಹೆಸರುಗಳು 'ದೋಷಪೂರಿತ ಪಟ್ಟಿ'ಯಲ್ಲಿ (Discrepancy List) ಸೇರ್ಪಡೆಯಾಗಿವೆ. ಪ್ರಸ್ತುತ ನಡೆಯುತ್ತಿರುವ ದಾಖಲೆ ಪರಿಶೀಲನಾ ಹಂತದಲ್ಲಿ ನಿಲೇಕಣಿ ಕುಟುಂಬಕ್ಕೆ ಆಯೋಗದಿಂದ ನೋಟಿಸ್ ಜಾರಿಯಾಗುವ ನಿರೀಕ್ಷೆಯಿದೆ.
71 ವರ್ಷದ ನಂದನ್ ನಿಲೇಕಣಿ, ಅವರ ಪತ್ನಿ ರೋಹಿಣಿ ನಿಲೇಕಣಿ (67), ಮಕ್ಕಳಾದ ಜಾಹ್ನವಿ ನಂದನ್ ನಿಲೇಕಣಿ (38) ಹಾಗೂ ನಿಹಾರ್ ನಿಲೇಕಣಿ (36) ಅವರ ಹೆಸರುಗಳು ಈ ದೋಷಪೂರಿತ ಪಟ್ಟಿಯಲ್ಲಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಶೀಘ್ರವೇ ನೋಟಿಸ್ ನೀಡಲಾಗುತ್ತದೆ.
'2002ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ವರ್ಗ'
'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪಡೆದುಕೊಂಡಿರುವ ದೋಷಪೂರಿತ ಪಟ್ಟಿಯ ಪ್ರಕಾರ, ನಿಲೇಕಣಿ ಮತ್ತು ಅವರ ಕುಟುಂಬದ ಸದಸ್ಯರನ್ನು "ಕಳೆದ ಎಸ್‌ಐಆರ್‌ಗೆ ಮ್ಯಾಪ್ ಆಗಿಲ್ಲ" (Unmapped with last SIR) ಎಂದು ವರ್ಗೀಕರಿಸಲಾಗಿದೆ. 2002 ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ಮತದಾರರಿಗೆ ಈ ವರ್ಗೀಕರಣ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿಲೇಕಣಿ ಕುಟುಂಬವು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿದ್ದು, ಕೋರಮಂಗಲದ 3 ನೇ ಬ್ಲಾಕ್‌ನಲ್ಲಿರುವ ರೆಡ್ಡಿ ಜನಸಂಘ ಪ್ರೌಢಶಾಲಾ ಮತಗಟ್ಟೆಯ ಮತದಾರರಾಗಿದ್ದಾರೆ. ಅಕ್ಟೋಬರ್ 27 ರಂದು ಪ್ರಕಟಗೊಳ್ಳಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಬೇಕಾದರೆ, ಅವರು ಚುನಾವಣಾ ಆಯೋಗವು ಅನುಮೋದಿಸಿದ 11 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕಾಗುತ್ತದೆ.
ನಂದನ್ ನಿಲೇಕಣಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ, ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ವಿರುದ್ಧ 2.28 ಲಕ್ಷ ಮತಗಳಿಂದ ಪರಾಭವಗೊಂಡಿದ್ದರು. ಅವರು 'ಯುಐಡಿಎಐ' (Aadhaar/UIDAI) ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂಬುದು ಗಮನಾರ್ಹ.
ಪ್ರೊ. ಸಿಎನ್‌ಆರ್ ರಾವ್, ಹಾರೇಕಳ ಹಾಜಬ್ಬ ಹೆಸರೂ ಪಟ್ಟಿಯಲ್ಲಿ
ಕೇವಲ ನಿಲೇಕಣಿ ಕುಟುಂಬ ಮಾತ್ರವಲ್ಲದೆ, ಭಾರತ ರತ್ನ ಪುರಸ್ಕೃತ ಪ್ರಖ್ಯಾತ ವಿಜ್ಞಾನಿ ಪ್ರೊ. ಸಿಎನ್‌ಆರ್ ರಾವ್ ಹಾಗೂ ಪದ್ಮಶ್ರೀ ಪುರಸ್ಕೃತ ಹಾರೇಕಳ ಹಾಜಬ್ಬ ಅವರಂತಹ ಮಹನೀಯರ ಹೆಸರುಗಳೂ ಸಹ ಈ ದೋಷಪೂರಿತ ಪಟ್ಟಿಯಲ್ಲಿ ಕಂಡುಬಂದಿವೆ. ಪ್ರೊ. ಸಿಎನ್‌ಆರ್ ರಾವ್ ಅವರ ಹೆಸರು 2002 ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಫ್ಲ್ಯಾಗ್ ಮಾಡಲಾಗಿತ್ತು. ಆದರೆ, ಈ ಬಗ್ಗೆ ಬುಧವಾರ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್, ಪ್ರೊ. ಸಿಎನ್‌ಆರ್ ರಾವ್ ಅವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಮತಗಟ್ಟೆ ಮಟ್ಟದ ಅಧಿಕಾರಿ (BLO) ಅವರ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲು ಈಗಾಗಲೇ ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಹೆಸರಿನಲ್ಲಾದ ವ್ಯತ್ಯಾಸದಿಂದಾಗಿ ಹಾರೇಕಳ ಹಾಜಬ್ಬ ಅವರಿಗೆ ನೋಟಿಸ್ ನೀಡಲಾಗಿದೆ.
43.81 ಲಕ್ಷ ಮತದಾರರಿಗೆ ನೋಟಿಸ್
ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿರುವ ಒಟ್ಟು 4.46 ಕೋಟಿ ಮತದಾರರ ಪೈಕಿ, 43.81 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿದೆ. ಅಕ್ಟೋಬರ್ 22 ಕ್ಕೆ ಮುಕ್ತಾಯಗೊಳ್ಳಲಿರುವ ನೋಟಿಸ್ ಪ್ರಕ್ರಿಯೆಯ ಅವಧಿಯಲ್ಲಿ ಮತದಾರರು ತಮ್ಮ ಸಂಬಂಧಿತ ದಾಖಲೆಗಳನ್ನು ಬಿಎಲ್‌ಒಗಳಿಗೆ (ಮತಗಟ್ಟೆ ಅಧಿಕಾರಿಗಳಿಗೆ) ಸಲ್ಲಿಸಬೇಕಾಗುತ್ತದೆ.


