ತಮಿಳುನಾಡು ಸಿಎಂ ವಿಜಯ್ ನಿತ್ಯ 20 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಸಚಿವ ಆಧವ್ ಅರ್ಜುನ್ ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ, ವಿಜಯ್ ಅವರ ಹೊಸ ಕಚೇರಿ ನಿರ್ಮಾಣದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಆರೋಪ ಮತ್ತು ಅದಕ್ಕೆ ಟಿವಿಕೆ ನೀಡಿರುವ ಸ್ಪಷ್ಟನೆಯನ್ನು ಈ ಲೇಖನ ಒಳಗೊಂಡಿದೆ.

ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳನ್ನು ಪೂರೈಸಿದ್ದು, ಈ ಬೆನ್ನಲ್ಲೇ ‘ಸಿಎಂ ವಿಜಯ್‌ ನಿತ್ಯ 20 ಗಂಟೆ ಕೆಲಸ ಮಾಡುತ್ತಾರೆ. ಅವರ ದಿನಚರಿ ಬೆಳಿಗ್ಗೆ 4 ಗಂಟೆಯಿಂದಲೇ ಆರಂಭವಾಗುತ್ತದೆ’ ಎಂದು ಸಚಿವ ಆಧವ್‌ ಅರ್ಜುನ್‌ ಗುಟ್ಟು ಬಿಚ್ಚಿಟ್ಟಿದ್ದಾರೆ.

ಟೀವಿ ಸಂವಾದದಲ್ಲಿ ಮಾತನಾಡಿದ ಅವರು,, ‘ನಮ್ಮ ನಾಯಕ ನಿತ್ಯ 18-20 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾರೆ. ಅವರು ಬೆಳಿಗ್ಗೆ 4 ಗಂಟೆಗೆ ನಮಗೆ ಕರೆ ಮಾಡಿ ಪ್ರತಿಯೊಂದು ಇಲಾಖೆಯಲ್ಲಿ ಏನಾಗುತ್ತಿದೆ ಎಂದು ವಿಚಾರಿಸುತ್ತಾರೆ. ಅಂತಹವರು ನಮ್ಮ ಮುಖ್ಯಮಂತ್ರಿ. ಸಿಎಂ ಆಗಿದ್ದರೂ ಯಾವುದೇ ಅಹಂಕಾರವಿಲ್ಲ. ನಾವು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇವೆ’ ಎಂದರು. ಇದೇ ವೇಳೆ ಸಿಎಂರನ್ನು ರಾಜಕೀಯ ಸನ್ಯಾಸಿ, ಅವರು ಸಂಭ್ರಮದತ್ತ ಗಮನ ಹರಿಸುವ ಬದಲು ಆಡಳಿತದತ್ತ ಚಿತ್ತ ಹರಿಸಿದ್ದಾರೆ ಎಂದು ಸಚಿವರು ಬಣ್ಣಿಸಿದರು.

ವಿಜಯ್‌ ಹೊಸ ಕಚೇರಿ ಟೆಂಡರ್‌ನಲ್ಲಿ ಅಕ್ರಮ: ಬಿಜೆಪಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರು ತಮ್ಮ ಕಚೇರಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದರೆ ಇದು ವಿವಾದಕ್ಕೆ ಕಾರಣವಾಗಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ಸಿಎಂ ವಿಜಯ್ ತಮ್ಮ ಸಿಬ್ಬಂದಿಗೆ ಹೆಚ್ಚಿನ ಸ್ಥಳವಕಾಶ ಒದಗಿಸಲು ಫೋರ್ಟ್ ಸೇಂಟ್ ಜಾರ್ಜ್‌ನಿಂದ ಚೆನ್ನೈನ ನಮಕ್ಕಲ್ ಕವಿಂಗರ್ ಮಾಳಿಗೈಗೆ ಕಚೇರಿ ಸ್ಥಳಾಂತರಕ್ಕೆ ಮುಂದಾಗಿದ್ದು, ಸರ್ಕಾರ ಅದಕ್ಕಾಗಿ 5.5 ಕೋಟಿ ರು.ಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕಟ್ಟಡ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ‘ಆದರೆ ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ನಿರ್ಮಾಣ ಆರಂಭದ ನಂತರ ಟೆಂಡರ್‌ ಕರೆಯಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.

ಆದರೆ ಈ ಆರೋಪವನ್ನು ಟಿವಿಕೆ ನಾಯಕ, ಸಚಿವ ಆಧವ್‌ ಅರ್ಜುನ್‌ ಅಲ್ಲಗಳೆದು, ‘ಈ ವರದಿಗಳು ಸಂಪೂರ್ಣ ಸುಳ್ಳು. ತನ್ನಂತೆಯೇ ಸಿಬ್ಬಂದಿಗೂ ಕೆಲಸ ಮಾಡಲು ವಿಶಾಲವಾದ ಸ್ಥಳ ಬೇಕು ಎನ್ನುವ ಕಾರಣಕ್ಕೆ ಕಚೇರಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ‘ ಎಂದಿದ್ದಾರೆ.

ಇದನ್ನೂ ಓದಿ: ಆಟೋಮೊಬೈಲ್ ಇತಿಹಾಸದಲ್ಲೇ ಮಹಾ ದಾಖಲೆ: 382 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿಯ ಮೊದಲ ಇವಿ ಕಾರು!

ಇದನ್ನೂ ಓದಿ: "ಗಂಡಸರಿಲ್ಲದೆ ನಿಮಗಿದು ಸಾಧ್ಯವಿಲ್ಲ" ಎಂದವರಿಗೆ ದಿಟ್ಟ ಉತ್ತರ, ಮೈನಸ್ ಡಿಗ್ರಿ ಚಳಿ 2 ಧ್ರುವ ದಾಟಿದ ಮೊದಲ ಮಹಿಳೆ ಕಥೆ!