ಸ್ಪರ್ಧಾ ಪರೀಕ್ಷೆಯ ಮಾರ್ಗದರ್ಶಿ ಪುಸ್ತಕವೊಂದರಲ್ಲಿ 'ಸ್ವಾತಂತ್ರ್ಯ ಹೋರಾಟಗಾರರು' ಪಾಠದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. 1950ರಲ್ಲಿ ಜನಿಸಿದ ಮೋದಿಯವರನ್ನು 1947ರ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಹೇಗೆ ಸೇರಿಸಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ನವದೆಹಲಿ (ಸೆ.08): ಸ್ಪರ್ಧಾ ಪರೀಕ್ಷೆಗಳ ಮಾರ್ಗದರ್ಶಿ ಪುಸ್ತಕವೊಂದರ ‘ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಕುರಿತ 56ನೇ ಪಾಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪುಸ್ತಕದಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ನುಡಿಗಳು ಮತ್ತು ಘೋಷವಾಕ್ಯಗಳು’ ಎಂಬ ಶೀರ್ಷಿಕೆಯ ಪಾಠವಿದ್ದು, ಅದರಲ್ಲಿ ಮೋದಿ ಅವರ ಹೆಸರಿನೊಂದಿಗೆ ‘ನಾನೂ ಚೌಕಿದಾರ’, ‘ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಜೈ ಅನುಸಂಧಾನ್’ ಎಂಬ ಘೋಷಣೆಗಳನ್ನು ನೀಡಲಾಗಿದೆ. ಈ ಪಾಠವನ್ನು ‘ಶಿವಂತ್ ಸರ್’ ಬರೆದಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಸ್ವಾತಂತ್ರ್ಯ 1947ರಲ್ಲಿ ದೊರೆತರೆ, ಮೋದಿ 1950ರಲ್ಲಿ ಜನನ
ಈ ವಿಚಾರ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಪುಸ್ತಕದಲ್ಲಿ ಇಂತಹ ಉಲ್ಲೇಖ ಹೇಗೆ ಕಾಣಿಸಿಕೊಂಡಿತು ಎಂದು ಪ್ರಶ್ನಿಸಿದ್ದಾರೆ. ‘ಭಾರತಕ್ಕೆ ಸ್ವಾತಂತ್ರ್ಯ 1947ರಲ್ಲಿ ದೊರೆತರೆ, ನರೇಂದ್ರ ಮೋದಿ 1950ರಲ್ಲಿ ಜನಿಸಿದ್ದಾರೆ. ಹಾಗಾದರೆ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ವಿಭಾಗದಲ್ಲಿ ಹೇಗೆ ಸೇರಿಸಲಾಗಿದೆ?’ ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವೈರಲ್ ವಿಡಿಯೋ ಕುರಿತು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‌ಗಳ ಮೂಲಕ ಪುಸ್ತಕದಲ್ಲಿನ ಈ ಉಲ್ಲೇಖವನ್ನು ಟೀಕಿಸಿದ್ದಾರೆ.


