ಕಳೆದ 32 ವರ್ಷಗಳಿಂದ, ಕಾಶ್ಮೀರದ ಮುಷ್ತಾಕ್ ಅಹ್ಮದ್ ದಾರ್ ಅವರು ರಬಾಬ್, ಸಂತೂರ್‌ನಂತಹ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ತಯಾರಿಸುವ ಮೂಲಕ ತಮ್ಮ ಪೂರ್ವಜರ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ಈ ಕಲೆ ಅಳಿವಿನಂಚಿನಲ್ಲಿದ್ದು, ಯುವಕರು ಇದನ್ನು ಕಲಿಯಲು ಮುಂದೆ ಬರುವಂತೆ ಮನವಿ ಮಾಡಿದ್ದಾರೆ.
ಕಳೆದ 32 ವರ್ಷಗಳಿಂದ ಮುಷ್ತಾಕ್ ಅಹ್ಮದ್ ದಾರ್ ಅವರು ಕಾಶ್ಮೀರದ ಒಂದು ಅದ್ಭುತವಾದ ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ಅದೇ ಕೈಯಿಂದ ಸಂಗೀತ ವಾದ್ಯಗಳನ್ನು ತಯಾರಿಸುವುದು. ಈ ಕಲೆ ಕಲಿತು ಉತ್ತಮ ಜೀವನ ನಡೆಸಬಹುದು, ಬನ್ನಿ ಎಂದು ಯುವ ಪೀಳಿಗೆಗೂ ಇವರು ಕರೆ ನೀಡುತ್ತಿದ್ದಾರೆ.
ಬುದ್ಗಾಮ್ ಜಿಲ್ಲೆಯ ನರ್ಬಾಲ್ ನಿವಾಸಿಯಾದ 40 ವರ್ಷದ ಮುಷ್ತಾಕ್, ತಮ್ಮ 8ನೇ ವಯಸ್ಸಿನಲ್ಲೇ ತಂದೆಯಿಂದ ಈ ಕಲೆ ಕಲಿಯಲು ಆರಂಭಿಸಿದರು. ಇಂದು ಇವರು ರಬಾಬ್, ಸಂತೂರ್, ಸಾಜ್-ಎ-ಕಾಶ್ಮೀರ್, ಕಾಶ್ಮೀರಿ ಸಿತಾರ್, ಸಿಖ್ ರಬಾಬ್ ಮತ್ತು ಸುರ್ನಾಯ್ ಸೇರಿದಂತೆ ಹಲವು ಸಾಂಪ್ರದಾಯಿಕ ವಾದ್ಯಗಳನ್ನು ತಯಾರಿಸುತ್ತಾರೆ.
ಒಂದು ವಾದ್ಯವನ್ನು ತಯಾರಿಸಲು ಮುಷ್ತಾಕ್ ಸುಮಾರು ಎರಡು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಮಲ್ಬರಿ ಮರವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ವೇಗಕ್ಕಿಂತ ಗುಣಮಟ್ಟಕ್ಕೆ ಇವರ ಮೊದಲ ಆದ್ಯತೆ. ಜಮ್ಮು ಮತ್ತು ಕಾಶ್ಮೀರ ಅಷ್ಟೇ ಅಲ್ಲ, ದೇಶದ ಬೇರೆ ಬೇರೆ ಭಾಗಗಳಿಂದಲೂ ಗ್ರಾಹಕರು ಇವರಿಗೆ ಆರ್ಡರ್ ಮಾಡುತ್ತಾರೆ.
ಕಲೆಯ ಪರಂಪರೆ ಉಳಿಸಲು ಮನವಿ
ಆದರೆ, ಮುಷ್ತಾಕ್ ಅವರಿಗೆ ಈ ವಾದ್ಯಗಳನ್ನು ಮಾಡುವುದು ಮಾತ್ರ ಮುಖ್ಯವಲ್ಲ, ಈ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಕೂಡ ಮುಖ್ಯವಾಗಿದೆ. ಈ ಪರಂಪರೆಗೆ ಎದುರಾಗಿರುವ ದೊಡ್ಡ ಸವಾಲು ಎಂದರೆ, ಇದನ್ನು ಕಲಿಯಲು ಯುವಕರು ಮುಂದೆ ಬಾರದಿರುವುದು. 'ನಾನು 32 ವರ್ಷದಿಂದ ವಾದ್ಯ ತಯಾರಿಸುವ ಕೆಲಸ ಮಾಡುತ್ತಿದ್ದೇನೆ.. ನನಗಿಂತ ಮೊದಲು ನಮ್ಮ ತಂದೆ ಸಂಗೀತ ವಾದ್ಯಗಳನ್ನು ತಯಾರಿಸುತ್ತಿದ್ದರು. ನಾನು ಕಾಶ್ಮೀರಿ ರಬಾಬ್, ಸಾರಂಗಿ, ಸಂತೂರ್, ಸಿತಾರ್, ಸಾಜ್-ಎ-ಕಾಶ್ಮೀರ್ ಮತ್ತು ಸಿಖ್ ರಬಾಬ್... ಹೀಗೆ ಹಲವು ವಾದ್ಯಗಳನ್ನು ಮಾಡುತ್ತೇನೆ. ಇದೇ ನನ್ನ ಬದುಕು. ಈಗಿನ ಯುವಕರು ಈ ಕಲೆ ಕಲಿಯಲು ಬರುತ್ತಿಲ್ಲ. ಆದರೆ ಎಲ್ಲರೂ ಕಲೆಯ ಜೊತೆ ಇರಬೇಕು. ಕಲೆ ಜೀವನದಲ್ಲಿ ನಮಗೆ ಬಹಳಷ್ಟು ಕೊಡುತ್ತದೆ' ಎಂದು ಅವರು ANI ಜೊತೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಸರ್ಕಾರಿ ಕೆಲಸವನ್ನೇ ನಂಬಿ ಕೂಡಬೇಡಿ
ಸರ್ಕಾರಿ ಕೆಲಸವನ್ನೇ ನಂಬಿ ಕೂರಬೇಡಿ, ಸಾಂಪ್ರದಾಯಿಕ ಕಲೆಗಳಲ್ಲೂ ಉತ್ತಮ ಆದಾಯ ಗಳಿಸಬಹುದು ಎಂದು ಮುಷ್ತಾಕ್ ಯುವಕರಿಗೆ ಕಿವಿಮಾತು ಹೇಳುತ್ತಾರೆ. ಕಷ್ಟಪಟ್ಟು ಕೆಲಸ ಮಾಡಿದರೆ ಈ ಕರಕುಶಲ ಕಲೆಯಲ್ಲೇ ಲಕ್ಷಗಟ್ಟಲೆ ಸಂಪಾದಿಸಬಹುದು ಎಂಬುದು ಅವರ ನಂಬಿಕೆ. ನುರಿತ ಕುಶಲಕರ್ಮಿಗಳು ತಮ್ಮ ಸಾಂಪ್ರದಾಯಿಕ ಕಲೆಗಳ ಮೂಲಕ ಯಶಸ್ವಿ ವೃತ್ತಿಜೀವನ ರೂಪಿಸಿಕೊಳ್ಳಬಹುದು ಎನ್ನುತ್ತಾರೆ. ಇದೇ ವೇಳೆ, ಸರ್ಕಾರವು ಕುಶಲಕರ್ಮಿಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು ಮತ್ತು ಸಾಂಪ್ರದಾಯಿಕ ಕಲಾವಿದರಿಗೆ ಬೆಂಬಲ ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ನನ್ನ ತಂದೆಗೆ ರಾಜ್ಯ ಪ್ರಶಸ್ತಿ ಸಿಕ್ಕಿತು
ಕಳೆದ ವರ್ಷ, ಸಂತೂರ್ ವಾದ್ಯದ ಮೇಲಿನ ಕೆಲಸಕ್ಕಾಗಿ ನನ್ನ ತಂದೆಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಸರ್ಕಾರಕ್ಕೆ ನನ್ನ ಸಂದೇಶ ಇಷ್ಟೇ, ಕಲಾವಿದರನ್ನು ಗುರುತಿಸಬೇಕು ಮತ್ತು ಪ್ರಶಂಸಿಸಬೇಕು. ಅವರ ಕಲೆ ಮತ್ತು ಕರಕುಶಲತೆಗೆ ಹೆಚ್ಚಿನ ಗಮನ ನೀಡಬೇಕು. ವಿಶೇಷವಾಗಿ ಕುಶಲಕರ್ಮಿಗಳಿಗಾಗಿಯೇ ಯೋಜನೆಗಳು ಇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದು ಬಂದಿರುವ ಈ ಕರಕುಶಲತೆಯ ಮೂಲಕ ಕಾಶ್ಮೀರದ ಸಾಂಪ್ರದಾಯಿಕ ಸಂಗೀತ ಪರಂಪರೆಯನ್ನು ಉಳಿಸಲು ನಡೆಯುತ್ತಿರುವ ನಿರಂತರ ಪ್ರಯತ್ನಕ್ಕೆ ಮುಷ್ತಾಕ್ ಅವರ ಕೆಲಸ ಒಂದು ಉತ್ತಮ ಉದಾಹರಣೆಯಾಗಿದೆ. (ANI)


