2026-27ರ ಮೊದಲ ತ್ರೈಮಾಸಿಕದ ಶೇ.7.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸರ್ಕಾರ ಘೋಷಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರದ ಆಧಾರ ವರ್ಷವನ್ನು ಬದಲಿಸಿದ್ದೇ ಈ ವಿವಾದಕ್ಕೆ ಕಾರಣವಾಗಿದ್ದು, ಇದು ತಪ್ಪು ಲೆಕ್ಕಾಚಾರ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಆರೋಪಿಸಿವೆ.

ನವದೆಹಲಿ (ಸೆ.4): 2026-27ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಶೇ.7.8ರಷ್ಟು ದಾಖಲಾಗಿದೆ ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌, ಸರ್ಕಾರವು ಜಿಡಿಪಿ ಪ್ರಗತಿ ದರವನ್ನು ಅಂದಾಜಿಸಿದ ಮಾನದಂಡವೇ ಸರಿಯಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಕೂಡಾ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ವಾದ ಬೌದ್ಧಿಕ ನಕ್ಸಲಿಸಂಗೆ ಉದಾಹರಣೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಕೇಂದ್ರ ಸರ್ಕಾರವು ಜಿಡಿಪಿ ಲೆಕ್ಕಾಚಾರದ ಆಧಾರ ವರ್ಷವನ್ನು 2011-12ರಿಂದ 2022-23ಕ್ಕೆ ಪರಿಷ್ಕರಿಸಿದೆ. ಇದು ವಿವಾದಕ್ಕೆ ಮೂಲ ಕಾರಣ. ನೂತನ ಸರಣಿಯ ಅಡಿಯಲ್ಲಿ 2026-27ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಶೇ.7.8ರಷ್ಟಿದೆ ಎಂದು ಸರ್ಕಾರ ಘೋಷಿಸಿದೆ. ಆದರೆ ಹಳೆ ಸರಣಿಯ ಪ್ರಕಾರ ಕಳೆದ ವರ್ಷದ ಜೂನ್‌ ತ್ರೈಮಾಸಿಕದ ಜಿಡಿಪಿ ಮೌಲ್ಯ 86.05 ಲಕ್ಷ ಕೋಟಿ ರು. ಆಗಿದ್ದರೆ, ಹೊಸ ಸರಣಿಯಲ್ಲಿ ಅದನ್ನು 80 ಲಕ್ಷ ಕೋಟಿ ರು.ಗೆ ತಗ್ಗಿಸಲಾಗಿದೆ. ಹೋಲಿಕೆ ಮಾಡುವ ಹಿಂದಿನ ವರ್ಷದ ಆಧಾರ ಸಂಖ್ಯೆ ಕಡಿಮೆಯಾದಷ್ಟೂ, ಪ್ರಸ್ತುತ ಸಾಲಿನ ಶೇಕಡಾವಾರು ಬೆಳವಣಿಗೆಯ ದರವು ತಾನಾಗಿಯೇ ಹೆಚ್ಚಾಗಿ ಕಾಣಿಸುತ್ತದೆ ಎಂಬುದು ವಿಪಕ್ಷಗಳ ಆಕ್ಷೇಪ.

ಗರ್ಗ್ ಆರೋಪವೇನು?

ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಸರ್ಕಾರದ ಈ ಪರಿಷ್ಕರಣೆಯನ್ನು ಪ್ರಶ್ನಿಸಿದ್ದಾರೆ. ‘ಹೊಸ ಸರಣಿಯ ಪ್ರಸಕ್ತ ಜಿಡಿಪಿಯನ್ನು ಹಳೆಯ ಸರಣಿಯ ಹಿಂದಿನ ವರ್ಷದ ಜಿಡಿಪಿ ಜತೆ ಹೋಲಿಸಿದರೆ ನೈಜ ನಾಮಿನಲ್ ಬೆಳವಣಿಗೆ ಕೇವಲ ಶೇ.2.6ರಷ್ಟು ಮಾತ್ರ ಇರಲಿದೆ. ನಿಜವಾದ ಆರ್ಥಿಕ ಬೆಳವಣಿಗೆ ಶೂನ್ಯಕ್ಕೆ ಹತ್ತಿರದಲ್ಲಿದ್ದು, ಶೇ.7.8ರಷ್ಟು ಪ್ರಗತಿಯು ತಪ್ಪಾದ ಲೆಕ್ಕಾಚಾರ’ ಎಂದು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು, ‘ಮೋದಿ ಸರ್ಕಾರವು ಜಿಡಿಪಿ ಸಂಖ್ಯೆಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ. ಸರ್ಕಾರ ಕಳೆದ 4 ವರ್ಷಗಳ ಜಿಡಿಪಿ ಪರಿಷ್ಕರಣೆ ಬಳಿಕ ಆರ್ಥಿಕತೆಯಿಂದ ಅಂದಾಜು 43 ಲಕ್ಷ ಕೋಟಿ ರು ಮಾಯವಾಗಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪ ಮಾಡಿದ್ದಾರೆ.

ಸರ್ಕಾರ ಸಮರ್ಥನೆ

ವಿಪಕ್ಷಗಳ ಈ ಆರೋಪವನ್ನು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿ ಸೌರಭ್‌ ಗರ್ಗ್‌ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ‘ವಿಪಕ್ಷಗಳು ಮತ್ತು ಮಾಜಿ ಕಾರ್ಯದರ್ಶಿ ಸೇಬು ಮತ್ತು ಕಿತ್ತಳೆ ಹಣ್ಣುಗಳನ್ನು ಹೋಲಿಸುತ್ತಿದ್ದಾರೆ. 2011-12ರ ಹಳೆಯ ಸರಣಿಯ ಸಂಖ್ಯೆಯನ್ನು 2022-23ರ ಹೊಸ ಸರಣಿಯ ಸಂಖ್ಯೆಯೊಂದಿಗೆ ನೇರವಾಗಿ ಹೋಲಿಸುವುದು ತಪ್ಪು. ಹೊಸ ಸರಣಿಯಲ್ಲಿ ಕಳೆದ ವರ್ಷದ ಜಿಡಿಪಿ 80 ಲಕ್ಷ ಕೋಟಿ ರು. ಎಂದು ಪರಿಷ್ಕರಣೆಗೊಂಡಿರುವುದರಿಂದ, ಬೆಳವಣಿಗೆಯನ್ನು ಅದೇ ಸರಣಿಯ ಆಧಾರದಲ್ಲೇ ಲೆಕ್ಕಹಾಕಬೇಕು’ ಎಂದು ತಿರುಗೇಟು ನೀಡಿದ್ದಾರೆ.

15ನೇ ಹಣಕಾಸು ಆಯೋಗದ ಅದ್ಯಕ್ಷ ಎನ್‌.ಕೆ. ಸಿಂಗ್‌ ಕೂಡಾ ಸರ್ಕಾರದ ವಾದವನ್ನು ಸಮರ್ಥಿಸಿದ್ದಾರೆ. ‘ಕಾಲಕಾಲಕ್ಕೆ ಜಿಡಿಪಿ ಆಧಾರ ವರ್ಷವನ್ನು ಬದಲಾಯಿಸುವುದು ಅಂತಾರಾಷ್ಟ್ರೀಯ ನಿಯಮ. ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಭಾರತದ ರೇಟಿಂಗ್ ಅನ್ನು ‘BBB+’ನಿಂದ ‘A-’ ಗ್ರೇಡ್‌ಗೆ ಏರಿಸಿರುವುದು ದೇಶದ ಆರ್ಥಿಕ ಸುಧಾರಣೆಗಳಿಗೆ ಸಿಕ್ಕ ಗೌರವ’ ಎಂದು ಅಭಿಪ್ರಾಯಪಟ್ಟಿದ್ದಾರೆ.