ಭಾರತದ 7.8% ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ನ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕೇವಲ ಒಂದು ತ್ರೈಮಾಸಿಕದ ಬೆಳವಣಿಗೆಯನ್ನು 'ಆರ್ಥಿಕ ವಸಂತ' ಎನ್ನಲಾಗದು
2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 7.8% ರಷ್ಟು ಬೆಳವಣಿಗೆ ಕಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ. ಈ ಆರ್ಥಿಕ ಬೆಳವಣಿಗೆಯಿಂದ ಏನು ಲಾಭ? ದೇಶದ ಯುವಕರಿಗೆ ಉದ್ಯೋಗ ಕೊಟ್ಟಿದೆಯೇ? ಅವಕಾಶ ಸೃಷ್ಟಿಸಿದೆಯೇ? ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಜಿಡಿಪಿ ಬೆಳವಣಿ ಬಗ್ಗೆ ಪವನ್ ಖೇರಾ ಹೇಳಿದ್ದೇನು?
ಪ್ರಧಾನಿ ಮೋದಿಯವರ ಎಕ್ಸ್ (X) ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪವನ್ ಖೇರಾ, ಒಂದು ತ್ರೈಮಾಸಿಕದಲ್ಲಿ 7.8% ಬೆಳವಣಿಗೆಯನ್ನು ಆರ್ಥಿಕ ಪ್ರಗತಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತ ನಿಜವಾಗಿಯೂ ಪ್ರಗತಿಯಾಗಿದ್ದರೆ, ದೇಶದಲ್ಲಿ ನಿರುದ್ಯೋಗ ಏಕೆ ತಾಂಡವವಾಡುತ್ತಿತ್ತು, ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆ ಏಕೆ ದೇಶದ ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುತ್ತಿವೆ? ದೇಶದ ಆರ್ಥಿಕ ಬೆಳವಣಿಗೆಯು ಸಾರ್ವಜನಿಕರ ಏಳಿಗೆಗೆ ಏಕೆ ಕಾರಣವಾಗುತ್ತಿಲ್ಲ? ಜಿಡಿಪಿ ರಾಷ್ಟ್ರೀಯ ಉತ್ಪನ್ನವನ್ನು ಅಳೆಯುತ್ತದೆ ಹೊರತು ಉದ್ಯೋಗ, ಸಂಬಳ ಅಥವಾ ಅವಕಾಶವ ಸೃಷ್ಟಿಯನ್ನಲ್ಲ.. ಒಂದು ವೇಳೆ ಅದು ಇವುಗಳನ್ನು ಅಳೆಯುತ್ತಿದ್ದರೆ, ಭಾರತದ ಯುವಕರ ಭವಿಷ್ಯ ಇಷ್ಟು ಕರಾಳವಾಗಿ ಕಾಣುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಮೋದಿ ತಮ್ಮ ಹೆಡ್‌ಲೈನ್‌ಗಳನ್ನು ಬದಲಾಯಿಸಬಹುದು. ಆದರೆ ಭಾರತದ ಯುವಕರ ಪಾಲಿಗೆ, ಎಂದಿನಂತೆ ಅದೇ ಪ್ರಶ್ನೆ ಉಳಿದಿದೆ; ಉದ್ಯೋಗ ಎಲ್ಲಿದೆ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜಿಡಿಪಿ ಬೆಳವಣಿಗೆ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು?
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ 7.8% ಜಿಡಿಪಿ ಬೆಳವಣಿಗೆಯನ್ನು ದೊಡ್ಡ ಸಾಹಸ ಎಂದು ಬಣ್ಣಿಸಿದ್ದರು. ತೈಲ ಬೆಲೆ ಏರಿಕೆ, ಪೂರೈಕೆ ಸರಪಳಿಯಲ್ಲಿನ ಸಮಸ್ಯೆಗಳು ಮತ್ತು ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಈ ಬೆಳವಣಿಗೆಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದರು.
ಇತ್ತೀಚಿನ ಜಿಡಿಪಿ ಅಂಕಿಅಂಶಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ಜನರ ಸಾಮೂಹಿಕ ಶಕ್ತಿಯು ಭಾರತಕ್ಕೆ ಬಲವಾದ ಆರ್ಥಿಕ ಬೆಳವಣಿಗೆ ಸಾಧಿಸಿದೆ. 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ 7.8% ಜಿಡಿಪಿ ಬೆಳವಣಿಗೆ ಒಂದು ದೊಡ್ಡ ಸಾಹಸ ಎಂದು ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದರು.
ಜಾಗತಿಕ ಅನಿಶ್ಚಿತತೆಗಳ ಮಧ್ಯೆ, ತೈಲ ಬೆಲೆ ಏರಿಕೆ ಮತ್ತು ಪೂರೈಕೆ ಸರಪಳಿ ಸಮಸ್ಯೆಗಳ ಹೊರತಾಗಿಯೂ ನಮ್ಮ ಜನರ ಸಾಮೂಹಿಕ ಶಕ್ತಿಯು ಭಾರತವು ಇಂತಹ ಬೆಳವಣಿಗೆಯನ್ನು ಸಾಧಿಸುವಂತೆ ಮಾಡಿದೆ ಎಂದು ಪ್ರಧಾನಿ ಹೇಳಿದ್ದರು.


