13 ವರ್ಷಗಳ ಐಟಿ ವೃತ್ತಿ ತೊರೆದ ಹೈದರಾಬಾದ್‌ನ ಸಾಯಿ ಕಿರಣ್ ಭಾಗವತುಲ, ತಮ್ಮ ವನ್ಯಜೀವಿ ಪ್ರೀತಿಯನ್ನೇ 'ವೈಲ್ಡ್‌ಲೈಫ್ ವಿಸ್ಪರರ್ಸ್' ಎಂಬ ವಿಶಿಷ್ಟ ಉದ್ಯಮ ಕಟ್ಟಿದ್ದಾರೆ. ಈ ಸ್ಟಾರ್ಟ್‌ಅಪ್, ಪ್ರಾಣಿಗಳ ವರ್ತನೆಯಿಂದ ಕಾರ್ಪೊರೇಟ್ ಜಗತ್ತಿಗೆ ನಾಯಕತ್ವ , ತಂಡದ ಕೆಲಸದಂತಹ ಪಾಠಗಳನ್ನು ಕಲಿಸುತ್ತದೆ,

ಕೈತುಂಬಾ ಸಂಬಳ, ದೊಡ್ಡ ಕಂಪನಿಯ ಹುದ್ದೆ, ವಿದೇಶದಲ್ಲಿ ಉನ್ನತ ಶಿಕ್ಷಣ... ಇವೆಲ್ಲ ಸಿಕ್ಕರೂ ಕೆಲವರಿಗೆ ತಮ್ಮ ಮನಸ್ಸು ಬಯಸುವ ದಾರಿ ಮಾತ್ರ ಬೇರೆ ಇರುತ್ತದೆ. ಹೈದರಾಬಾದ್‌ನ ಸಾಯಿ ಕಿರಣ್ ಭಾಗವತುಲ ಅವರ ಕಥೆಯೂ ಅಂಥದ್ದೇ. ಬರೋಬ್ಬರಿ 13 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು, ಕೊನೆಗೆ ಆ ವೃತ್ತಿಜೀವನಕ್ಕೆ ವಿದಾಯ ಹೇಳಿ ತಮ್ಮ ಬಾಲ್ಯದ ಆಸಕ್ತಿಯಾಗಿದ್ದ ಪ್ರಕೃತಿ ಮತ್ತು ವನ್ಯಜೀವಿಗತ್ತ ಗಮನಹರಿಸಿದರು.

ಆ ನಿರ್ಧಾರ ಇಂದು ಅವರ ಬದುಕನ್ನೇ ಬದಲಿಸಿದೆ. ವನ್ಯಜೀವಿಗಳನ್ನು ಕೇವಲ ಕ್ಯಾಮೆರಾದಲ್ಲಿ ಸೆರೆಹಿಡಿಯುವುದಕ್ಕಷ್ಟೇ ಸೀಮಿತವಾಗದೆ, ಅವುಗಳಿಂದ ಕಾರ್ಪೊರೇಟ್ ಜಗತ್ತಿಗೆ ಪಾಠ ಕಲಿಸುವ ವಿಭಿನ್ನ ಉದ್ಯಮವೊಂದನ್ನು ಅರ್ಥಾಥ್ ಸ್ಟಾರ್ಟ್‌ಅಪ್ ಒಂದನ್ನು ಅವರು ಕಟ್ಟಿದ್ದಾರೆ. ‘ವೈಲ್ಡ್‌ಲೈಫ್ ವಿಸ್ಪರರ್ಸ್’ ಹೆಸರಿನ ಈ ಉದ್ಯಮ ಮೊದಲ ವರ್ಷದಲ್ಲೇ ಸುಮಾರು ₹80 ಲಕ್ಷ ಆದಾಯ ಗಳಿಸಿರುವುದು ವಿಶೇಷ.

ಎಂಜಿನಿಯರಿಂಗ್‌ನಿಂದ ಅಮೆರಿಕದವರೆಗೆ...

ಸಾಯಿ ಕಿರಣ್ ಭಾಗವತುಲ 2010ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಬಳಿಕ ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲಿ ಕೆಲಸ ಮಾಡಿದರು. ವೃತ್ತಿಜೀವನದಲ್ಲಿ ಮುಂದೆ ಸಾಗುತ್ತಿದ್ದ ಅವರು 2014ರಲ್ಲಿ ಅಮೆರಿಕಕ್ಕೆ ತೆರಳಿ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದರೂ, ಅವರ ಮನಸ್ಸಿನಲ್ಲಿ ಪ್ರಕೃತಿ ಮತ್ತು ವನ್ಯಜೀವಿಗಳ ಮೇಲಿನ ಆಸಕ್ತಿ ಮಾತ್ರ ಹಾಗೆಯೇ ಉಳಿದಿತ್ತು. ಬಿಡುವಿನ ದಿನಗಳಲ್ಲಿ DSLR ಕ್ಯಾಮೆರಾ ಹಿಡಿದು ಪ್ರಕೃತಿಯ ನಡುವೆ ಸುತ್ತಾಡುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.

ಕ್ಯಾಮೆರಾದಿಂದ ಕಾಡಿನ ಕಥೆಗಳವರೆಗೆ

ಮೊದಲಿಗೆ ಛಾಯಾಗ್ರಹಣವೆಂದರೆ ಕಾಡಿನಲ್ಲಿ ಕಂಡ ಪ್ರಾಣಿಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವ ಒಂದು ಹವ್ಯಾಸವಾಗಿತ್ತು. ಆದರೆ ವರ್ಷಗಳು ಕಳೆದಂತೆ ಸಾಯಿ ಕಿರಣ್‌ ಅವರ ದೃಷ್ಟಿಕೋನ ಬದಲಾಯಿತು. ಒಂದು ಪ್ರಾಣಿಯ ಸುಂದರ ಫೋಟೋ ತೆಗೆದರೆ ಮಾತ್ರ ಸಾಕಾಗುವುದಿಲ್ಲ. ಅದರ ಹಿಂದೆ ಇರುವ ಬದುಕು, ಹೋರಾಟ, ಪರಿಸರ ವ್ಯವಸ್ಥೆ ಮತ್ತು ಇತರ ಜೀವಿಗಳೊಂದಿಗಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅರಿವು ಮೂಡಿತು.

ಭಾರತ ಮಾತ್ರವಲ್ಲದೆ ಅಮೆರಿಕ ಮತ್ತು ಆಫ್ರಿಕಾದ ವಿವಿಧ ರಾಷ್ಟ್ರೀಯ ಉದ್ಯಾನವನಗಳಿಗೆ ಅವರು ಭೇಟಿ ನೀಡಿದರು. ಕಾಡಿನಲ್ಲಿ ಪ್ರಾಣಿಗಳ ವರ್ತನೆಯನ್ನು ಗಮನಿಸುತ್ತಾ ಹೋದಂತೆ, ಪ್ರಕೃತಿಯಲ್ಲಿ ನಡೆಯುವ ಹಲವು ಸಂಗತಿಗಳು ಮನುಷ್ಯರ ಜೀವನಕ್ಕೂ, ಅದರಲ್ಲೂ ಕೆಲಸದ ಸ್ಥಳಗಳಿಗೂ ಅನ್ವಯಿಸಬಹುದು ಎಂಬುದನ್ನು ಅವರು ಕಂಡುಕೊಂಡರು. ಅಲ್ಲಿಂದಲೇ ಒಂದು ವಿಭಿನ್ನ ಆಲೋಚನೆ ಹುಟ್ಟಿಕೊಂಡಿತು.

13 ವರ್ಷಗಳ ಐಟಿ ವೃತ್ತಿಗೆ ವಿದಾಯ

ಭಾರತಕ್ಕೆ ಮರಳಿದ ಬಳಿಕ ಸಾಯಿ ಕಿರಣ್ ಹಿರಿಯ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅನುಭವ, ವೃತ್ತಿಜೀವನದಲ್ಲಿ ಸ್ಥಿರತೆ ಎಲ್ಲವೂ ಇದ್ದರೂ, ತಮ್ಮೊಳಗಿನ ಮತ್ತೊಂದು ಕನಸನ್ನು ನನಸು ಮಾಡಿಕೊಳ್ಳಲು ಅವರು ನಿರ್ಧರಿಸಿದರು. 2023ರಲ್ಲಿ ಬರೋಬ್ಬರಿ 13 ವರ್ಷಗಳ ಐಟಿ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಬಳಿಕ ತಮ್ಮ ವನ್ಯಜೀವಿ ಪ್ರೀತಿಯನ್ನೇ ಉದ್ಯಮವಾಗಿ ಪರಿವರ್ತಿಸಿ ‘ವೈಲ್ಡ್‌ಲೈಫ್ ವಿಸ್ಪರರ್ಸ್’ ಆರಂಭಿಸಿದರು.

ಇದು ಸಾಮಾನ್ಯ ವನ್ಯಜೀವಿ ಪ್ರವಾಸೋದ್ಯಮ ಸಂಸ್ಥೆಯಲ್ಲ. ಪ್ರಕೃತಿಯಲ್ಲಿನ ಪ್ರಾಣಿಗಳ ವರ್ತನೆಯಿಂದ ಕಾರ್ಪೊರೇಟ್ ಜಗತ್ತಿಗೆ ನಾಯಕತ್ವ, ತಂಡದ ಕೆಲಸ, ಸಹಕಾರ, ಮಾನಸಿಕ ಸ್ಥಿರತೆ ಮತ್ತು ಸಮಸ್ಯೆ ಎದುರಿಸುವ ಸಾಮರ್ಥ್ಯದಂತಹ ಪಾಠಗಳನ್ನು ಕಲಿಸುವ ಪ್ರಯತ್ನ ಇದಾಗಿದೆ.

ಸಿಂಹ, ಇರುವೆ, ಜೇನುನೊಣ... ಎಲ್ಲವೂ ಶಿಕ್ಷಕರೇ!

ಸಾಯಿ ಕಿರಣ್ ಅವರ ಪರಿಕಲ್ಪನೆ ನಿಜಕ್ಕೂ ಕುತೂಹಲ ಮೂಡಿಸುವಂತಿದೆ. ಕಾಡಿನಲ್ಲಿರುವ ಪ್ರತಿಯೊಂದು ಜೀವಿಯ ವರ್ತನೆಯಲ್ಲೂ ಒಂದಲ್ಲ ಒಂದು ಪಾಠವಿದೆ ಎಂಬುದು ಅವರ ನಂಬಿಕೆ. ಉದಾಹರಣೆಗೆ, ಸಿಂಹಗಳ ಗುಂಪಿನಲ್ಲಿ ಕಂಡುಬರುವ ಸಹಕಾರ ಮತ್ತು ತಂಡದ ಚಟುವಟಿಕೆಯನ್ನು ಟೀಮ್‌ವರ್ಕ್‌ಗೆ ಹೋಲಿಸಲಾಗುತ್ತದೆ. ಇರುವೆಗಳ ಸಂಘಟಿತ ಕೆಲಸದಿಂದ ಜವಾಬ್ದಾರಿ ಹಂಚಿಕೆ ಮತ್ತು ನಿಯೋಗದ ಬಗ್ಗೆ ಪಾಠ ಕಲಿಸಲಾಗುತ್ತದೆ. ಇನ್ನು ಜೇನುನೊಣಗಳು ಅಪಾಯ ಎದುರಾದಾಗ ಒಟ್ಟಾಗಿ ಪ್ರತಿಕ್ರಿಯಿಸುವ ರೀತಿ, ತಂಡವೊಂದು ಸಂಕಷ್ಟದ ಸಂದರ್ಭದಲ್ಲಿ ಹೇಗೆ ಒಂದಾಗಿ ನಿಲ್ಲಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಹೀಗೆ ಕಾಡಿನಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳನ್ನು ಕಾರ್ಪೊರೇಟ್ ಜಗತ್ತಿನ ಸಮಸ್ಯೆಗಳೊಂದಿಗೆ ಜೋಡಿಸಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ಕಾಡಿನ ಅನುಭವವೇ ಕಾರ್ಪೊರೇಟ್ ತರಬೇತಿ

ವೈಲ್ಡ್‌ಲೈಫ್ ವಿಸ್ಪರರ್ಸ್‌ನ ಕಾರ್ಯಕ್ರಮಗಳು ಕೇವಲ ನಾಲ್ಕು ಗೋಡೆಗಳೊಳಗಿನ ಸಾಂಪ್ರದಾಯಿಕ ತರಬೇತಿಗೆ ಸೀಮಿತವಾಗಿಲ್ಲ. ಕಾರ್ಪೊರೇಟ್ ಕಾರ್ಯಾಗಾರಗಳ ಜೊತೆಗೆ ಹಲವು ದಿನಗಳ ಅರಣ್ಯ ಅನುಭವಗಳನ್ನೂ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಪ್ರಕೃತಿಯನ್ನು ಹತ್ತಿರದಿಂದ ಗಮನಿಸುತ್ತಾರೆ. ಪ್ರಾಣಿಗಳ ವರ್ತನೆ ಮತ್ತು ಪರಿಸರ ವ್ಯವಸ್ಥೆಯಲ್ಲಿನ ಅವುಗಳ ಪಾತ್ರವನ್ನು ಅರ್ಥಮಾಡಿಕೊಳ್ಳುತ್ತಾರೆ. ನಂತರ ಅದರಿಂದ ದೊರೆಯುವ ಪಾಠಗಳನ್ನು ತಮ್ಮ ಕೆಲಸದ ವಾತಾವರಣಕ್ಕೆ ಹೇಗೆ ಅನ್ವಯಿಸಬಹುದು ಎಂಬುದನ್ನು ಚರ್ಚಿಸುತ್ತಾರೆ. ನಾಯಕತ್ವ, ತಂಡದ ಕೆಲಸ, ಸಹಕಾರ ಮತ್ತು ತಾಳ್ಮೆಯಂತಹ ವಿಷಯಗಳನ್ನು ಪ್ರಕೃತಿಯ ಉದಾಹರಣೆಗಳ ಮೂಲಕ ಸರಳವಾಗಿ ಅರ್ಥಮಾಡಿಕೊಡುವುದು ಇದರ ಉದ್ದೇಶ.

ಮೊದಲ ವರ್ಷವೇ ₹80 ಲಕ್ಷ ಆದಾಯ!

ವಿಭಿನ್ನವಾಗಿರುವ ಈ ಆಲೋಚನೆಗೆ ಕಾರ್ಪೊರೇಟ್ ವಲಯದಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 30 ಸ್ಟೇಡ್ಸ್ ವರದಿ ಪ್ರಕಾರ, ವೈಲ್ಡ್‌ಲೈಫ್ ವಿಸ್ಪರರ್ಸ್ ತನ್ನ ಮೊದಲ ವರ್ಷದಲ್ಲೇ ಸುಮಾರು ₹80 ಲಕ್ಷ ಆದಾಯ ಗಳಿಸಿದೆ. ಪರ್ಫೆಟ್ಟಿ ವ್ಯಾನ್ ಮೆಲ್ಲೆ ಮತ್ತು ಸೀಮೆನ್ಸ್ ಡಿಜಿಟಲ್‌ನಂತಹ ಸಂಸ್ಥೆಗಳೊಂದಿಗೆ ಉದ್ಯಮ ಕೆಲಸ ಮಾಡಿದೆ. ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿರುವ ಮತ್ತಷ್ಟು ಕಂಪನಿಗಳೊಂದಿಗೂ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಒಂದು ಕಡೆ ವರ್ಷಗಳ ಕಾಲ ಗಳಿಸಿದ ತಂತ್ರಜ್ಞಾನ ಕ್ಷೇತ್ರದ ಅನುಭವ, ಮತ್ತೊಂದು ಕಡೆ ವನ್ಯಜೀವಿಗಳ ಮೇಲಿನ ಆಳವಾದ ಆಸಕ್ತಿ. ಈ ಎರಡನ್ನೂ ಒಟ್ಟಿಗೆ ಸೇರಿಸುವ ಮೂಲಕ ಸಾಯಿ ಕಿರಣ್ ತಮ್ಮದೇ ಆದ ಹೊಸ ವೃತ್ತಿ ದಾರಿಯನ್ನು ಸೃಷ್ಟಿಸಿಕೊಂಡಿದ್ದಾರೆ.

‘ಪ್ರಕೃತಿಯೇ ಶ್ರೇಷ್ಠ ಶಿಕ್ಷಕ’

ತಮ್ಮ ಉದ್ಯಮದ ಹಿಂದಿನ ತತ್ವವನ್ನು ಸಾಯಿ ಕಿರಣ್ ಸರಳವಾಗಿ ವಿವರಿಸುತ್ತಾರೆ 'ಪ್ರಕೃತಿಯೇ ಶ್ರೇಷ್ಠ ಶಿಕ್ಷಕ' ಕಾಡನ್ನು ಕೇವಲ ಪ್ರವಾಸದ ತಾಣವಾಗಿ ನೋಡುವ ಬದಲು, ಅದನ್ನು ಒಂದು ದೊಡ್ಡ ಪಾಠಶಾಲೆಯಂತೆ ನೋಡಿದರೆ ಜೀವನ ಮತ್ತು ಕೆಲಸದ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲಿಯಬಹುದು ಎಂಬುದು ಅವರ ನಂಬಿಕೆ. ಒಂದು ಕಾಲದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಉತ್ಪನ್ನಗಳನ್ನು ನಿರ್ವಹಿಸುತ್ತಿದ್ದ ಟೆಕ್ಕಿ, ಇಂದು ಕಾಡಿನ ನಡುವೆ ನಿಂತು ಸಿಂಹ, ಇರುವೆ, ಜೇನುನೊಣ ಸೇರಿದಂತೆ ಅನೇಕ ಜೀವಿಗಳಿಂದ ಮನುಷ್ಯರು ಕಲಿಯಬಹುದಾದ ಪಾಠಗಳನ್ನು ಹೇಳುತ್ತಿದ್ದಾರೆ.

ಸಾಯಿ ಕಿರಣ್ ಅವರ ಕಥೆ ಒಂದು ವಿಷಯವನ್ನು ನೆನಪಿಸುತ್ತದೆ. ವೃತ್ತಿಯಲ್ಲಿ ಯಶಸ್ಸು ಎಂದರೆ ಒಂದೇ ದಾರಿಯಲ್ಲಿ ಮುಂದುವರಿಯುವುದಲ್ಲ. ನಮ್ಮೊಳಗಿನ ನಿಜವಾದ ಆಸಕ್ತಿಯನ್ನು ಗುರುತಿಸಿ, ಅದನ್ನು ಅವಕಾಶವಾಗಿ ಬದಲಿಸಿಕೊಳ್ಳುವುದೂ ಯಶಸ್ಸಿನ ಮತ್ತೊಂದು ರೂಪ.