2027ರ ಗೋವಾ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು, ಆಮ್ ಆದ್ಮಿ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ 'ಗೋವಾ ಫಸ್ಟ್' ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪರ್ಯಾಯವಾಗಿ ಹೊರಹೊಮ್ಮಿರುವ ಈ ಮೈತ್ರಿ, ಮುಂದಿನ ಸರ್ಕಾರವನ್ನು ತಾವೇ ರಚಿಸುವುದಾಗಿ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಣಜಿ: ಮುಂದಿನ ವರ್ಷದ ಅಂದರೆ 2027ರ ವಿಧಾನಸಭಾ ಚುನಾವಣೆಗೆ ಎದುರುನೋಡುತ್ತಿರುವ ಗೋವಾದಲ್ಲಿ, ಆಮ್‌ ಆದ್ಮಿ ಪಕ್ಷ ಹಾಗೂ ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮೈತ್ರಿ ಘೋಷಿಸಿವೆ. ಇದಕ್ಕೆ ‘ಗೋವಾ ಫಸ್ಟ್‌’ ಎಂದು ಹೆಸರಿಟ್ಟಿವೆ. ಬಿಜೆಪಿಯೇತರ ಹಾಗೂ ಕಾಂಗ್ರೆಸ್ಸೇತರ ಮತದಾರರಿಗೆ ಇದು ಪರ್ಯಾಯ ವ್ಯವಸ್ಥೆ ಎಂದು ಮೈತ್ರಿ ನಾಯಕರು ಘೋಷಿಸಿದ್ದಾರೆ. ಮುಂದಿನ ಸಲ ತಾವೇ ಸರ್ಕಾರ ರಚಿಸುತ್ತೇವೆ ಎಂದು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 40 ಸ್ಥಾನಬಲದ ಗೋವಾ ವಿಧಾನಸಭೆಯಲ್ಲಿ, ಪ್ರಸ್ತುತ ಬಿಜೆಪಿ ಸರ್ಕಾರವಿದೆ. ಆಪ್‌ 2 ಹಾಗೂ ಜಿಎಫ್‌ಪಿ 1 ಶಾಸಕರನ್ನು ಹೊಂದಿವೆ.

ಪಣಜಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಜಿಎಫ್‌ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರು ಈ ಘೋಷಣೆ ಮಾಡಿದರು. ದೆಹಲಿಯ ವಿರೋಧ ಪಕ್ಷದ ನಾಯಕಿ ಅತಿಶಿ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಮುಖ ಹೆಜ್ಜೆಗಳು ಮತ್ತು ನಾಯಕರ ಹೇಳಿಕೆಗಳು:

ಗೋವಾದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ. ನಮ್ಮ 'ಗೋವಾ ಫಸ್ಟ್' ಮೈತ್ರಿಕೂಟವು ಸ್ವಂತ ಬಲದಿಂದ ಗೆದ್ದು ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಮೈತ್ರಿಕೂಟದಲ್ಲಿ ಎರಡೂ ಪಕ್ಷಗಳು ಸಮಾನ ಪಾಲುದಾರರಾಗಿದ್ದು, ಗೋವಾದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸಮಾನ ಮನಸ್ಕ ಇತರ ರಾಜಕೀಯ ಶಕ್ತಿಗಳಿಗೂ ಮೈತ್ರಿಯ ಬಾಗಿಲು ತೆರೆದಿದೆ ಎಂದು ವಿಜಯ್ ಸರ್ದೇಸಾಯಿ ತಿಳಿಸಿದರು.

40 ಸ್ಥಾನಗಳ ಗೋವಾ ವಿಧಾನಸಭೆಯಲ್ಲಿ ಪ್ರಸ್ತುತ ಆಪ್ ಇಬ್ಬರು ಹಾಗೂ ಜಿಎಫ್‌ಪಿ ಒಬ್ಬ ಶಾಸಕರನ್ನು ಹೊಂದಿವೆ. 2022ರ ಚುನಾವಣೆಯಲ್ಲಿ ಜಿಎಫ್‌ಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು .

ಪಕ್ಷಾಂತರ ಮತ್ತು ಆಂತರಿಕ ಸವಾಲುಗಳ ಕುರಿತು ಕೇಜ್ರಿವಾಲ್ ಸ್ಪಷ್ಟನೆ

ಇತ್ತೀಚೆಗೆ ತಮ್ಮ ಏಳು ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಕೇಜ್ರಿವಾಲ್, ಅವರು ಪಕ್ಷ ಮತ್ತು ಜನರಿಗೆ ದ್ರೋಹ ಬಗೆದಿದ್ದಾರೆ. ಈ ಘಟನೆಯಿಂದ ನಾವು ದೊಡ್ಡ ಪಾಠ ಕಲಿತಿದ್ದೇವೆ. ಭವಿಷ್ಯದಲ್ಲಿ ಮೇಲ್ಮನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅತ್ಯಂತ ಜಾಗರೂಕರಾಗಿರುತ್ತೇವೆ ಎಂದರು.

ದೆಹಲಿ, ಗೋವಾ, ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ನಮ್ಮ ಶಾಸಕರನ್ನು ಸೆಳೆಯಲು ಹಲವು ಪ್ರಯತ್ನಗಳು ನಡೆದರೂ, ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ. ಗೋವಾದಲ್ಲಿದ್ದ ನಮ್ಮ ಇಬ್ಬರೂ ಶಾಸಕರು ಯಾವುದೇ ಆಮಿಷಕ್ಕೆ ಒಳಗಾಗದೆ ಪಕ್ಷದಲ್ಲೇ ಉಳಿದಿದ್ದಾರೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಅಭಿವೃದ್ಧಿ ಹಾಗೂ ಪ್ರಾಮಾಣಿಕ ಆಡಳಿತದ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿರುವ ಈ ‘ಗೋವಾ ಫಸ್ಟ್’ ಮೈತ್ರಿಕೂಟವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.