ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ಮೀನು ರಫ್ತಿಗೆ ಅವಕಾಶ ನೀಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಬಾಂಗ್ಲಾದೇಶ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 'ಮೀನುಗಳ ರಾಣಿ' ಎಂದೇ ಖ್ಯಾತವಾದ ಈ ಮೀನಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾರಿ ಬೇಡಿಕೆಯಿದೆ.

ಮೀನುಗಳ ರಾಣಿ ಎಂದೇ ಕರೆಯಲ್ಪಡುವ ಹಿಲ್ಸಾ ಮೀನಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾದಲ್ಲಿ ಹಿಲ್ಸಾ ಮೀನಿಗೆ ಭಾರಿ ಡಿಮ್ಯಾಂಡು. ವಿಷಯ ಏನಪ್ಪ ಅಂದ್ರೆ ಮುಂದಿನ ದರ್ಗಾ ಪೂಜೆಗೂ ಮುನ್ನವೇ ಹಿಲ್ಸಾ ಮೀನು ರಫ್ತಿಗೆ ಅವಕಾಶ ಮಾಡಿಕೊಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಸಮಾಧಾನದ ವಿಚಾರ ಎಂದರೆ ಬಾಂಗ್ಲಾದೇಶ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಹೌದು, ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ರಫ್ತಿಗೆ ಅವಕಾಶ ನೀಡುವಂತೆ ಬಾಂಗ್ಲಾದೇಶವನ್ನು ಒತ್ತಾಯಿಸಲಾಗಿದೆ. ಕೋಲ್ಕತ್ತದ ಆಮದುದಾರರ ಸಂಘವು ಬಾಂಗ್ಲಾದೇಶದ ಸಚಿವರಿಗೆ ಮೀನು ಸಾಗಣೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದೆ. 1996 ರಿಂದ ಬಾಂಗ್ಲಾದೇಶದಿಂದ ಹಿಲ್ಸಾ ಮೀನು ಆಮದು ಮಾಡಿಕೊಳ್ಳಲಾಗುತ್ತಿದೆ. 2012ರಲ್ಲಿ ಬಾಂಗ್ಲಾದೇಶ ಈ ಮೀನನ್ನು ರಫ್ತು ಮಾಡೋದನ್ನು ನಿಷೇಧ ಮಾಡಿತ್ತು. ಮೊದಲು ಪಶ್ಚಿಮ ಬಂಗಾಳದ ಬೆನಪೋಲ್ ಭೂ ಕಸ್ಟಮ್ಸ್ ಠಾಣೆ ಮತ್ತು ತ್ರಿಪುರಾದ ಅಖೌರಾ ಭೂ ಕಸ್ಟಮ್ಸ್ ಠಾಣೆ ಮೂಲಕ ಹಿಲ್ಸಾವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

ರಫ್ತು ನಿಷೇಧದ ನಡುವೆಯೂ 2019ರಿಂದ ದುರ್ಗಾ ಪೂಜೆಯ ಸಮಯದಲ್ಲಿ ಹಿಲ್ಸಾ ಮೀನನ್ನು ಸೀಮಿತ ರಫ್ತಿಗೆ ಅನುಮತಿಯನ್ನ ಬಾಂಗ್ಲಾ ನೀಡಿದೆ. ಆದರೆ ಈ ವ್ಯವಹಾರ ಒಂದು ತಿಂಗಳ ಮಾತ್ರ ಇರೋದ್ರಿಂದ ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೀನು ಆಮದುದಾರರು ಎರಡು ಬಂಗಾಳಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಪಾಕಶಾಲೆಯ ಸಂಪರ್ಕಗಳನ್ನು ಹಾಗೂ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಹಿಲ್ಸಾದ ಜನಪ್ರಿಯತೆಯನ್ನು ಉಲ್ಲೇಖಿಸಿದ್ದಾರೆ.

ಕಳೆದ ವರ್ಷ ದುರ್ಗಾ ಪೂಜೆ ಸಂದರ್ಭದಲ್ಲಿ ಭಾರತಕ್ಕೆ 1200 ಟನ್‌ ಹಿಲ್ಸಾ ಮೀನು ಬಂದಿತ್ತು. ಈ ಬಾರಿ 2420 ಟನ್‌ ಹಿಲ್ಸಾ ಮೀನು ಬರುವ ಸಾಧ್ಯತೆ ಇದೆ. ಕೆಲವು ವರದಿಗಳ ಪ್ರಕಾರ ಬಾಂಗ್ಲಾದೇಶ ಸರ್ಕಾರವು ಇತ್ತೀಚಿನ ವಿನಂತಿಗೆ ಸಕಾರಾತ್ಮಕವಾಗಿ ಪರಿಗಣಿಸಿದೆ ಎನ್ನಲಾಗಿದೆ. ಇದು ಈ ವರ್ಷದ ದುರ್ಗಾ ಪೂಜೆಗೆ ಮುನ್ನ ಬಂಗಾಳ ಮೀನು ಮಾರುಕಟ್ಟೆಗಳಲ್ಲಿ ಹಿಲ್ಸಾ ಲಭ್ಯತೆಯ ಬಗ್ಗೆ ಆಸಕ್ತಿಯನ್ನು ಸೃಷ್ಟಿಸಿದೆ.

ಪೂರ್ವ ಭಾರತದಲ್ಲಿ ಈ ಮೀನು ಅತ್ಯಂತ ಪ್ರಿಯವಾದ ಖಾದ್ಯ. ಅದ್ಭುತ ರುಚಿ ಮತ್ತು ಆರೋಗ್ಯಕರ ಗುಣಗಳಿಂದಾಗಿ ಈ ಮೀನಿಗೆ ತುಂಬಾನೇ ಜನಪ್ರಿಯತೆ ಇದೆ. ಈ ಮೀನನ್ನು ಬೇಯಿಸುವಾಗ ಬರುವ ವಿಶಿಷ್ಟ ಸುವಾಸನೆ ಮೀನು ಪ್ರಿಯರನ್ನು ಆಕರ್ಷಿಸುತ್ತದೆ. ದುಬಾರಿ ಮೀನುಗಳಲ್ಲಿ ಇದು ಕೂಡ ಒಂದು. ಈ ಮೀನನ್ನು ಮೀನುಗಳ ರಾಣಿ ಎಂದು ಹೇಳುತ್ತಾರೆ. ಹಿಲ್ಸಾ ಮೀನುಗಳು ಸಾಮಾನ್ಯವಾಗಿ ಸಮುದ್ರದ ಉಪ್ಪು ನೀರಿನಲ್ಲಿ ವಾಸಿಸುತ್ತವೆ. ಆದರೆ ಸಂತಾನೋತ್ಪತ್ತಿಯ (ಮೊಟ್ಟೆಯಿಡಲು) ಸಮಯದಲ್ಲಿ ಇವು ನದಿಗಳ ಸಿಹಿ ನೀರಿಗೆ ವಲಸೆ ಬರುತ್ತವೆ.

ಭಾರತದಲ್ಲಿ ಹಿಲ್ಸಾ ಮೀನು

ಹಿಂದೂಗಳ ಪವಿತ್ರ ನದಿಯಾದ ಉತ್ತರ ಪ್ರದೇಶದ ಗಂಗಾ ನದಿ (Ganga River) ಜಲಾನಯನ ಪ್ರದೇಶದಲ್ಲಿ ದಶಕಗಳ ಕಾಲ ಕಾಣೆಯಾಗಿದ್ದ ಅತ್ಯಂತ ರುಚಿಕರ ಹಾಗೂ ಅಪರೂಪದ 'ಹಿಲ್ಸಾ' (Hilsa Fish) ಮೀನುಗಳು ಮತ್ತೆ ಪ್ರತ್ಯಕ್ಷವಾಗಿವೆ ಎಂದು ಇತ್ತೀಚೆಗೆ ವರದಿಯಾಗಿದೆ. ಸುಮಾರು ಅರ್ಧ ಶತಮಾನದ (50 ವರ್ಷಗಳು) ಸುದೀರ್ಘ ಕಾಯುವಿಕೆಯ ನಂತರ ಉತ್ತರ ಪ್ರದೇಶದ ಗಾಜಿಪುರ (Ghazipur) ಬಳಿ ಗಂಗಾ ನದಿಯಲ್ಲಿ ಹಿಲ್ಸಾ ಮೀನುಗಳು ಪತ್ತೆಯಾಗಿದ್ದು, ವಿಜ್ಞಾನಿಗಳು ಹಾಗೂ ಸ್ಥಳೀಯ ಮೀನುಗಾರರಲ್ಲಿ ಹೊಸ ಆಶಾದಾಯಕ ವಾತಾವರಣ ಮೂಡಿಸಿದೆ.