18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, ಇರಾನ್ ಅಧ್ಯಕ್ಷರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ನವದೆಹಲಿಯ 'ಬ್ರಿಕ್ಸ್ ಬಜಾರ್'ಗೆ ಭೇಟಿ ನೀಡಿದರು. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರೊಂದಿಗೆ ಭಾರತೀಯ ಕೈಮಗ್ಗ, ಕರಕುಶಲ ವಸ್ತುಗಳನ್ನು ವೀಕ್ಷಿಸಿದ ಅವರು, ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ರಾಜತಾಂತ್ರಿಕ ಹಾಗೂ ಗಂಭೀರ ಚರ್ಚೆಗಳ ನಡುವೆ ಅತ್ಯಂತ ಆಕರ್ಷಕ ಸಾಂಸ್ಕೃತಿಕ ಚಿತ್ರಣವೊಂದು ಹೊರಬಿದ್ದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ನವದೆಹಲಿಯ ರಾಷ್ಟ್ರೀಯ ಕರಕುಶಲ ವಸ್ತುಸಂಗ್ರಹಾಲಯದಲ್ಲಿ (ನ್ಯಾಷನಲ್ ಕ್ರಾಫ್ಟ್ಸ್ ಮ್ಯೂಸಿಯಂ) ಆಯೋಜಿಸಲಾಗಿದ್ದ "ಬ್ರಿಕ್ಸ್ ಬಜಾರ್"ಗೆ ಭೇಟಿ ನೀಡಿ ಭಾರತೀಯ ಕಲೆ ಮತ್ತು ಸಾಂಪ್ರದಾಯಿಕ ವೈಭವವನ್ನು ಕಣ್ಣುಂಬಿಕೊಂಡಿದ್ದಾರೆ.

ಪತಿ ಹಾಗೂ ಕೇಂದ್ರ ಸಚಿವರೊಂದಿಗೆ ರಾಯಲ್ ವಿಸಿಟ್!

ಜಹ್ರಾ ಪೆಜೆಶ್ಕಿಯಾನ್ ಅವರು ಬ್ರಿಕ್ಸ್ ಬಜಾರ್‌ಗೆ ತಮ್ಮ ಪತಿ ಹಸನ್ ಮಜಿದಿ ಅವರೊಂದಿಗೆ ಆಗಮಿಸಿದ್ದರು. ಭಾರತದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಜಹ್ರಾ ದಂಪತಿಯನ್ನು ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರೀತಿಯಿಂದ ಸ್ವಾಗತಿಸಿ, ವಸ್ತುಸಂಗ್ರಹಾಲಯದ ಪ್ರವಾಸಕ್ಕೆ ಕರೆದೊಯ್ದರು.

ಭಾರತೀಯ ಕೈಮಗ್ಗ ಹಾಗೂ ಕರಕುಶಲತೆಗೆ ಜಹ್ರಾ ಫಿದಾ!

ವಸ್ತುಸಂಗ್ರಹಾಲಯದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಜಹ್ರಾ, ಭಾರತೀಯ ಕೈಮಗ್ಗ ಉಡುಪುಗಳು, ಸಾಂಪ್ರದಾಯಿಕ ಜವಳಿ ವೈವಿಧ್ಯತೆ ಹಾಗೂ ಅಪರೂಪದ ಕುಂಬಾರಿಕೆ ಕಲೆಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಭಾರತದ ವೈವಿಧ್ಯಮಯ ಮಣ್ಣಿನ ಸಂಸ್ಕೃತಿ ಮತ್ತು ನೇಕಾರರ ವೈಭವಕ್ಕೆ ಅವರು ಸಂಪೂರ್ಣವಾಗಿ ಮಾರುಹೋದರು.

ಮುಕ್ತಕಂಠದಿಂದ ಶ್ಲಾಘನೆ!

ಇಷ್ಟೇ ಅಲ್ಲದೆ, ಶಾಪಿಂಗ್ ಮಾಡುವ ವೇಳೆ ಜಹ್ರಾ ಪೆಜೆಶ್ಕಿಯಾನ್ ಅವರು ಸ್ಥಳೀಯ ಕುಶಲಕರ್ಮಿಗಳೊಂದಿಗೆ ನೇರವಾಗಿ ಸಂವಹನ ನಡೆಸಿದರು. ಕಚ್ಚಾ ವಸ್ತುಗಳಿಂದ ಅತ್ಯಂತ ಸುಂದರ ಹಾಗೂ ಸೂಕ್ಷ್ಮವಾದ ಕಲಾಕೃತಿಗಳನ್ನು ಕೈಯಲ್ಲೇ ಹೇಗೆ ಸೃಷ್ಟಿಸಲಾಗುತ್ತದೆ ಎಂಬುದನ್ನು ಕುಶಲಕರ್ಮಿಗಳಿಂದಲೇ ಕೇಳಿ ತಿಳಿದುಕೊಂಡರು. ಭಾರತೀಯ ಆಟೋಮೆಟಿಕ್ ಮತ್ತು ಹ್ಯಾಂಡ್‌ಮೇಡ್ ಕಲಾವಿದರ ಕಠಿಣ ಪರಿಶ್ರಮ ಹಾಗೂ ಕೌಶಲವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಬ್ರಿಕ್ಸ್ ಬಜಾರ್ ಆಯೋಜನೆಯ ಹಿಂದಿನ ಉದ್ದೇಶ!

ಈ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಇಂತಹ ಬಜಾರ್‌ಗಳನ್ನು ಆಯೋಜಿಸುವುದರ ಮುಖ್ಯ ಉದ್ದೇಶ ಸದಸ್ಯ ರಾಷ್ಟ್ರಗಳ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದಾಗಿದೆ. ಭಾರತ, ಇರಾನ್ ಸೇರಿದಂತೆ ಹಲವು ಬ್ರಿಕ್ಸ್ ದೇಶಗಳ ವಿಶಿಷ್ಟ ಸಾಂಸ್ಕೃತಿಕ ಉತ್ಪನ್ನಗಳ ಸ್ಟಾಲ್‌ಗಳು ಇಲ್ಲಿ ಭಾಗವಹಿಸಿದ್ದು, ಇದು ದೇಶಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ನೆರವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್!

ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಜಹ್ರಾ ಅವರ ಭೇಟಿಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಜಹ್ರಾ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗುವುದು ಅತ್ಯಂತ ಸಂತೋಷ ತಂದಿದೆ. ಕಲೆ ಮತ್ತು ಕರಕುಶಲ ವಸ್ತುಗಳ ಈ ವೈಭವದ ಆಚರಣೆಯು ಬ್ರಿಕ್ಸ್ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಸಚಿವರು ಬರೆದುಕೊಂಡಿದ್ದಾರೆ.

ವೈರಲ್‌ ಆದ ಪೋಟೋಗಳು!

ಈ ವೈರಲ್ ಫೋಟೋಗಳಲ್ಲಿ ಜಹ್ರಾ ಪೆಜೆಶ್ಕಿಯಾನ್ ಅವರು ಭಾರತೀಯ ಪ್ರತಿಯೊಂದು ಸ್ಟಾಲ್‌ಗಳ ಉತ್ಪನ್ನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದು ಕಂಡುಬಂದಿದೆ. 18ನೇ ಬ್ರಿಕ್ಸ್ ಶೃಂಗಸಭೆಯ ಗಂಭೀರ ರಾಜಕೀಯ ಸಭೆಗಳ ನಡುವೆ ನಡೆದ ಈ ಸಾಂಸ್ಕೃತಿಕ ಪ್ರವಾಸವು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಬ್ರಿಕ್ಸ್ ಒಕ್ಕೂಟವು ಕೇವಲ ಅರ್ಥಶಾಸ್ತ್ರ ಅಥವಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ, ಕಲೆ ಮತ್ತು ಸಂಸ್ಕೃತಿಯ ಮೂಲಕವೂ ದೇಶಗಳನ್ನು ಒಂದಾಗಿಸುವ ವೇದಿಕೆಯಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.