ಭಾರತೀಯ ಕರೆನ್ಸಿಯಲ್ಲೇ ಸಾಲ ನೀಡಲಿದೆ ಬ್ರಿಕ್ಸ್ ಬ್ಯಾಂಕ್; ಅಕ್ಟೋಬರ್ ವೇಳೆಗೆ ಬರಲಿದೆ ರೂಪಾಯಿ ಬಾಂಡ್
ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಕ್ಸ್ ಸಮ್ಮೇಳನ ಇಂದಿನಿಂದ ಪ್ರಾರಂಭವಾಗಿದೆ. ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಸ್ಥಾಪಿಸಿದ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ (ಎನ್ ಡಿಬಿ) ಅಕ್ಟೋಬರ್ ವೇಳೆಗೆ ಭಾರತೀಯ ಕರೆನ್ಸಿಯಲ್ಲೇ ಸಾಲ ನೀಡಲು ಯೋಜನೆ ರೂಪಿಸುತ್ತಿದೆ.
ಜೋಹಾನ್ಸ್ ಬರ್ಗ್ (ಆ.22): ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಸ್ಥಾಪಿಸಿದ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ (ಎನ್ ಡಿಬಿ) ಮೊದಲ ಭಾರತೀಯ ರೂಪಾಯಿ ಬಾಂಡ್ ಅನ್ನು ಅಕ್ಟೋಬರ್ ವೇಳೆಗೆ ಬಿಡುಗಡೆಗೊಳಿಸಲು ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸೋಮವಾರ ಮಾಹಿತಿ ನೀಡಿದ್ದಾರೆ. ಸ್ಥಳೀಯ ಕರೆನ್ಸಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಒದಗಿಸುವಂತೆ ಬ್ಯಾಂಕ್ ಮೇಲೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ. ಎನ್ ಡಿಬಿ ತನ್ನ ಮೊದಲ ರ್ಯಾಂಡ್ ಬಾಂಡ್ ಅನ್ನು ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳಿಸಿತ್ತು. ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ ಹಾಗೂ ಯುಎಇಯಲ್ಲಿ ಕೂಡ ಸ್ಥಳೀಯ ಕರೆನ್ಸಿ ಬಿಡುಗಡೆ ಮಾಡುವ ಕುರಿತು ಯೋಚಿಸುತ್ತಿರೋದಾಗಿ ಸಿಒಒ ವ್ಲಾಡಿಮಿರ್ ಕಜ್ಬೇಕೌ ಜೋಹಾನ್ಸ್ ಬರ್ಗ್ ನಲ್ಲಿ ಇಂದಿನಿಂದ ನಡೆಯಲಿರುವ ಬ್ರಿಕ್ಸ್ ಬ್ರಿಕ್ಸ್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
2015ರಲ್ಲಿ ಸ್ಥಾಪನೆಗೊಂಡ ಎನ್ ಡಿಬಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಅತ್ಯಂತ ದೊಡ್ಡ ಸಾಧನೆ ಎಂದೇ ಹೇಳಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪ್ರತಿಸ್ಪರ್ಧೆ ನೀಡಲು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಜೊತೆಯಾಗಿ ಎನ್ ಡಿಬಿಯನ್ನು ಸ್ಥಾಪಿಸಿವೆ. ಈಗಾಗಲೇ ಸಾಲ ಕೊಳ್ಳುವಿಕೆ ಪ್ರಕ್ರಿಯೆ ನಿಧಾನಗತಿಯಲ್ಲಿದ್ದು, ರಷ್ಯಾದ ವಿರುದ್ಧದ ನಿರ್ಬಂಧಗಳು ಇದನ್ನು ಇನ್ನಷ್ಟು ತಗ್ಗಿಸಿವೆ ಕೂಡ. ಹೀಗಾಗಿ ರೂಪಾಯಿ ಮೂಲಕ ಭಾರತೀಯ ಮಾರುಕಟ್ಟೆಯನ್ನು ಅಕ್ಟೋಬರ್ ವೇಳೆಗೆ ಪ್ರವೇಶಿಸಲು ಎನ್ ಡಿಬಿ ಸಿದ್ಧತೆ ನಡೆಸಿದೆ ಎಂದು ಸಿಒಒ ತಿಳಿಸಿದ್ದಾರೆ.
ಆರ್ಥಿಕ ಹಿಂಜರಿತದತ್ತ ಚೀನಾ, ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯ ದೇಶದಲ್ಲಿ ಗಂಭೀರ ಬಿಕ್ಕಟ್ಟು
'ಒಂದು ಸದಸ್ಯ ರಾಷ್ಟ್ರದ ಕರೆನ್ಸಿಯನ್ನು ಇನ್ನೊಂದು ರಾಷ್ಟ್ರದಲ್ಲಿ ಅಲ್ಲಿನ ಕರೆನ್ಸಿ ಮೂಲಕ ಹಣಕಾಸು ಯೋಜನೆಗಳಿಗೆ ಬಳಸುವ ಬಗ್ಗೆ ಪ್ರಸ್ತುತ ನಾವು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದ್ದೇವೆ. ಉದಾಹರಣೆಗೆ ದಕ್ಷಿಣ ಆಫ್ರಿಕಾದಲ್ಲಿನ ಯೋಜನೆಯೊಂದಕ್ಕೆ ಅಮೆರಿಕದ ಡಾಲರ್ ಬದಲು ಚೀನಾದ ಯುಹಾನ್ ನಲ್ಲಿ ಹೂಡಿಕೆ ಮಾಡಲು ಯೋಚಿಸಿದ್ದೇವೆ' ಎಂದು ಎನ್ ಡಿಬಿ ಸಿಒಒ ಮಾಹಿತಿ ನೀಡಿದ್ದಾರೆ.
ಭಾರತೀಯ ರೂಪಾಯಿ ಬಾಂಡ್ ಕಾರ್ಯಕ್ರಮದ ಗುರಿ ಗಾತ್ರದ ಬಗ್ಗೆ ಮಾಹಿತಿ ನೀಡಲು ಎನ್ ಡಿಬಿ ಸಿಒಒ ನಿರಾಕರಿಸಿದ್ದಾರೆ. ಈ ಬಗ್ಗೆ ಹಿಂದೆಯೇ ವರದಿ ಮಾಡಿದ್ದ ರಾಯ್ಟರ್ಸ್ ಗುರಿ ನಿಗದಿಪಡಿಸುವ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿಯನ್ನು ಒದಗಿಸಿತ್ತು. ಸ್ಥಳೀಯ ಕರೆನ್ಸಿಗಳಲ್ಲಿ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ. ಇವುಗಳಲ್ಲಿ ಹೆಚ್ಚಿನ ಕರೆನ್ಸಿ ಚೈನೀಸ್ ಯುವಾನ್ ನಲ್ಲೇ ಇದೆ. 2026ರ ವೇಳೆಗೆ ಇದು ಶೇ.22ರಿಂದ ಶೇ.30ಕ್ಕೆ ಹೆಚ್ಚಳವಾಗಲಿದೆ ಎಂಬ ಮಾಹಿತಿಯನ್ನು ಕೂಡ ರಾಯ್ಟರ್ಸ್ ಗೆ ಬ್ಯಾಂಕ್ ನ ಮುಖ್ಯ ಹಣಕಾಸು ಅಧಿಕಾರಿ ಈ ಹಿಂದೆಯೇ ತಿಳಿಸಿದ್ದರು.
ಚಂದ್ರಯಾನ-3 ಲ್ಯಾಂಡಿಂಗ್ ಸಂಭ್ರಮಕ್ಕೆ ಇರೋದಿಲ್ಲ ಪ್ರಧಾನಿ ನರೇಂದ್ರ ಮೋದಿ!
ಕಲ್ಲಿದ್ದಲು ಇಂಧನದಿಂದ ನವೀಕರಿಸಬುದಾದ ಇಂಧನಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಎರಡು ವರ್ಷಗಳ ಹಿಂದೆ 3 ಬಿಲಿಯನ್ ಡಾಲರ್ ಹಣಕಾಸು ಒದಗಿಸಲು ಮಾಡಿದ ವಾಗ್ದಾನವನ್ನು ಪೂರ್ಣಗೊಳಿಸಲು ಎನ್ ಡಿಬಿ ಸಿದ್ಧವಿದೆ ಎಂದು ಎನ್ ಡಿಬಿ ಸಿಒಒ ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ಕೆ ಒದಗಿಸಲು ನಾವು ಈಗಲೂ ಬದ್ಧವಾಗಿದ್ದೇವೆ. ಅದಕ್ಕಾಗಿಯೇ ನಾವು ಈ ಸಂಬಂಧ ಪ್ರಾಜೆಕ್ಟ್ ಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ಬ್ರಿಕ್ಸ್ ಸಮ್ಮೇಳನ ಇಂದಿನಿಂದ ಆಗಸ್ಟ್ 24ರ ತನಕ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದಾರೆ ಕೂಡ.